More

    ಜಿಲ್ಲಾ ಪೊಲೀಸರ ಆನೆಬಲ ಸಾಹಸಿ ‘ತುಂಗಾ’

    ಡಿ.ಎಂ.ಮಹೇಶ್ ದಾವಣಗೆರೆ
    ಆರೋಪಿತರ ಪತ್ತೆ, ಬಾಂಬ್ ನಿಷ್ಕ್ರಿಯಗೊಳಿಸುವ ಕಾರ್ಯದಲ್ಲಿ ಪೊಲೀಸ್ ಶ್ವಾನ ದಳದ ಪಾತ್ರ ಗಣನೀಯ. ಅದೆಷ್ಟೋ ಕೇಸ್‌ಗಳಲ್ಲಿ ಸಿಬ್ಬಂದಿಗೂ ಮೀರಿದ ಸಾಹಸ ಪ್ರದರ್ಶಿಸಿದ ಪೊಲೀಸ್ ಶ್ವಾನಗಳು ಇಲಾಖೆಗೆ ನೆರವಾಗಿವೆ.

    ಜಿಲ್ಲಾ ಪೊಲೀಸ್ ಇಲಾಖೆಯಲ್ಲೂ ಇಂಥ ಶ್ವಾನಗಳುಂಟು. ಅವುಗಳಲ್ಲಿ ಮೇಲ್ಪಂಕ್ತಿಯಲ್ಲಿರುವ ಹೆಸರೇ ತುಂಗಾ! ಕಳೆದ ಒಂಬತ್ತು ವರ್ಷದಲ್ಲಿ ಭೇದಿಸಿದ 30 ಕೊಲೆ, 25 ಕಳವು, 5 ದರೋಡೆ ಪ್ರಕರಣಗಳೇ ಶ್ವಾನದ ಅನುಭವಕ್ಕೆ ಸಾಕ್ಷಿ.

    ಟ್ರಾೃಕರ್ ಅಥವಾ ಕ್ರೈಂ ಡಾಗ್ ಎಂದೇ ಕರೆಯಲ್ಪಡುವ ಈ ಲೇಡಿ ಡಿಟೆಕ್ಟರ್‌ಗೆ ಒಂಬತ್ತು ವರ್ಷ ವಯಸ್ಸು. ಆದಾಗ್ಯೂ ಕಾಲುಗಳು ನಿಸ್ತೇಜವಾಗಿಲ್ಲ. ಮೂಗು- ಕಣ್ಣು, ಬುದ್ಧಿ ಮಂಕಾಗಿಲ್ಲ. ಈ ಚುರುಕಿನ ಶ್ವಾನವೇ ಜಿಲ್ಲಾ ಪೊಲೀಸ್ ಇಲಾಖೆಗೆ ಆನೆಬಲ!

    ಬೆಂಗಳೂರಿನ ಆಡಗೋಡಿಯಿಂದ 2011ರಲ್ಲಿ ಜಿಲ್ಲಾ ಪೊಲೀಸ್ ಶ್ವಾನದಳದ ಗುಂಪಿಗೆ ಸೇರಿದ್ದ ಈ ಶ್ವಾನಕ್ಕೆ ಆಗಿನ ಎಸ್ಪಿ ಸಂದೀಪ್ ಪಾಟೀಲ್ ಇಟ್ಟ ಹೆಸರೇ ತುಂಗಾ. ಅಮೆರಿಕನ್ ಮೂಲದ ಡಾಬರ್‌ಮನ್ ಪಿಂಟರ್ ತಳಿಯ ಈ ಶ್ವಾನಕ್ಕೆ ಸಿಕ್ಕ ನಿತ್ಯ ತರಬೇತಿಯೇ ಪತ್ತೇದಾರಿಕೆಗೆ ಜೀವಾಳ.
    ಸೂಳೆಕೆರೆ ಗುಡ್ಡದಲ್ಲಿ ಇತ್ತೀಚೆಗೆ ನಡೆದಿದ್ದ ಯುವಕನ ಶೂಟೌಟ್ ಪ್ರಕರಣದಲ್ಲಿ ಕಡಿದಾದ ದುರ್ಗಮ ಪ್ರದೇಶದಲ್ಲಿ 11 ಕಿ.ಮೀ ದಾಖಲೆಯ ದೂರ ಕ್ರಮಿಸಿ, ಗಾಳಿಯಲ್ಲಿ ಹರಡಿದ ಆರೋಪಿಯ ಬೆವರ ವಾಸನೆ ಒಂದರಿಂದಲೇ ಜಾಡನ್ನು ಪತ್ತೆ ಹಚ್ಚಿದ್ದು ಇದೇ ತುಂಗಾ.

    ಚನ್ನಗಿರಿ ಠಾಣೆ ವ್ಯಾಪ್ತಿಯಲ್ಲಿ 2017ರಲ್ಲಿ ಮನೆಯೊಂದರ ಬಚ್ಚಲುಮನೆಯ ಇಂಗುಗುಂಡಿಯಲ್ಲಿ ಹತ್ಯೆ ಮಾಡಿ, ಶವವನ್ನು ಹೂತು ಹಾಕಲಾಗಿತ್ತು. ಹತ್ಯೆಯಾದವನ ಪತ್ನಿ ಹಾಗೂ ಪ್ರಿಯಕರನ ನಿಯೋಜಿತ ಸಂಚನ್ನು ತುಂಗಾ ಬಯಲು ಮಾಡಿದ್ದಳು!

    ಭಾನುವಳ್ಳಿಯ ಕುರಿಗಾಹಿ ಕೊಲೆ, ಹರಿಹರ ತಾಲೂಕಿನ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ, ಹೊನ್ನಾಳಿ ತಾಲೂಕು ಗೊಲ್ಲರಹಟ್ಟಿ ಗ್ರಾಮದಲ್ಲಿ ವೃದ್ಧೆ ಹತ್ಯೆ, ಹರಪನಹಳ್ಳಿ ತಾಲೂಕು ಹುಲಿಕಟ್ಟೆ ಗುಡ್ಡದಲ್ಲಿ ನಡೆದ ಕೊಲೆ ಕೇಸ್‌ಗಳ ತನಿಖೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದ ತುಂಗಾ, ಅಪರಾಧಿಗಳಿಗೆ ಗಲ್ಲು, ಜೀವಾವಧಿ ಶಿಕ್ಷೆ ಸಿಗಲು ಅಸಲಿ ರೂವಾರಿ.

    2000ರಲ್ಲಿ ಸಶಸ್ತ್ರ ಮೀಸಲುಪಡೆ ಅಧೀನದಲ್ಲಿ ಆರಂಭವಾದ ಶ್ವಾನದಳದಲ್ಲೀಗ 4 ಶ್ವಾನಗಳಿವೆ. ಪೂಜಾ ಹೆಸರಿನ ಜರ್ಮನ್ ಷೆಫರ್ಡ್ ತಳಿಯ ಶ್ವಾನ ಅನೇಕ ಕೇಸ್‌ಗಳನ್ನು ಪತ್ತೆ ಹಚ್ಚಿದೆ. ಬಾಂಬ್ ನಿಷ್ಕ್ರಿಯಗೊಳಿಸಲೆಂದೇ ಲ್ಯಾಬ್ರೊಡಾರ್ ತಳಿಯ ಎರಡು ಸ್ನೀಫರ್ ಡಾಗ್ ಇವೆ.

    ತುಂಗಾ ಶ್ವಾನ ಮಾಡಿದ ಸಾಧನೆ ಜಿಲ್ಲಾ ಪೊಲೀಸರಿಗೆ, ಸಶಸ್ತ್ರ ಮೀಸಲು ಪಡೆಗೆ ಗೌರವ ಹೆಚ್ಚಿಸಿದೆ. ಇತ್ತೀಚೆಗೆ ಎಡಿಜಿಪಿ ಡಾ.ಅಮರ್‌ಕುಮಾರ್ ಪಾಂಡೆ ಅವರು ಶ್ವಾನಕ್ಕೆ ಆತ್ಮೀಯವಾಗಿ ಗೌರವಿಸಿದ್ದು ನಮಗೂ ಹೆಮ್ಮೆ ಎನಿಸಿದೆ. ಇದರಿಂದ ಶ್ವಾನದಳದ ಸಿಬ್ಬಂದಿಗೆ ಮತ್ತಷ್ಟು ನಿಷ್ಠೆ, ಕರ್ತವ್ಯಕ್ಕೆ ಸಹಕಾರಿಯಾಗಿದೆ.
    > ಎಸ್.ಎನ್.ಕಿರಣ್‌ಕುಮಾರ್ ಡಿಎಆರ್‌ನ ರಿಸರ್ವ್ ಪೊಲೀಸ್ ಇನ್ಸ್‌ಪೆಕ್ಟರ್

    ತುಂಗಾ ತುಂಬಾ ಸೂಕ್ಷ್ಮಜೀವಿ. ಹೆಚ್ಚಿನ ವಯಸ್ಸಾಗಿದ್ದರೂ ಸುಸ್ತಾದರೂ ಆರೋಪಿಯನ್ನು ಪತ್ತೆ ಹಚ್ಚುವ ಛಲಗಾತಿ. ನಿತ್ಯ ಬೆಳಗ್ಗೆ ಮೂರು ತಾಸು ಅದಕ್ಕೆ ತರಬೇತಿ ನೀಡುತ್ತೇನೆ. ಇಲಾಖೆ ಮಾರ್ಗಸೂಚಿಯಂತೆ ಶ್ವಾನಗಳಿಗೆ ಆಹಾರ ನೀಡಲಾಗುತ್ತಿದೆ.
    > ಕೆ.ಎಂ.ಪ್ರಕಾಶ್ ಶ್ವಾನದಳದ ಮುಖ್ಯಪೇದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts