More

    ಜಿಲ್ಲೆಯಲ್ಲಿ ‘ಯುವನಿಧಿ’ ಯೋಜನೆಗೆ ಚಾಲನೆ

    ದಾವಣಗೆರೆ : ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ಯೋಜನೆಯಾದ ‘ಯುವನಿಧಿ’ಯ ಪ್ರಯೋಜನವನ್ನು ಜಿಲ್ಲೆಯ ಫಲಾನುಭವಿ ಯುವಕ ಯುವತಿಯರು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಮನವಿ ಮಾಡಿದರು.
     ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಯುವನಿಧಿ ಯೋಜನೆಯ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.
     ರಾಜ್ಯ ಸರ್ಕಾರ ಜನರಿಗಾಗಿ 5 ಕಲ್ಯಾಣ ಕಾರ್ಯಕ್ರಮಗಳನ್ನು ಘೋಷಿಸಿತ್ತು. ಅವುಗಳಲ್ಲಿ 4 ಯಶಸ್ವಿಯಾಗಿ ಅನುಷ್ಠಾನವಾಗಿವೆ. 5ನೆಯದಾಗಿ ಯುವನಿಧಿ ಯೋಜನೆಯು ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಅನುಷ್ಠಾನವಾಗುತ್ತಿದೆ ಎಂದು ತಿಳಿಸಿದರು.
     ಪದವಿ ಮತ್ತು ಡಿಪ್ಲೊಮಾ ಪಡೆದು ನಿರುದ್ಯೋಗಿಯಾಗಿದ್ದರಿಗೆ ಸರ್ಕಾರದ ನೆರವು ನೀಡುವುದು ಯೋಜನೆಯ ಉದ್ದೇಶವಾಗಿದೆ. ಅವರು 2023ರಲ್ಲಿ ಪದವಿ ಪಡೆದಿರಬೇಕು. 6 ತಿಂಗಳ ಒಳಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಡಿಪ್ಲೊಮಾ ಮಾಡಿದವರಿಗೆ 1500 ರೂ, ಪದವಿ ಪಡೆದವರಿಗೆ 3 ಸಾವಿರ ರೂ.ಗಳನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುವುದು ಎಂದು ಹೇಳಿದರು.
     ಫಲಾನುಭವಿಗಳು 6 ವರ್ಷಗಳಿಂದ ಕರ್ನಾಟಕದ ನಿವಾಸಿಯಾಗಿರಬೇಕು. ರಾಜ್ಯದ ಶಿಕ್ಷಣ ಸಂಸ್ಥೆಗಳಿಂದ ಪದವಿ ಪಡೆದಿರಬೇಕು. ಅರ್ಹ ಫಲಾನುಭವಿಗಳು ಸೇವಾ ಸಿಂಧು, ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವೇಳೆ ವಿಳಾಸ, ವಯಸ್ಸು, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆಯ ಸಂಖ್ಯೆಯ ದಾಖಲೆಗಳನ್ನು ನೀಡಬೇಕಾಗುತ್ತದೆ ಎಂದು ತಿಳಿಸಿದರು.
     ಫಲಾನುಭವಿಗಳ ದಾಖಲೆಗಳನ್ನು ಪರಿಶೀಲಿಸಲಾಗುವುದು. ಪದವಿಯ ನಂತರ ಓದು ಮುಂದುವರಿಸುವವರಿಗೆ ಇದು ಅನ್ವಯಿಸುವುದಿಲ್ಲ. ಯುವಕ, ಯುವತಿಯರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಹೇಳಿದರು.
     ಜಿಲ್ಲೆಯ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿದೆ. 2023ರಲ್ಲಿ ಡಿಪ್ಲೊಮಾ ಮಾಡಿದವರು, ಬಿಎ, ಬಿಎಸ್‌ಸಿ, ಬಿಕಾಂ, ಇಂಜಿನಿಯರಿಂಗ್ ಹೀಗೆ ಯಾವುದೇ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಫಲಾನುಭವಿಗಳು ಪ್ರತಿ ತಿಂಗಳು ಅವರು ಯಾವುದೇ ಉದ್ಯೋಗದಲ್ಲಿ ಇಲ್ಲ ಎಂಬ ಮಾಹಿತಿಯನ್ನು ಕಳಿಸಬೇಕಾಗುತ್ತದೆ. ಈ ಯೋಜನೆಯು 2 ವರ್ಷಗಳ ವರೆಗೆ ಇರುತ್ತದೆ ಎಂದು ತಿಳಿಸಿದರು.
     ಜಿಲ್ಲೆಯಲ್ಲಿ ಸಚಿವರ ಸೂಚನೆಯಂತೆ ಪ್ರತಿ 3 ತಿಂಗಳಿಗೊಮ್ಮೆ ಉದ್ಯೋಗ ಮೇಳ ಆಯೋಜಿಸಲಾಗುವುದು. ಕಳೆದ ಬಾರಿ ನಡೆಸಿದ ಉದ್ಯೋಗ ಮೇಳದಲ್ಲಿ 750 ಜನರಿಗೆ ಕೆಲಸ ಸಿಕ್ಕಿದೆ. ಜನವರಿಯಲ್ಲಿ ಮತ್ತೊಂದು ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗುವುದು. ಆಗ ಯುವನಿಧಿ ಯೋಜನೆಯ ಫಲಾನುಭವಿಗಳನ್ನೂ ಕರೆಸಿ ಅವರು ಉದ್ಯೋಗ ಪಡೆದುಕೊಳ್ಳಲು ವೇದಿಕೆ ಕಲ್ಪಿಸಲಾಗುವುದು ಎಂದು ಹೇಳಿದರು.
     ಯುವನಿಧಿ ಯೋಜನೆಯ ವ್ಯಾಪ್ತಿಗೆ ಜಿಲ್ಲೆಯಲ್ಲಿ 5 ಸಾವಿರ ಫಲಾನುಭವಿಗಳು ಬರಬಹುದು ಎಂದು ಅಂದಾಜಿಸಲಾಗಿದೆ. ಪೋರ್ಟಲ್‌ಗಳ ಮೂಲಕ ಅರ್ಜಿಗಳು ಸಲ್ಲಿಕೆಯಾದಾಗ ನಿಖರ ಮಾಹಿತಿ ದೊರೆಯಲಿದೆ. ಕೌಶಲಾಭಿವೃದ್ಧಿ ಇಲಾಖೆ ಅಡಿಯಲ್ಲಿ 500ಕ್ಕೂ ಹೆಚ್ಚು ಕೌಶಲಗಳಿದ್ದು ನಿರುದ್ಯೋಗಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
     ಜಿಲ್ಲಾ ಆರೋಗ್ಯಾಧಿಕಾರಿ ಡಾ. ಷಣ್ಮುಖಪ್ಪ, ಕೌಶಲಾಭಿವೃದ್ಧಿ ಇಲಾಖೆ ಅಧಿಕಾರಿ ಬಸನಗೌಡ, ಜಿಲ್ಲಾ ಉದ್ಯೋಗ ಅಧಿಕಾರಿ ರವೀಂದ್ರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts