More

    ತಂತ್ರಜ್ಞಾನದಲ್ಲಿ ವೇಗದ ಹೆಜ್ಜೆ ಇಡುತ್ತಿರುವ ಭಾರತ

    ದಾವಣಗೆರೆ : ಯುವಶಕ್ತಿಯ ಪರಿಶ್ರಮ, ಹೊಸ ಆವಿಷ್ಕಾರಗಳ ಪರಿಣಾಮವಾಗಿ ಭಾರತ ವಿಶ್ವದ ವಿವಿಧ ದೇಶಗಳು, ಕಂಪನಿಗಳು ಮತ್ತು ಗ್ರಾಹಕರಿಗಾಗಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಮಟ್ಟಕ್ಕೆ ವೇಗವಾಗಿ ಬೆಳೆಯುತ್ತಿದೆ ಎಂದು ಕೇಂದ್ರದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.
    ನಗರದ ಜೆ.ಎಚ್. ಪಟೇಲ್ ಬಡಾವಣೆಯಲ್ಲಿ ಶುಕ್ರವಾರ, ರಾಜ್ಯದ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾದ 5ನೇ ಉಪ ಕೇಂದ್ರವನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದರು.
    ಪ್ರಧಾನಿ ಮೋದಿ ಅವರು ತೆಗೆದುಕೊಂಡ ನಿರ್ಧಾರಗಳ ಪರಿಣಾಮವಾಗಿ ಕಳೆದ ಐದಾರು ವರ್ಷಗಳ ಅವಧಿಯಲ್ಲಿ ಭಾರತದ ಯುವಕರು ತಮ್ಮ ಸ್ಟಾರ್ಟಪ್ ಕಂಪನಿಗಳು, ಆವಿಷ್ಕಾರಗಳು ಮತ್ತು ಸಾಮರ್ಥ್ಯದ ಮೂಲಕ ಜಾಗತಿಕವಾಗಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು.
    ಕಳೆದ 3 ವರ್ಷಗಳಲ್ಲಿ ಭಾರತ ಆವಿಷ್ಕಾರದಲ್ಲಿ ಅತ್ಯಂತ ವೇಗದ ಹೆಜ್ಜೆಗಳನ್ನಿಡುತ್ತಿದೆ. 104 ಯುನಿಕಾನ್‌ಗಳು, 75 ಸಾವಿರ ಸ್ಟಾರ್ಟಪ್‌ಗಳಾಗಿವೆ. ಈ ಜಾಲವನ್ನು ವಿಸ್ತರಿಸುವ ಕೆಲಸ ಮುಂದುವರಿಯಲಿದೆ ಎಂದರು.
    2014 ರಲ್ಲಿ ಶೇ. 92 ರಷ್ಟು ಮೊಬೈಲ್ ಫೋನ್‌ಗಳನ್ನು ನಮ್ಮ ದೇಶಕ್ಕೆ ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ಶೇ. 97ರಷ್ಟು ಮೊಬೈಲ್ ಫೋನ್‌ಗಳನ್ನು ಭಾರತದಲ್ಲೇ ಉತ್ಪಾದಿಸಲಾಗುತ್ತಿದೆ. ಅವುಗಳ ರಫ್ತು ಪ್ರಮಾಣ ಶೂನ್ಯದಿಂದ 70 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಾಗಿದೆ. ಭಾರತದಲ್ಲಿ ತಯಾರಾದ ಮೊಬೈಲ್ ಫೋನ್‌ಗಳನ್ನು ಅಮೆರಿಕ, ಯುರೋಪ್, ಆಫ್ರಿಕಾ ಮತ್ತು ಏಷ್ಯಾದ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ ಎಂದು ವಿವರಿಸಿದರು.
    ಡಿಜಿಟಲ್ ಮತ್ತು ತಂತ್ರಜ್ಞಾನದ ಅವಕಾಶಗಳು ದೊಡ್ಡ ನಗರಗಳಿಗೆ ಸೀಮಿತವಾಗದೇ ಸಣ್ಣ ಪುಟ್ಟ ನಗರ, ಪಟ್ಟಣಗಳ ಯುವಜನರನ್ನೂ ತಲುಪಬೇಕು ಎಂಬ ದೂರದೃಷ್ಟಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
    ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ‘ಬಿಯಾಂಡ್ ಬೆಂಗಳೂರು’ ಎಂಬ ಕಾರ್ಯಕ್ರಮವನ್ನು ರೂಪಿಸಿದ್ದು ಅದಕ್ಕೆ ಕೇಂದ್ರ ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತಿದೆ. ಪರಿಣಾಮವಾಗಿ ಸ್ಟಾರ್ಟಪ್‌ಗಳು, ತಂತ್ರಜ್ಞಾನ ಕೇಂದ್ರಗಳು, ಹೊಸ ಆವಿಷ್ಕಾರಗಳನ್ನು ಸಣ್ಣ ನಗರಗಳಿಗೂ ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದರು.
    ಈಗ ದಾವಣಗೆರೆಯಲ್ಲಿ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾದ ಉಪ ಕೇಂದ್ರ ಆರಂಭವಾಗಿದ್ದು ಸ್ಥಳೀಯ ಯುವಜನರು ಇದರ ಲಾಭ ಪಡೆದುಕೊಂಡು ಯಶಸ್ವಿಯಾಗಬೇಕು. ಸರ್ಕಾರ ಅವರಿಗೆ ಬೆಂಬಲವಾಗಿ ನಿಲ್ಲಲಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts