More

    ಎಲ್ಲ ಇದ್ದರೇನು, ಬಸ್ ನಿಲ್ಲಲು ಜಾಗವಿಲ್ಲದಿರೆ?…

    ಗಣೇಶ್ ಕಮ್ಲಾಪುರ ದಾವಣಗೆರೆ: ಸ್ಮಾರ್ಟ್‌ಸಿಟಿ ಯೋಜನೆಯಡಿ ಪಾಲಿಕೆ ಮಾಲೀಕತ್ವದಲ್ಲಿ ನಿರ್ಮಾಣವಾದ ಸುಸಜ್ಜಿತ ಹಳೆಯ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು, ಬಸ್ ಮಾಲೀಕರ ಹಿತ ಗಮನದಲ್ಲಿಟ್ಟುಕೊಳ್ಳುವ ಬದಲು ವಾಣಿಜ್ಯೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂಬ ಕೂಗು ಕೇಳಿ ಬಂದಿದೆ.

    ವಿವಿಧ ಜಿಲ್ಲೆಗಳ ಇನ್ನೂರಕ್ಕೂ ಅಧಿಕ ಖಾಸಗಿ ಬಸ್‌ಗಳು ನಗರದ ಮೂಲಕ ಸಂಚರಿಸುತ್ತವೆ. ನೂತನ ನಿಲ್ದಾಣದಲ್ಲಿ 12 ರಿಂದ 14 ಬಸ್‌ಗಳ ನಿಲುಗಡೆಗೆ ಮಾತ್ರ ಸ್ಥಳವಿದೆ. ಇದರಿಂದ ಉಳಿದ ಬಸ್‌ಗಳು ನಿಲ್ಲುವುದೆಲ್ಲಿ? ಒಂದು ಬಸ್ ಕನಿಷ್ಠ 15 ನಿಮಿಷ ನಿಲುಗಡೆ ಆಗಲಿದೆ. ಇನ್ನುಳಿದ ಬಸ್‌ಗಳು ರಸ್ತೆ ಬದಿ ನಿಂತರೆ ಟ್ರಾಫಿಕ್ ಸಮಸ್ಯೆ, ಜತೆಗೆ ಪೊಲೀಸರ ದಂಡಕ್ಕೆ ಗುರಿಯಾಗುವ ಸಾಧ್ಯತೆಯಿದೆ.

    ಸುಸಜ್ಜಿತ ಪ್ಲಾಟ್‌ಫಾರಂ ಕೊರತೆ ಖಾಸಗಿ ಬಸ್ ಮಾಲೀಕರ ನಿದ್ದೆಗೆಡಿಸಿದೆ. ನಿಲ್ದಾಣ ನಗರದ ಮಧ್ಯಭಾಗದಲ್ಲಿದ್ದು, ಟ್ರಾಫಿಕ್ ಸಮಸ್ಯೆ ಉದ್ಭವಿಸುವ ಸಾಧ್ಯತೆಯಿದೆ. ಆದ್ದರಿಂದ ಪ್ರಸ್ತುತ ಹೈಸ್ಕೂಲ್ ಮೈದಾನದಲ್ಲಿ ಇರುವ ಸ್ಥಳವನ್ನು ಬಸ್‌ಗಳ ಪಾರ್ಕಿಂಗ್‌ಗೆ ಮೀಸಲಿಡುವಂತೆ ಪಾಲಿಕೆಗೆ ಒತ್ತಾಯಿಸಲು ತೀರ್ಮಾನಿಸಲಾಗಿದೆ ಎನ್ನುತ್ತಾರೆ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಮಲ್ಲೇಶಪ್ಪ.

    ಬಸ್‌ಗಳು ಅನವಶ್ಯಕವಾಗಿ ನಿಲ್ದಾಣದಲ್ಲಿ ನಿಂತರೆ ಟ್ರಾಫಿಕ್ ಸಮಸ್ಯೆ ಕಾಡುತ್ತದೆ. ಚಾಲಕರು ಸರದಿಯಂತೆ ಇಲ್ಲಿಗೆ ಬಂದು ಪ್ರಯಾಣಿಕರನ್ನು ಹತ್ತಿಸಿಕೊಂಡು ತೆರಳಬೇಕು. ಉಳಿದ ಸಮಯ ಬೇರೆಡೆ ಬಸ್ ನಿಲ್ಲಿಸಿಕೊಳ್ಳಬೇಕು. ಲಭ್ಯವಿರುವ ಕಡಿಮೆ ಸ್ಥಳದಲ್ಲಿಯೇ ಎಲ್ಲ ಸಾಧಕ-ಬಾಧಕ ಚರ್ಚಿಸಿ ಸುಸಜ್ಜಿತ ಹೈಟೆಕ್ ನಿಲ್ದಾಣ ನಿರ್ಮಿಸಲಾಗಿದೆ ಎನ್ನುತ್ತಾರೆ ಸ್ಮಾರ್ಟ್‌ಸಿಟಿ ಚೀಫ್ ಇಂಜಿನಿಯರ್ ಸತೀಶ್.

    26.42 ಕೋಟಿ ರೂ. ವೆಚ್ಚದ ನಿಲ್ದಾಣದಲ್ಲಿ ಎರಡು ಅಂತಸ್ತಿನ ಕಟ್ಟಡ, 89 ವಾಣಿಜ್ಯ ಮಳಿಗೆಗಳು, 200 ದ್ವಿಚಕ್ರ ವಾಹನಕ್ಕೆ ಸ್ಥಳಾವಕಾಶ , ಕ್ಯಾಂಟಿನ್, ಬೇಬಿಕೇರ್, ಹೈಟೆಕ್ ಶೌಚಗೃಹ, ಸ್ನಾನಗೃಹ, 3 ಸ್ಟೇರ್ ಕೇಸ್, 3 ಲಿಫ್ಟ್, 4 ಎಸ್ಕಲೇಟರ್, ಅಗ್ನಿಶಾಮಕ ವ್ಯವಸ್ಥೆ ಸೇರಿ ಅತ್ಯಾಧುನಿಕ ಸವಲತ್ತು ಕಲ್ಪಿಸಲಾಗಿದೆ.

    ರಾಜ್ಯದ ನುರಿತ ತಜ್ಞ ಇಂಜಿನಿಯರ್‌ಗಳ ಸಲಹೆ ಪಡೆದು ನಿರ್ಮಿಸಲಾಗಿದೆ. ಸ್ಟೇಟ್ ಪಾರ್ಕಿಂಗ್ ಬದಲು ಆ್ಯಂಗಲ್ ಪಾರ್ಕಿಂಗ್ ಮಾಡಿರುವುದರಿಂದ ಇತರೆ ಬಸ್‌ಗಳು ನಿಲ್ದಾಣದಲ್ಲಿ ಸರಾಗವಾಗಿ ಸಂಚರಿಸಬಹುದು. ಪ್ರಯಾಣಿಕರಿಗೆ ತಂಗಲು, ವಿಶ್ರಮಿಸಲು ಸಾಕಷ್ಟು ಸ್ಥಳಾವಕಾಶ ಕಲ್ಪಿಸಿದೆ. ಇರುವಷ್ಟು ಜಾಗದಲ್ಲಿ ವ್ಯವಸ್ಥಿತವಾಗಿ ಪ್ರಯಾಣಿಕರ, ಬಸ್‌ಗಳ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ನಿಲ್ದಾಣ ನಿರ್ಮಿಸಲಾಗಿದೆ.
    ವೀರೇಶ್‌ಕುಮಾರ್ ಎಂಡಿ, ಸ್ಮಾರ್ಟ್‌ಸಿಟಿ

    ಈ ಮೊದಲಿದ್ದ ನಿಲ್ದಾಣದಲ್ಲಿ ಯಾವೊಂದು ಸೌಕರ್ಯವೂ ಇರಲಿಲ್ಲ. ಶೌಚಕ್ಕೂ ಪರದಾಡಬೇಕಿತ್ತು. ತಾಸುಗಟ್ಟಲೇ ಬಿರುಬಿಸಿಲಿನಲ್ಲಿ ಬಸ್‌ಗಾಗಿ ಕಾಯಬೇಕಿತ್ತು. ನಿಲ್ಲಲು ಸೂಕ್ತ ಸ್ಥಳವಿರಲಿಲ್ಲ. ಆದರೆ, ನೂತನ ನಿಲ್ದಾಣ ಶೌಚಗೃಹ, ಕ್ಯಾಂಟಿನ್, ವಿಶ್ರಮಿಸಲು ಕೊಠಡಿ ಹೊಂದಿದ್ದು, ಪ್ರಯಾಣಿಕರಿಗೆ ಅನುಕೂಲಕರವಾಗಿದೆ.
    ಹಾಲೇಶ್, ತಣಿಗೆರೆ, ಪ್ರಯಾಣಿಕ

    2019ರಲ್ಲಿ ನಿಲ್ದಾಣ ಕಾಮಗಾರಿ ಆರಂಭಗೊಂಡಾಗಿನಿಂದ ಈ ಭಾಗದಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡು ನಮ್ಮ ಬದುಕು ದುಸ್ತರವಾಗಿತ್ತು. ನೂತನ ನಿಲ್ದಾಣದಿಂದ ಜನಸಂಚಾರ ಹೆಚ್ಚಾಗಿ ಮತ್ತೆ ವ್ಯಾಪಾರ ಚಿಗುರೊಡೆಯುತ್ತಿದೆ.
    ಜಿ.ಎಂ.ಶ್ಯಾಮ್, ವ್ಯಾಪಾರಿ

    ನಿರ್ಮಾಣಕ್ಕೂ ಮುನ್ನವೇ ಬಸ್ ನಿಲ್ದಾಣಕ್ಕೆ ಸೂಕ್ತ ಸ್ಥಳಾವಕಾಶ ಕಲ್ಪಿಸುವಂತೆ ಒತ್ತಾಯಿಸಿದ್ದೆವು. ಆದರೆ, ಅಧಿಕಾರಿ ವರ್ಗ ಅವೈಜ್ಞಾನಿಕವಾಗಿ, ವಾಣಿಜ್ಯ ಆಧಾರಿತವಾಗಿ ನಿಲ್ದಾಣ ನಿರ್ಮಿಸಿದೆ. ಪ್ರಯಾಣಿಕರಿಗೆ, ಬಸ್ ಮಾಲೀಕರಿಗೆ ಅನ್ಯಾಯವೆಸಗಿದೆ.
    ಆವರಗೆರೆ ವಾಸು ಸಹಕಾರ್ಯದರ್ಶಿ, ಕಮ್ಯುನಿಷ್ಟ್ ಪಕ್ಷ

    ಬಸ್ ಆವರಣದಲ್ಲಿ ಸ್ಥಳಾವಕಾಶದ ಕೊರತೆಯಿಂದ ಆಟೋದಲ್ಲಿ ಬರುವವರನ್ನು ನಿಲ್ದಾಣದ ಹೊರಗಡೆ ಇಳಿಸುವಂತಾಗಿದೆ. ಇದರಿಂದ ವೃದ್ಧರು, ಮಹಿಳೆಯರು, ಅನಾರೋಗ್ಯ ಹೊಂದಿದವರಿಗೆ ತೊಂದರೆಯಾಗಲಿದೆ. ಜತೆಗೆ, ವಾಹನ ದಟ್ಟಣೆ ಏರ್ಪಟ್ಟು ಆಟೋ ನಿಲ್ಲಿಸುವುದಕ್ಕೂ ತೊಂದರೆಯಾಗಿದೆ.
    ಕೆಂಚಪ್ಪ ಆಟೋ ಚಾಲಕ

    ಇನ್ನಷ್ಟು ಉತ್ತಮವಾಗಿ ನಿರ್ಮಿಸಬಹುದಿತ್ತು. ಈ ಕುರಿತು ನಿರ್ಮಾಣಕಕೂ ಮುನ್ನವೇ ಗಮನ ಸೆಳೆದಿದ್ದೆವು. ನಿಲ್ದಾಣದಲ್ಲಿ ಹತ್ತಿಪ್ಪತ್ತು ಬಸ್ ಬಿಟ್ಟರೆ ಉಳಿದವು ನಿಲ್ಲುವುದು ಅಸಾಧ್ಯ. ಆದ್ದರಿಂದ ಬಸ್‌ಗಳ ಪಾರ್ಕಿಂಗ್‌ಗೆ ಹೈಸ್ಕೂಲ್ ಮೈದಾನದಲ್ಲಿ ಸ್ಥಳಾವಕಾಶ ಮಾಡಿಕೊಟ್ಟರೆ ಅನುಕೂಲ. ಇದರಿಂದ ಎಲ್ಲೆಂದರಲ್ಲಿ ಬಸ್ ನಿಲ್ಲಿಸುವುದು ತಪ್ಪುತ್ತದೆ.
    ಮಲ್ಲೇಶಪ್ಪ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts