More

    ದಾವಣಗೆರೆ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಕಲ್ಪ

    ದಾವಣಗೆರೆ : ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶಗಳಿದ್ದು ಈ ಸಂಬಂಧ ಉದ್ಯಮಿಗಳು, ಆಸಕ್ತರು ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದರು.
     ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ನಗರದ ಎಸ್.ಎಸ್. ಕನ್‌ವೆನ್ಷನ್ ಸೆಂಟರ್‌ನ ಪಾರ್ವತಿ ಪರ್ಲ್ ಮಿನಿ ಹಾಲ್‌ನಲ್ಲಿ ಬುಧವಾರ, ಪ್ರವಾಸೋದ್ಯಮ ನೀತಿಯಲ್ಲಿ ಲಭ್ಯವಿರುವ ಇಲಾಖೆಯ ಯೋಜನೆಗಳ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
     ಜಿಲ್ಲೆಯಲ್ಲಿ ಹೋಮ್ ಸ್ಟೇ, ಸಾಹಸ ಪ್ರವಾಸೋದ್ಯಮ, ಹೋಟೆಲ್, ರೆಸಾರ್ಟ್‌ಗಳನ್ನು ಮಾಡುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಬೇಕಿದೆ. ಈ ನಿಟ್ಟಿನಲ್ಲಿ ಹೂಡಿಕೆದಾರರು ಮುಂದೆ ಬರಬೇಕು. ಇದರಿಂದ ಜಿಲ್ಲೆಯ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಬೆಳವಣಿಗೆಯಾಗಲಿದೆ. ಕೇರಳ, ಗೋವಾ, ಯುರೋಪ್‌ನ ಕೆಲವು ದೇಶಗಳಲ್ಲಿ ಶೇ. 90ಕ್ಕಿಂತ ಹೆಚ್ಚು ಜಿಡಿಪಿ ಪ್ರವಾಸೋದ್ಯಮದಿಂದಲೇ ಬರುತ್ತಿದೆ ಎಂದು ತಿಳಿಸಿದರು.
     ದಾವಣಗೆರೆ ಜಿಲ್ಲೆಯು ಹಲವು ಮಹತ್ವದ ಪ್ರವಾಸಿ ತಾಣಗಳಿಂದ ಕೂಡಿದ್ದು ಕದಂಬ, ಹೊಯ್ಸಳ, ಚಾಲುಕ್ಯ ಶೈಲಿಯ ಸಮೃದ್ಧ ಕಲೆಯನ್ನು ಪ್ರತಿಬಿಂಬಿಸುತ್ತಿವೆ. ಸೂಳೆಕೆರೆ ಇನ್ನಿತರ ಪ್ರಾಕೃತಿಕ ಸ್ಥಳಗಳೂ ಇವೆ. ತುಂಗಭದ್ರಾ ತೀರದಲ್ಲಿ ಅವಕಾಶಗಳಿವೆ ಎಂದು ಮಾಹಿತಿ ನೀಡಿದರು.
     ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಸಂಪರ್ಕ ಜಾಲವಿದೆ. ವಿಮಾನ ನಿಲ್ದಾಣ ಸ್ಥಾಪನೆಯಾಗಲಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಇರುವ ಈ ರೀತಿಯ ಪೂರಕ ಅಂಶಗಳನ್ನು ಬಳಸಿಕೊಂಡು ಉದ್ಯಮಿಗಳು ಹೂಡಿಕೆ ಮಾಡಬೇಕು. ಅದರಿಂದ ಆದಾಯ ವೃದ್ಧಿಯಾಗುತ್ತದೆ, ಉದ್ಯೋಗಗಳ ಸೃಷ್ಟಿಯಾಗುತ್ತದೆ, ಒಟ್ಟಾರೆ ಆರ್ಥಿಕತೆ ಚೈತನ್ಯ ಪಡೆಯುತ್ತದೆ ಎಂದರು.
     ವಿಮಾನ ನಿಲ್ದಾಣ ಸ್ಥಾಪನೆಯಾದರೆ ಪ್ರವಾಸೋದ್ಯಮಕ್ಕೆ ಬಲ ಬರಲಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು. ಅಭಿವೃದ್ಧಿ ನಿಟ್ಟಿನಲ್ಲಿ ವಿಸ್ತೃತ ಯೋಜನಾ ವರದಿಗಳನ್ನು ತಯಾರಿಸಿ ಪ್ರಸ್ತಾವ ಸಲ್ಲಿಸಲಾಗುವುದು. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆ ಮಾಡುವವರಿಗೆ ಪರವಾನಗಿ ಪಡೆಯುವುದು ಸೇರಿ ಜಿಲ್ಲಾಡಳಿತದಿಂದ ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದರು.
     ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಕಾಸಲ್ ಬದರಿನಾಥ್ ಮಾತನಾಡಿ, ದಾವಣಗೆರೆಗೆ ವಿಮಾನ ನಿಲ್ದಾಣದ ಅಗತ್ಯವಿದೆ. ಸರ್ಕಾರಿ ಜಮೀನುಗಳಲ್ಲಿ ಕಿರು ಅರಣ್ಯ ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಹೇಳಿದರು. ಹಾಲಪ್ಪ ಮತ್ತಿತರರು ಮಾತನಾಡಿದರು.
     ಪ್ರವಾಸೋದ್ಯಮ ನೀತಿಯ ಕುರಿತು ಪ್ರವಾಸೋದ್ಯಮ ಸಮಾಲೋಚಕ ಜಹೀರ್ ಖಾನ್ ಮಾಹಿತಿ ನೀಡಿದರು. ಸಹಾಯಕ ನಿರ್ದೇಶಕ ಎಲ್.ಪಿ. ಮಧು ಮಾತನಾಡಿ, ಗೆಡ್ಡೆ ರಾಮೇಶ್ವರ ಅಭಿವೃದ್ಧಿಗೆ 16 ಕೋಟಿ ರೂ.ಗಳ ಪ್ರಸ್ತಾವ ಸಲ್ಲಿಸಲಾಗಿದೆ. ಆನಗೋಡು ಕಿರು ಪ್ರಾಣಿ ಸಂಗ್ರಹಾಲಯವನ್ನು ದೊಡ್ಡ ಪ್ರಾಣಿ ಸಂಗ್ರಹಾಲಯವಾಗಿ ಅಭಿವೃದ್ಧಿಪಡಿಸುವ ಯೋಜನೆಯಿದೆ. ಹೊದಿಗೆರೆ, ಚನ್ನಗಿರಿ ಮುಂತಾದ ತಾಣಗಳ ಅಭಿವೃದ್ಧಿಗೂ ಪ್ರಸ್ತಾವಗಳಿವೆ ಎಂದರು.
     ಪರಿಸರ ಅಧಿಕಾರಿ ಡಾ. ಎಚ್. ಲಕ್ಷ್ಮೀಕಾಂತ್ ಇದ್ದರು. ಇದೇ ವೇಳೆ ದಾವಣಗೆರೆಯ ಪ್ರವಾಸಿ ತಾಣಗಳನ್ನು ಪರಿಚಯಿಸುವ ವಿಡಿಯೋ ಅನ್ನು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಬಿಡುಗಡೆ ಮಾಡಿದರು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts