More

    ದೂಡಾಗೆ ಜಮೀನು ನೀಡದಿರಲು ರೈತರ ನಿರ್ಧಾರ

    ದಾವಣಗೆರೆ : ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಹಳೇ ಕುಂದುವಾಡದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಬಡಾವಣೆಗಾಗಿ ತಮ್ಮ ಜಮೀನುಗಳನ್ನು ನೀಡದಿರಲು ರೈತರು ನಿರ್ಧರಿಸಿದ್ದಾರೆ.
    ಈ ವಿಚಾರವಾಗಿ ಸರ್ಕಾರದ ಜತೆಗೆ ವ್ಯವಹಾರ ಮಾಡುವುದಿಲ್ಲ. ರಕ್ತ ಕೊಡುತ್ತೇವೆ ಹೊರತು ಒಂದು ಗುಂಟೆ ಜಮೀನನ್ನೂ ನೀಡುವುದಿಲ್ಲ. ಅಗತ್ಯವಾದರೆ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
    ಮೂರು ವರ್ಷಗಳ ಹಿಂದೆ ದೂಡಾದವರು ಜಮೀನು ಖರೀದಿಸುವ ಪ್ರಸ್ತಾಪ ಮುಂದಿಟ್ಟರು. 3 ತಿಂಗಳಲ್ಲಿ ಒಂದೇ ಬಾರಿಗೆ ಹಣ ಪಾವತಿ ಮಾಡುವುದಾಗಿ ಭರವಸೆ ನೀಡಿದರು. ಆದರೆ ಒಂದೂವರೆ ವರ್ಷ ಕಳೆದರೂ ಯಾವುದೇ ಬೆಳವಣಿಗೆ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
    ಈ ಹಿಂದೆ ಮಹಾಂತೇಶ ಬೀಳಗಿ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ಎಕರೆಗೆ 1.28 ಕೋಟಿ ರೂ. ಮತ್ತು ಒಂದು ನಿವೇಶನ ನೀಡುವುದಾಗಿ ಹೇಳಿದರು. ಅದಾಗಿ 2 ತಿಂಗಳು ಕಳೆದರೂ ಕ್ರಮ ಕೈಗೊಳ್ಳಲಿಲ್ಲ ಎಂದು ತಿಳಿಸಿದರು.
    ಸರ್ಕಾರದ ವರ್ತನೆಯಿಂದ ರೋಸಿ ಹೋಗಿದ್ದೇವೆ. ಇನ್ನು ಯಾವ ಕಾರಣಕ್ಕೂ ಸರ್ಕಾರಕ್ಕೆ ಜಮೀನು ನೀಡುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದೇವೆ ಎಂದರು.
    ಇರುವ ಭೂಮಿಯನ್ನು ಕಳೆದುಕೊಂಡರೆ ಬೇರೆ ಕಡೆ ಜಮೀನು ಸಿಗುವುದು ಕಷ್ಟವಿದೆ. 3 ವರ್ಷಗಳ ಹಿಂದಿನ ದಿನಗಳಿಗೆ ಹೋಲಿಸಿದರೆ ಈಗ ಬೆಲೆ ದುಬಾರಿಯಾಗಿದೆ ಎಂದು ಹೇಳಿದರು.
    ಮೂರು ವರ್ಷದ ಹಿಂದೆ ಮಾಡಿದ್ದ ಪ್ರಸ್ತಾಪ ಇಟ್ಟುಕೊಂಡು ಈಗ ಜಮೀನು ಖರೀದಿಸಿದರೆ ಹೇಗೆ?, ಹಾಗಾದರೆ ಇಲ್ಲಿನ ಜೆ.ಎಚ್. ಪಟೇಲ್ ಬಡಾವಣೆಯಲ್ಲಿರುವ ದೂಡಾ ನಿವೇಶನಗಳನ್ನು 3 ವರ್ಷದ ಹಿಂದಿನ ದರಕ್ಕೆ ನಮಗೆ ನೀಡುತ್ತಾರೆಯೆ ಎಂದು ಪ್ರಶ್ನಿಸಿದರು.
    ನಾವು ಜಮೀನು ನೀಡುವುದಿಲ್ಲ, ಈ ಪ್ರಕ್ರಿಯೆ ಕೈಬಿಡಿ ಎಂದು ಮೇ 31 ರಂದೇ ದೂಡಾ ಆಯುಕ್ತರಿಗೆ ಮನವಿ ಮಾಡಿದ್ದೆವು. ಸೆ. 5 ರಂದು ದೂಡಾ, ಉಪ ವಿಭಾಗಾಧಿಕಾರಿ ಹಾಗೂ ಭೂಸ್ವಾಧೀನಾಧಿಕಾರಿಗೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದೇವೆ. ಈ ವಿಚಾರ ತಿಳಿದಿದ್ದರೂ ದೂಡಾದವರು ಮೊಂಡುತನದಿಂದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ವ್ಯರ್ಥ ಪ್ರಯತ್ನ ಮುಂದುವರಿಸಿದ್ದಾರೆ ಎಂದು ದೂರಿದರು.
    ಗ್ರಾಮದ ರೈತರಾದ ಎನ್. ಮಲ್ಲಿಕಾರ್ಜುನ, ಎಚ್. ಸೋಮಶೇಖರ್, ಎಚ್.ಎನ್. ಗುರುನಾಥ್, ಎಚ್.ಜಿ. ಗಣೇಶಪ್ಪ, ಶಿವಣ್ಣ, ಜೆ.ಆರ್. ಮಹಾಂತೇಶ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts