More

    20ರಂದು ಸಂಚಾರ ಜಾಗೃತಿ ಅಭಿಯಾನ

    ದಾವಣಗೆರೆ : ನಗರದಲ್ಲಿ ಜಾರಿಗೊಳಿಸಿರುವ ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ ಕುರಿತು ಜಾಗೃತಿ ಅಭಿಯಾನವನ್ನು ಮಾ. 20ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಹೇಳಿದರು.
     ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಮಾರ್ಟ್‌ಸಿಟಿ ಲಿಮಿಟೆಡ್ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಇದನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
     ವಿವಿಧ ಶಾಲಾ ಕಾಲೇಜುಗಳ 40 ವಿದ್ಯಾರ್ಥಿಗಳನ್ನು ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳಲಾಗುವುದು. ಪೊಲೀಸರ ಜತೆಯಲ್ಲಿ ಆ ಮಕ್ಕಳೂ ಸಿಗ್ನಲ್ ಜಂಕ್ಷನ್‌ಗಳಲ್ಲಿ ನಿಂತು ಸಾರ್ವಜನಿಕರಿಗೆ ಸಂಚಾರ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.
     ನಗರದ 23 ಸಿಗ್ನಲ್‌ಗಳಲ್ಲಿ ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ ಜಾರಿಗೆ ತರಲಾಗಿದೆ. ಜಂಕ್ಷನ್‌ಗಳಲ್ಲಿ ವಾಹನಗಳ ಸಂಖ್ಯೆ ಕಡಿಮೆಯಿದ್ದರೆ ಕಾಯುವಿಕೆ ಅವಧಿ ಕಡಿಮೆಯಾಗುತ್ತದೆ ಎಂದು ಹೇಳಿದರು.
     ವಾಹನ ಸವಾರರು ಸಿಗ್ನಲ್‌ನಲ್ಲಿ ನಿಂತಾಗ ಕೆಂಪು ಬಣ್ಣದ ಲೈಟ್ ಹೋಗಿ ಹಸಿರು ದೀಪ ಬರುವುದಕ್ಕೆ 3-4 ಸೆಕೆಂಡ್ ವಿಳಂಬವಾಗುತ್ತದೆ. ಸಾರ್ವಜನಿಕರು ಹಸಿರು ಲೈಟ್ ಬಂದ ಮೇಲೆಯೇ ಅಲ್ಲಿಂದ ಹೊರಡಬೇಕು ಎಂದು ಮನವಿ ಮಾಡಿದರು.
     ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರೆಡ್ ಲೈಟ್ ವಯಲೇಷನ್ ಡಿಟೆಕ್ಷನ್ ವ್ಯವಸ್ಥೆ ಅಳವಡಿಸಲಾಗಿದ್ದು, ಸಿಗ್ನಲ್‌ನಲ್ಲಿ ಕೆಂಪು ದೀಪ ಇದ್ದಾಗ ನಿಯಮ ಉಲ್ಲಂಘಿಸಿ ಮುಂದೆ ಹೋದರೆ ದಂಡ ವಿಧಿಸಲಾಗುವುದು. ಇನ್ನೂ 9 ಜಂಕ್ಷನ್‌ಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದರು.
     ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುವವರನ್ನು ಪತ್ತೆ ಹಚ್ಚಲಾಗುವುದು. 2 ತಿಂಗಳಲ್ಲಿ ಆ ರೀತಿಯ 5 ಸಾವಿರ ಚಲನ್‌ಗಳಾಗಿವೆ ಎಂದು ಹೇಳಿದರು.
     ನಗರ ಹೊರ ವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಲೇನ್ ಡಿಸಿಪ್ಲಿನ್ ಜಾರಿಯಲ್ಲಿದೆ. ಇದುವರೆಗೆ 5 ಸಾವಿರ ಪ್ರಕರಣಗಳಲ್ಲಿ ದಂಡ ಹಾಕಲಾಗಿದೆ ಎಂದು ತಿಳಿಸಿದರು.
     ಹಳೇ ದಾವಣಗೆರೆಯಲ್ಲಿ ಅನ್‌ಲೋಡ್ ಮಾಡುವ ವಾಹನಗಳಿಂದಾಗಿ ಸಂಚಾರ ದಟ್ಟಣೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ 9 ರಿಂದ 11 ಗಂಟೆ, ಸಂಜೆ 4 ರಿಂದ 6 ಗಂಟೆಯ ವರೆಗೆ ಸರಕು ಸಾಗಣೆ ವಾಹನಗಳನ್ನು ನಿಲ್ಲಿಸದಂತೆ ಕ್ರಮ ಕೈಗೊಳ್ಳುವ ಕುರಿತು ಜಿಲ್ಲಾಧಿಕಾರಿಗೆ ಪ್ರಸ್ತಾವನೆಯೊಂದನ್ನು ಸಲ್ಲಿಸಲಾಗಿದ್ದು ಮೂರ್ನಾಲ್ಕು ದಿನಗಳಲ್ಲಿ ಆದೇಶ ಬರುವ ಸಾಧ್ಯತೆಯಿದೆ ಎಂದು ಹೇಳಿದರು.
     ಸ್ಮಾರ್ಟ್‌ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ವೀರೇಶ ಕುಮಾರ್, ಪ್ರಧಾನ ವ್ಯವಸ್ಥಾಪಕ ಎಸ್.ಕೆ. ಚಂದ್ರಶೇಖರ್, ಉಪ ಪ್ರಧಾನ ವ್ಯವಸ್ಥಾಪಕಿ ಮಮತಾ ಸುದ್ದಿಗೋಷ್ಠಿಯಲ್ಲಿದ್ದರು.
     …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts