More

    ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯವಿರಲಿ

    ದಾವಣಗೆರೆ : ನೆರೆಹೊರೆಯವರ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದರೆ ಯಾವುದೇ ಸಂಘರ್ಷ ಉದ್ಭವಿಸುವುದಿಲ್ಲ ಎಂಬುದನ್ನು ಕಾವ್ಯ ರಂಗ ನಾಟಕ ಎತ್ತಿ ಹಿಡಿದಿದೆ ಎಂದು ಬಾಪೂಜಿ ವಿದ್ಯಾಸಂಸ್ಥೆ ಶೈಕ್ಷಣಿಕ ನಿರ್ದೇಶಕ, ಸಾಹಿತಿ ಡಾ.ಎಂ.ಜಿ. ಈಶ್ವರಪ್ಪ ಹೇಳಿದರು.
     ರಂಗ ಬಳಗ ಹಾಗೂ ಎಸ್.ಎಸ್. ಕೇರ್ ಸಹಯೋಗದಲ್ಲಿ ನಗರದ ಎವಿಕೆ ಮಹಿಳಾ ಕಾಲೇಜು ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾವ್ಯ ರಂಗ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
     ನಾಟಕಗಳು ಜೀವನಕ್ಕೆ ಪೂರಕವಾದ ಆನಂದ ಕೊಡಬೇಕು ಎಂಬ ಕಲ್ಪನೆಯಿತ್ತು. ಆದರೆ, ಕಾವ್ಯ ರಂಗ ನಾಟಕ ಒಂದು ಹೊಸ ಲೋಕ ತೆರೆದಿಟ್ಟಿದೆ. ಕಲಾವಿದರು ಅದ್ಭುತ ಪ್ರದರ್ಶನ ನೀಡಿದ್ದು ನಾಟಕ ವೀಕ್ಷಣೆಯಿಂದ ಮನಸ್ಸು ಕರಗಿಹೋಗಿದೆ ಎಂದು ತಿಳಿಸಿದರು.
     ಸಮಾಜದಲ್ಲಿ ಪರಸ್ಪರ ದ್ವೇಷ, ಅಸೂಯೆ ವಾತಾವರಣದಿಂದ ಸಂಯಮ ಕಳೆದುಕೊಳ್ಳುತ್ತಿರುವುದನ್ನು ಕಾಣುತ್ತೇವೆ. ಎಲ್ಲರೊಂದಿಗೆ ಚೆನ್ನಾಗಿದ್ದರೆ ಬಂದೂಕು ಬೇಕಾಗಿಲ್ಲ. ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆ ಜತೆಗೆ ಸಮಕಾಲೀನ ಸ್ಥಿತಿ ಸಹ ತಿಳಿಯಬೇಕು ಎಂದರು.
     ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿ, ಪ್ರಸ್ತುತ ಸಮಾಜದ ಎಲ್ಲ ರಂಗಗಳಲ್ಲಿ ಶೋಷಣೆ ನಡೆಯುತ್ತಿದ್ದರೂ ಯಾರೂ ಪ್ರಶ್ನೆ ಮಾಡುತ್ತಿಲ್ಲ. ಪ್ರಶ್ನಿಸುವ ಮನೋಭಾವ ಬಂದಾಗ ಮಾತ್ರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಹೇಳಿದರು.
     ಪ್ರಸ್ತುತ ಹೆಜ್ಜೆ ಹೆಜ್ಜೆಗೂ ಧರ್ಮ ಮತ್ತು ಜಾತಿ ಸವಾಲುಗಳು ಎದುರಾಗುತ್ತಿದ್ದು ಇವು ದೇಶವನ್ನು ಹಾಳು ಮಾಡುತ್ತಿವೆ. ನಮ್ಮ ಆದ್ಯತೆಗಳ ಮೇಲೆ ಸಮಾಜದ ಸವಾಲು ಎದುರಿಸುವ ಶಕ್ತಿ ಬರಲಿದೆ ಎಂದು ತಿಳಿಸಿದರು.
     ಆರಂಭದಲ್ಲಿ ನಿರ್ದಿಗಂತ ರಂಗ ಪಯಣದ ಕಲಾವಿದರು ಡಾ.ಶ್ರೀಪಾದ್ ಭಟ್ ನಿರ್ದೇಶನದ  ಕಾವ್ಯ ರಂಗ ನಾಟಕ ಪ್ರದರ್ಶಿಸಿದರು. ನಂತರ ಸಂವಾದದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಕಲಾವಿದರು ರಂಗಭೂಮಿ ಯಾವಾಗಲೂ ಮುಖಾಮುಖಿ ಆಗುತ್ತದೆ. ಸಮಾಜ ಒಡೆಯಲು ಯತ್ನಿಸುವವರ ವಿರುದ್ಧ ನಿಲ್ಲುವುದೇ ರಂಗಭೂಮಿ ಶಕ್ತಿ. ಸಮಾಜಕ್ಕೆ ಪ್ರಜ್ಞೆ ಮೂಡಿಸುವುದೇ ಒಂದು ಪರಿಹಾರ ಎಂದು ಹೇಳಿದರು.
     ಎವಿಕೆ ಕಾಲೇಜು ಪ್ರಾಚಾರ್ಯೆ ಕಮಲಾ ಸೊಪ್ಪಿನ್, ಬಾ.ಮ. ಬಸವರಾಜಯ್ಯ, ಕಲಾವಿದ ಆರ್.ಟಿ. ಅರುಣ್‌ಕುಮಾರ್, ದಸಂಸ ಮುಖಂಡ ಹೆಗ್ಗೆರೆ ರಂಗಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts