More

    ವೃತ್ತಿ ರಂಗಭೂಮಿ ಕಲಾವಿದ ಕೊಡಗನೂರು ಜಯಕುಮಾರ್ ನಿಧನ

    ದಾವಣಗೆರೆ: ವೃತ್ತಿ ರಂಗಭೂಮಿಯ ಹಿರಿಯ ಕಲಾವಿದ, ಜೂನಿಯರ್ ರಾಜ್‌ಕುಮಾರ್ ಎಂದೇ ಖ್ಯಾತರಾಗಿದ್ದ ಕೊಡಗನೂರು ಜಯಕುಮಾರ್ (71) ಹೃದಯಾಘಾತದಿಂದ ನಗರದಲ್ಲಿ ಮಂಗಳವಾರ ನಿಧನರಾದರು.

    ಅವರಿಗೆ ಪತ್ನಿ, ನಾಲ್ವರು ಪುತ್ರರು, ಮೂವರು ಪುತ್ರಿಯರು ಇದ್ದಾರೆ. ಅಂತ್ಯಕ್ರಿಯೆ ಬುಧವಾರ ಬೆಳಗ್ಗೆ 9ಕ್ಕೆ ಹುಟ್ಟೂರು ಕೊಡಗನೂರಿನಲ್ಲಿ ನೆರವೇರಲಿದೆ.

    ಹತ್ತನೇ ವಯಸ್ಸಿಗೇ ಬಣ್ಣ ಹಚ್ಚಿದ್ದ ಅವರು, 6 ದಶಕಗಳ ಕಾಲ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ಗುಬ್ಬಿವೀರಣ್ಣ ನಾಟಕ ಕಂಪನಿ, ಚಿತ್ರದುರ್ಗದ ಕುಮಾರಸ್ವಾಮಿ ಕಂಪನಿ, ಸುಳ್ಳದ ದೇಸಾಯಿ ಅವರ ಕಂಪನಿ, ಚಿಂದೋಡಿ ಕಂಪನಿ ಹೀಗೆ ವೃತ್ತಿ ರಂಗಭೂಮಿಯ ಅನೇಕ ಕಂಪನಿಗಳ ನಾಟಕಗಳಲ್ಲಿ ಅಭಿನಯಿಸಿದ್ದರು.

    ಪೌರಾಣಿಕ ಪಾತ್ರಗಳಲ್ಲಿ ಛಾಪು ಮೂಡಿಸಿದ್ದರು. ಎಚ್ಚೆಮನಾಯಕ, ಮದಕರಿ ನಾಯಕ, ಟಿಪ್ಪುಸುಲ್ತಾನ್ ಮುಂತಾದ ಪಾತ್ರಗಳಿಗೆ ಜೀವ ತುಂಬುತ್ತಿದ್ದರು.

    ಅವರು ಜನುಮದ ಜೋಡಿ ಸೇರಿದಂತೆ 50ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ, ನಾಲ್ಕೈದು ತೆಲುಗು ಚಿತ್ರಗಳಲ್ಲಿ, 50ಕ್ಕೂ ಹೆಚ್ಚು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದರು. ವಿಷ್ಣುವರ್ಧನ್, ಅಂಬರೀಷ್ ಅವರಂಥ ಮೇರು ನಟರ ಜತೆಗೂ ಅಭಿನಯಿಸಿದ್ದರು. ಬರಗೂರು ನಿರ್ದೇಶನದ ಚಿತ್ರಗಳಲ್ಲಿ ಕೆಲಸ ಮಾಡಿದ್ದರು.

    ಜಯಕುಮಾರ್ ಅವರು ನೋಡಲು ಡಾ. ರಾಜ್‌ಕುಮಾರ್ ಅವರಂತೆಯೇ ಕಾಣುತ್ತಿದ್ದುದರಿಂದ, ಉತ್ತಮವಾಗಿ ಅಭಿನಯಿಸುತ್ತಿದ್ದುದರಿಂದ ಅವರನ್ನು ಜೂನಿಯರ್ ರಾಜ್‌ಕುಮಾರ್ ಎಂದು ಕರೆಯಲಾಗುತ್ತಿತ್ತು.

    ಪೊಲೀಸನ ಮಗಳು ನಾಟಕದಲ್ಲಿ ಜಯಕುಮಾರ್ ಅಭಿನಯಿಸಿದ ಪೊಲೀಸ್ ಅಧಿಕಾರಿಯ ಪಾತ್ರವನ್ನು ಡಾ. ರಾಜ್‌ಕುಮಾರ್ ಮೆಚ್ಚಿಕೊಂಡು, ಅವರನ್ನು ಮನೆಗೆ ಕರೆದು ಆತಿಥ್ಯ ನೀಡಿ, ಚಿನ್ನದ ಸರವನ್ನು ಕಾಣಿಕೆಯಾಗಿ ನೀಡಿದ್ದರು.

    ಕೊಡಗನೂರು ಜಯಕುಮಾರ್ ಅವರಿಗೆ ಕಳೆದ ವರ್ಷ ರಾಜ್ಯೋತ್ಸವ ಪ್ರಶಸ್ತಿ ಬಂದಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts