More

    ಸೂಳೆಕೆರೆ ನೀರಿನಲ್ಲಿ ಸೂಕ್ಷ್ಮಾಣುಗಳು ಪತ್ತೆ!

    ದಾವಣಗೆರೆ:  ಏಷ್ಯಾದ ಎರಡನೇ ಅತಿದೊಡ್ಡ ಕೆರೆ ಸೂಳೆಕೆರೆ ಅಡಕೆ ನಾಡಿನ ಜನರ ಜೀವಜಲವಾಗಿದೆ. ಅಲ್ಲಿನ ವಿಶಾಲ ಜಲರಾಶಿ ಚಿತ್ರದುರ್ಗ, ಚನ್ನಗಿರಿ ಪಟ್ಟಣ ಹಾಗೂ 158 ಹಳ್ಳಿಗಳ ಜನರ ನೀರಿನ ದಾಹವನ್ನು ತಣಿಸುತ್ತ ಬಂದಿದೆ. ಈಗ ಆ ನೀರು ಕುಡಿಯಲು ಯೋಗ್ಯವಾಗಿಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದ್ದು ಆ ಭಾಗದ ಜನರಲ್ಲಿ ಆತಂಕ ಮೂಡಿಸಿದೆ.
     800 ವರ್ಷಗಳ ಇತಿಹಾಸವಿರುವ ಈ ಕೆರೆ 6550 ಎಕರೆ ವಿಸ್ತೀರ್ಣ, 2.7 ಟಿಎಂಸಿ ಎಫ್‌ಟಿ ಸಂಗ್ರಹ ಸಾಮರ್ಥ್ಯ ಹೊಂದಿದೆ. 4700 ಎಕರೆ ಜಮೀನಿಗೆ ನೀರುಣಿಸಬಹುದಾಗಿದೆ. ಭದ್ರಾ ನಾಲೆ, ಹರಿದ್ರಾವತಿ ಹಳ್ಳ ಮತ್ತು ಮಾವಿನಹೊಳೆ ಹಳ್ಳ ಈ ಕೆರೆಯ ಜಲ ಮೂಲಗಳಾಗಿವೆ.
     ಕೆರೆಯ 5 ಜಾಕ್‌ವೆಲ್‌ಗಳಿಂದ 6 ನೀರಿನ ಮಾದರಿಗಳನ್ನು ಇತ್ತೀಚೆಗೆ ಪರೀಕ್ಷಿಸಿದಾಗ ಆ ನೀರಿನಲ್ಲಿ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಸೂಕ್ಷ್ಮಾಣುಗಳಿರುವುದು ಪತ್ತೆಯಾಗಿದೆ! ಇದರಿಂದ ಕೂಡಲೇ ಎಚ್ಚೆತ್ತಿರುವ ಅಧಿಕಾರಿಗಳು ಸೂಳೆಕೆರೆಯ ನೀರಿನ ಪೂರೈಕೆಯನ್ನು ಸ್ಥಗಿತಗೊಳಿಸಿ ಪರ್ಯಾಯ ವ್ಯವಸ್ಥೆ ಕೈಗೊಂಡಿದ್ದಾರೆ.
     ಸಾಮಾನ್ಯವಾಗಿ ಪ್ರತಿ ತಿಂಗಳು ಜಿಲ್ಲೆಯ ಪ್ರತಿ ಗ್ರಾಮದ ಕಿರುನೀರು ಪೂರೈಕೆ ಘಟಕ, ಓವರ್‌ಹೆಡ್ ಟ್ಯಾಂಕ್, ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಕೊಳವೆಬಾವಿಗಳಿಂದ 2 ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಪರೀಕ್ಷಿಸುವ ಪದ್ಧತಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ.
     ಇತ್ತೀಚೆಗೆ ಚಿತ್ರದುರ್ಗದ ಕವಾಡಿಗರಹಟ್ಟಿ ಕಾಲನಿ ಸೇರಿ ರಾಜ್ಯದ ವಿವಿಧೆಡೆ ಕಲುಷಿತ ನೀರು ಸೇವನೆಯಿಂದ ಆಗಿರುವ ಅನಾಹುತಗಳ ಹಿನ್ನೆಲೆಯಲ್ಲಿ ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ಕೈಗೊಂಡು, ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಜಾಗೃತವಾಗಿರುವಂತೆ ರಾಜ್ಯಮಟ್ಟದಿಂದ ಸೂಚನೆ ಬಂದಿರುವ ಹಿನ್ನೆಲೆಯಲ್ಲಿ ಸೂಳೆಕೆರೆಯ ನೀರನ್ನು ಪರೀಕ್ಷಿಸಲಾಯಿತು.
     ಕಳೆದ ವಾರ ದಾವಣಗೆರೆಯಲ್ಲಿರುವ ಜಿಲ್ಲಾ ಜನಾರೋಗ್ಯ ಪ್ರಯೋಗಾಲಯದಲ್ಲಿ ಹೈಡ್ರೋಜನ್ ಸಲ್‌ಫೈಡ್ ಮೀಡಿಯಾ ಟೆಸ್ಟ್ ಕೈಗೊಂಡಾಗ ಸೂಳೆಕೆರೆ ನೀರಿನ 4 ಮಾದರಿಗಳು ಕುಡಿಯಲು ಯೋಗ್ಯವಾಗಿಲ್ಲ ಎಂದು ತಿಳಿದು ಬಂದಿತು.
     ನೀರಿನಲ್ಲಿ ಇರಬಹುದಾದ ಸೂಕ್ಷ್ಮಾಣುಗಳ ಪರೀಕ್ಷೆಗಾಗಿ ಆ ಮಾದರಿಗಳನ್ನು ಶಿವಮೊಗ್ಗದ ಜಿಲ್ಲಾ ಜನಾರೋಗ್ಯ ಪ್ರಯೋಗಾಲಯಕ್ಕೆ ಕಳಿಸಿ ಕೊಡಲಾಯಿತು. ಅಲ್ಲಿ ಎಂ.ಪಿ.ಎನ್. (ಮೋಸ್ಟ್ ಪ್ರೊಬ್ಯಾಬಲ್ ನಂಬರ್) ಟೆಸ್ಟ್‌ಗೆ ಕಳಿಸಿದಾಗ ನೀರಿನಲ್ಲಿ ಸೂಕ್ಷ್ಮಾಣುಗಳು ಹೆಚ್ಚಿನ ಸಂಖ್ಯೆಯಲ್ಲಿವೆ ಎಂಬುದು ದೃಢಪಟ್ಟಿತು.
     ಅಷ್ಟಕ್ಕೇ ಸುಮ್ಮನಾಗದ ಅಧಿಕಾರಿಗಳು ಈಗ ಆ ಮಾದರಿಗಳನ್ನು ಶಿವಮೊಗ್ಗದ ಮೆಡಿಕಲ್ ಕಾಲೇಜಿಗೆ ಕಳಿಸಲಾಗಿದೆ. ನೀರಿನಲ್ಲಿ ಯಾವ ಸೂಕ್ಷ್ಮಾಣುಗಳಿವೆ ಎಂಬುದು ಅಲ್ಲಿ ನಡೆಯುವ ಪರೀಕ್ಷೆಯಿಂದ ತಿಳಿದು ಬರಲಿದೆ. ಅದರ ಆಧಾರದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts