More

    ಪಂಚಮಸಾಲಿ ಸಮಾಜದ ಶಕ್ತಿ ಪ್ರದರ್ಶನ ಮಾಡೋಣ

    ದಾವಣಗೆರೆ : ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಪಡೆಯಲು ನಾವು ಗಟ್ಟಿಯಾಗಿ ನಿಲ್ಲೋಣ. ನಮ್ಮ ಶಕ್ತಿ ಪ್ರದರ್ಶನ ಮಾಡೋಣ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
     ನಗರದ ಬಂಟರ ಭವನದಲ್ಲಿ ಬುಧವಾರ, ಜಿಲ್ಲಾ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಲಿಂಗಾಯತ ಪಂಚಮಸಾಲಿ ಸಮಾಜದ ಸಭೆಯಲ್ಲಿ ಮಾತನಾಡಿದರು.
     ಕೂಡಲಸಂಗಮದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಹೋರಾಟದ ಪರಿಣಾಮವಾಗಿ ಬಿಜೆಪಿ ಸರ್ಕಾರ ಇದ್ದಾಗ ಲಿಂಗಾಯತ ಸಮಾಜಕ್ಕೆ 2ಡಿ ಮೀಸಲಾತಿ ದೊರೆತಿತ್ತು ಎಂದು ನೆನಪಿಸಿದ ಅವರು, ನಾನು ಸಿಎಂ ಆಗಲಿ, ಬಿಡಲಿ ಮೀಸಲಾತಿ ಕೊಡಿಸುವೆ ಎಂದು ತಿಳಿಸಿದರು.
     ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದ ಸಮಯದಲ್ಲಿ ಮೀಸಲಾತಿ ಕುರಿತು ಸಿದ್ದರಾಮಯ್ಯ ಜತೆ ಮಾತನಾಡಲು ಸ್ವಾಮೀಜಿ ಬಯಸಿದ್ದರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಾದ ವಿನಯ್ ಕುಲಕರ್ಣಿ ಮತ್ತು ವಿಜಯಾನಂದ ಕಾಶಪ್ಪನವರ್ ಅವರಿಗೆ ಒಂದು ವಾರವಾದರೂ ಸಾಧ್ಯವಾಗಲಿಲ್ಲ. ಕೊನೆಗೆ ನಾನು ಹೇಳಿಕೆ ನೀಡಿದ ನಂತರವೇ ಮುಖ್ಯಮಂತ್ರಿ ಸಮಯ ನೀಡಿದರು ಎಂದರು.
     ಮೀಸಲಾತಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರು ಗಟ್ಟಿಯಾಗಿ ಮಾತನಾಡಲು ಪಂಚಮಸಾಲಿ ಸಮಾಜದ ಸಚಿವರು ಹಾಗೂ ಕಾಂಗ್ರೆಸ್ ಶಾಸಕರು ಸಿದ್ಧವಿಲ್ಲ ಎಂದು ಯತ್ನಾಳ್ ತರಾಟೆಗೆ ತೆಗೆದುಕೊಂಡರು.
     ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತರ ಬಗ್ಗೆ ಅಲರ್ಜಿ ಇದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರೇ ನನ್ನ ಬಳಿ ಹೇಳಿದ್ದರು. ಈ ಬಗ್ಗೆ ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆ ಎದುರು ಪ್ರಮಾಣ ಮಾಡಲು ಸಿದ್ಧ ಎಂದರು.
     ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ನಾನು ಎಲ್ಲ ಸಮಾಜದವರಿಗೆ ದಾನ ಮಾಡಿದ್ದೇನೆ. ಅದನ್ನು ಪ್ರಚಾರಕ್ಕೆ ಬಳಸಿಕೊಳ್ಳುವುದಿಲ್ಲ. ಬಲಗೈಯಿಂದ ದಾನ ಮಾಡಿದ್ದು ಎಡಗೈಗೆ ಗೊತ್ತಾಗಬಾರದು ಎನ್ನುತ್ತಾರೆ. ಕೆಲವರು ಎರಡೂ ಕೈಗೆ ಗೊತ್ತಾಗುವಂತೆ ದಾನ ಮಾಡುತ್ತಾರೆ ಎಂದು ಹೇಳಿದರು.
     ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಜಿಲ್ಲಾ ಮಂತ್ರಿಯಾಗಿ ಯಾವ ತಾಲೂಕಿಗೂ ಹೋಗಿಲ್ಲ. ಐ.ಟಿ.- ಬಿ.ಟಿ. ಉದ್ಯಮದ ಬಗ್ಗೆ ಮಾತನಾಡಿದ್ದಾರೆ. ನಾನು ಈಗಾಗಲೆ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ದಾವಣಗೆರೆಗೆ ತಂದಿದ್ದೇನೆ. ಜಮೀನು ನೀಡಿದ್ದರೆ ವಿಮಾನ ನಿಲ್ದಾಣ, ಕೈಗಾರಿಕಾ ಕಾರಿಡಾರ್ ಎರಡನ್ನೂ ಮಾಡುತ್ತಿದ್ದೆ. ಪ್ರತಿಭಟನೆ ಮಾಡಿಸಿ ಅದು ಸಿಗದಂತೆ ಮಾಡಿದರು ಎಂದರು.
     ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವಿಗೆ ಪಂಚಮಸಾಲಿ ಸಮಾಜವೇ ನಿರ್ಣಾಯಕವಾಗಿದೆ. ಗೆಲುವಿನ ನಂತರ ಪಂಚಮಸಾಲಿ ಸಮಾಜಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
     ಜಿ.ಪಂ. ಮಾಜಿ ಸದಸ್ಯ ತೇಜಸ್ವಿ ಪಟೇಲ್, ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್ ಮಾತನಾಡಿದರು.
     ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ರಾಜಶೇಖರ್, ಮುಖಂಡರಾದ ಜಿ.ಎಸ್. ಅನಿತ್, ಪರಮೇಶ್ವರ ಗೌಡ್ರು, ರಘುಚಂದ್ರನ್, ನಾಗರಾಳ್ ಹುಲಿ, ಎಂ.ಎಸ್. ರುದ್ರಗೌಡ್ರು, ಬಿ. ಚಿದಾನಂದಪ್ಪ, ಆರುಂಡಿ ನಗಾರಾಜ್, ಚಂದ್ರಶೇಖರಪ್ಪ, ಗಾಯತ್ರಿ, ಮಂಜುಳ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts