More

    ವಿಜ್ಞಾನ, ಸಂಶೋಧನೆಯ ಫಲ ತಲುಪಲಿ ಹಳ್ಳಿಗಳಿಗೆ

    ದಾವಣಗೆರೆ:ವಿಜ್ಞಾನ ಮತ್ತು ಸಂಶೋಧನೆಯ ಫಲ ಗ್ರಾಮೀಣ ಜನರಿಗೆ ತಲುಪಿಸಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಡಿ. ಕುಂಬಾರ್ ಹೇಳಿದರು.
    ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ, ವಿಜ್ಞಾನ ಪ್ರಗತಿಗೆ ಕರ್ನಾಟಕ ಸಂಸ್ಥೆಯ ದಾವಣಗೆರೆ ಶಾಖೆಯ ಉದ್ಘಾಟನೆ ಮತ್ತು ವಿಶೇಷ ಉಪನ್ಯಾಸ ಸಮಾರಂಭದಲ್ಲಿ ಮಾತನಾಡಿದರು.
    ಗ್ರಾಮೀಣ ಜನರ ಅಭಿವೃದ್ಧಿಯಲ್ಲಿ ದೇಶದ ಪ್ರಗತಿ ಅಡಗಿದೆ. ಭಾರತ ಅಭಿವೃದ್ಧಿ ಹೊಂದಿದ ದೇಶವಾಗುತ್ತಿದೆ ಎಂದು ನಾಲ್ಕೈದು ದಶಕಗಳಿಂದ ಕೇಳುತ್ತಿದ್ದೇವೆ, ಆದರೆ ಆ ಗುರಿಯನ್ನು ಇನ್ನೂ ಸಾಧಿಸಿಲ್ಲ ಎಂದು ತಿಳಿಸಿದರು.
    ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗೆ ಸಾಕಷ್ಟು ಅವಕಾಶಗಳಿವೆ, ಯುವ ವಿಜ್ಞಾನಿಗಳಿಗೆ ಪ್ರೋತ್ಸಾಹಿಸಿ ನೆರವಾದರೆ ಅವರಿಂದ ಉತ್ತಮ ಕಾರ್ಯಗಳು ಆಗಲಿವೆ. ನೋಬೆಲ್ ಪುರಸ್ಕಾರ ಪಡೆಯುವಷ್ಟು ಎತ್ತರಕ್ಕೆ ಅವರು ಬೆಳೆಯುವಂತಾಗಬೇಕು ಎಂದು ಆಶಿಸಿದರು.
    ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಯಾಗಬೇಕಿದೆ. ಅಮೆರಿಕದಲ್ಲಿ ತಿರಸ್ಕರಿಸಿದ ಕೆಲವು ಔಷಧಗಳನ್ನು ಭಾರತದಲ್ಲಿ ಬಳಸುತ್ತಿದ್ದೇವೆ. ಇಂಥ ಗಂಭೀರ ವಿಚಾರಗಳ ಕಡೆಗೆ ಗಮನ ಹರಿಸಬೇಕಿದೆ. ಆದರೆ ಕೋವಿಡ್ ಸಂದರ್ಭದಲ್ಲಿ ನಮ್ಮ ವಿಜ್ಞಾನಿಗಳು ಲಸಿಕೆ ಅಭಿವೃದ್ಧಿಪಡಿಸಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ ಎಂದು ತಿಳಿಸಿದರು.
    ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ. ಸಿದ್ದಪ್ಪ ಮಾತನಾಡಿ, ವಿಜ್ಞಾನ ಪ್ರಗತಿಗೆ ಕರ್ನಾಟಕ ಸಂಸ್ಥೆಯು 4 ದಶಕಗಳಿಂದ ವಿಜ್ಞಾನದ ಪ್ರಗತಿಗಾಗಿ ಶ್ರಮಿಸುತ್ತಿದೆ. ಬೆಂಗಳೂರಿಗೆ ಸೀಮಿತವಾಗಿದ್ದ ಈ ಕೇಂದ್ರವನ್ನು ರಾಜ್ಯದ ವಿವಿಧೆಡೆಗೆ ವಿಸ್ತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts