More

    18 ರಿಂದ ‘ವಿನಯ ನಡಿಗೆ ಹಳ್ಳಿ ಕಡೆಗೆ’

    ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜಿ.ಬಿ. ವಿನಯ್ ಕುಮಾರ್ ಡಿ. 18 ರಿಂದ ಕ್ಷೇತ್ರದಲ್ಲಿ ಪಾದಯಾತ್ರೆ ಆರಂಭಿಸಲಿದ್ದಾರೆ.
     ‘ವಿನಯ ನಡಿಗೆ ಹಳ್ಳಿ ಕಡೆಗೆ’ ಎಂಬ ಈ ಪಾದಯಾತ್ರೆಗೆ ಸೋಮವಾರ ಬೆಳಗ್ಗೆ 9 ಗಂಟೆಗೆ ಜಗಳೂರು ವಿಧಾನಸಭಾ ಕ್ಷೇತ್ರದ ಗಡಿ ಭಾಗದ ಚಿಕ್ಕಉಜ್ಜನಿ ಗ್ರಾಮದಲ್ಲಿ ಚಾಲನೆ ನೀಡಲಾಗುವುದು ಎಂದು ವಿನಯ್ ಕುಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
     ವಿನಯ ಮಾರ್ಗ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಈ ಪಾದಯಾತ್ರೆಯು 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 25 ದಿನಗಳ ಕಾಲ ನಡೆಯಲಿದೆ. ದಿನಕ್ಕೆ 15-20 ಕಿ.ಮೀ.ನಂತೆ ಒಟ್ಟು 450 ಕಿ.ಮೀ. ಕಾಲ್ನಡಿಗೆಯಲ್ಲಿ ಕ್ರಮಿಸಲಾಗುವುದು. ಜನಪ್ರತಿನಿಧಿಗಳು, ಮುಖಂಡರು, ಮಹಿಳೆಯರು, ಯುವಕರು, ಅಭಿಮಾನಿಗಳು ಪಾಲ್ಗೊಳ್ಳುವರು ಎಂದು ಹೇಳಿದರು.
     ರಾಜಕಾರಣದಲ್ಲಿ ವಿನಯತೆ ಕಡಿಮೆಯಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವವರು ಬೇಕಿದೆ. ಗ್ರಾಮೀಣ ಜನರನ್ನು ನಿರ್ಲಕ್ಷಿಸಲಾಗಿದೆ. ಇಂಥ ಸನ್ನಿವೇಶದಲ್ಲಿ ಜನರ ಮನೆ ಬಾಗಿಲಿಗೇ ಹೋಗಿ ಅವರಲ್ಲಿ ನಂಬಿಕೆ, ಭರವಸೆ ಮೂಡಿಸುವುದು, ಬಾಂಧವ್ಯ ಬೆಸೆಯುವುದು ಪಾದಯಾತ್ರೆಯ ಪ್ರಮುಖ ಉದ್ದೇಶ ಎಂದು ವಿವರಿಸಿದರು.
     ಪ್ರತಿ ಕ್ಷೇತ್ರದಲ್ಲಿ 30-35 ಹಳ್ಳಿಗಳಂತೆ ಶೇ. 60-70 ರಷ್ಟು ಪ್ರದೇಶದ ಮೂಲಕ ಹಾದು ಹೋಗುವ ಉದ್ದೇಶವಿದೆ. 20 ಆಯ್ದ ಕುಗ್ರಾಮ ಅಥವಾ ಗಡಿ ಗ್ರಾಮಗಳಲ್ಲಿ ವಾಸ್ತವ್ಯ ಮಾಡಲಾಗುವುದು. ದೇವಸ್ಥಾನ, ಸಮುದಾಯ ಭವನ ಅಥವಾ ಶಾಲೆಯಲ್ಲಿ ತಂಗುವುದಾಗಿ ತಿಳಿಸಿದರು. ಪ್ರತಿ ನಿತ್ಯ ರಾತ್ರಿ ವಾಸ್ತವ್ಯ ಮಾಡುವ ಗ್ರಾಮಗಳಲ್ಲಿ ಜನರೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಲಾಗುವುದು ಎಂದು ತಿಳಿಸಿದರು.
     ಜಗಳೂರು ಕ್ಷೇತ್ರದ ನಂತರ ಹರಪನಹಳ್ಳಿ, ಹರಿಹರ, ಹೊನ್ನಾಳಿ, ಚನ್ನಗಿರಿ, ಮಾಯಕೊಂಡ, ದಾವಣಗೆರೆ ದಕ್ಷಿಣ ಮತ್ತು ದಾವಣಗೆರೆ ಉತ್ತರದ ಹಳ್ಳಿಗಳಲ್ಲಿ ಸಂಚರಿಸಿ ಜ. 15ಕ್ಕೆ ಮುಕ್ತಾಯಗೊಳಿಸಲಾಗುವುದು. ಹದಡಿ ಗ್ರಾಮದಲ್ಲಿ ಸಮಾರೋಪ ಸಮಾರಂಭ ಮಾಡುವುದಾಗಿ ಹೇಳಿದರು.
     ಗ್ರಾಮೀಣ ಶಾಲೆಗಳ ಅಭಿವೃದ್ಧಿಯಾಗಬೇಕು, ಅವುಗಳನ್ನು ಮೇಲ್ದರ್ಜೆಗೆ ಏರಿಸಬೇಕು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದು ಅಭಿಪ್ರಾಯಪಟ್ಟ ಅವರು, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವುದು, ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುವುದು. ಐಎಎಸ್ ಆಕಾಂಕ್ಷಿಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಕ್ಕಳಿಗೆ ಪ್ರೇರಣೆ ನೀಡಲಿದ್ದಾರೆ ಎಂದು ತಿಳಿಸಿದರು.
     ಮುಖಂಡರಾದ ಸುರೇಶ್, ಶರತ್, ಹಾಲೇಕಲ್ ಅರವಿಂದ್, ಕಲ್ಲೇಶ್ ಸುದ್ದಿಗೋಷ್ಠಿಯಲ್ಲಿದ್ದರು.
     …
     
     * ಟಿಕೆಟ್ ಸಿಗುವ ವಿಶ್ವಾಸ
     ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಸಿಗುವ ನಿರೀಕ್ಷೆಯಿದೆ ಎಂದು ವಿನಯ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
     ಕ್ಷೇತ್ರದಲ್ಲಿ ಕೆಲಸ ಮಾಡಿ, ಜನರ ಬೆಂಬಲ ಗಳಿಸಿ. ಸರ್ವೇನಲ್ಲಿ ಬರುವ ಅಭಿಪ್ರಾಯವನ್ನೂ ಪರಿಗಣಿಸಲಾಗುವುದು ಎಂದು ವರಿಷ್ಠರು ತಿಳಿಸಿದ್ದಾರೆ. ಅದರಂತೆ ನಾನು ಪ್ರಯತ್ನ ಮಾಡುತ್ತಿದ್ದೇನೆ. ಜಿಲ್ಲೆಯಿಂದ ಮೂವರು ಆಕಾಂಕ್ಷಿಗಳ ಹೆಸರು ಹೋಗಿವೆ. ನನಗೆ ಟಿಕೆಟ್ ಸಿಗುತ್ತದೆ ಎನ್ನುವ ನಂಬಿಕೆಯಿದೆ ಎಂದರು.
     ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಅವರಿಗೆ ಯಾವುದೇ ಮುನಿಸಿಲ್ಲ, ಪರಿಸ್ಥಿತಿ ತಿಳಿಯಾಗಿದೆ. ಸಮಾಜದ ಯಾರಿಗೇ ಟಿಕೆಟ್ ಸಿಕ್ಕರೂ ಬೆಂಬಲಿಸುವ ಒಮ್ಮತಕ್ಕೆ ಬರಲಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯುತ್ತಿದ್ದೇನೆ. ಒಂದೆರಡು ದಿನಗಳಲ್ಲಿ ಜಿಲ್ಲೆಯ ಮುಖಂಡರನ್ನು ಭೇಟಿಯಾಗುವೆ ಎಂದು ಹೇಳಿದರು.
     ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ದಾವಣಗೆರೆ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾದರೆ ಸ್ವಾಗತಿಸುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts