More

    ಮೆಕ್ಕೆಜೋಳ ಬೆಳೆಗಾರರಿಗೆ ನೆಮ್ಮದಿ ತಂದ ನೆರವು

    ಡಿ.ಎಂ. ಮಹೇಶ್ ದಾವಣಗೆರೆ
    ಕೋವಿಡ್-19ರ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೀಡಾದ ಮೆಕ್ಕೆಜೋಳ ಬೆಳೆಗಾರರಿಗೆ ರಾಜ್ಯ ಸರ್ಕಾರ ಘೋಷಿಸಿದ ಆರ್ಥಿಕ ನೆರವು ಕೊಂಚ ಸಮಾಧಾನ ತಂದಿದೆ.

    ರಾಜ್ಯದ ಮೆಕ್ಕೆಜೋಳ ಬೆಳೆಗಾರರು ಕೋವಿಡ್ ಸಂದರ್ಭದಲ್ಲಿ ಅನುಭವಿಸಿದ್ದ ನಷ್ಟದ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಈ ಬೆಳೆಗಾರರಿಗೆ ತಲಾ 5 ಸಾವಿರ ರೂ. ಸಹಾಯಧನದ ವಿಶೇಷ ಪ್ಯಾಕೇಜ್ ಘೋಷಿಸಿದ್ದರು.

    2019-20ನೇ ಸಾಲಿನ ಮುಂಗಾರಿನಲ್ಲಿ 6.76 ಲಕ್ಷ ಟನ್ ಅಂದಾಜು ಇಳುವರಿ ಇದ್ದರೂ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿತ್ತು. ಕೇಂದ್ರ ಸರ್ಕಾರ 1,760 ರೂ.ಗಳ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿದ್ದರೂ, ರೈತರಿಗೆ ಅಷ್ಟು ಬೆಲೆ ಸಿಕ್ಕಿರಲಿಲ್ಲ.

    ಬೆಳೆ ಸಮೀಕ್ಷೆ ತಂತ್ರಾಂಶ ವರದಿ ಪ್ರಕಾರ ಜಿಲ್ಲೆಯಲ್ಲಿ 1.20 ಲಕ್ಷ ಮೆಕ್ಕೆಜೋಳ ಬೆಳೆಗಾರರಿದ್ದಾರೆ. ಈ ಪೈಕಿ ಒಂಟಿ ಖಾತೆದಾರರಾದ 63,152 ಜನರಲ್ಲಿ 52,638 ಮಂದಿಯ ಖಾತೆಗೆ ಡಿಬಿಟಿ ಪೋರ್ಟಲ್ ಮೂಲಕ ಜು.10ರ ಅಂತ್ಯಕ್ಕೆ ಹಣ ನೇರ ಜಮೆಯಾಗಿದೆ. ಜಿಲ್ಲೆಯ 3,873 ಜಂಟಿ ಖಾತೆದಾರರ ಪೈಕಿ ಒಂದಷ್ಟು ಜನರಿಗೆ ಹಣ ತಲುಪಿದೆ ಎನ್ನಲಾಗಿದೆ.

    ಆರ್ಥಿಕ ನೆರವು ಬಯಸುವ ಜಂಟಿ ಖಾತೆದಾರರಿದ್ದಲ್ಲಿ ತಮ್ಮ ಕುಟುಂಬದ ಇತರೆ ಖಾತೆದಾರರ ಒಪ್ಪಿಗೆ ಪತ್ರ ಪಡೆದು ನೋಟರಿಯವರಿಂದ ದೃಢೀಕರಿಸಿ ಸಲ್ಲಿಸಬಹುದು. ತಂದೆ ಅಥವಾ ತಾಯಿ ಮೃತರಾಗಿದ್ದಲ್ಲಿ ಗ್ರಾಮ ಲೆಕ್ಕಿಗರಿಂದ ಕುಟುಂಬದ ಇತರೆ ಸದಸ್ಯರ ನಿರಾಪೇಕ್ಷಣಾ ಪತ್ರದೊಂದಿಗೆ ಅರ್ಜಿ ನೀಡಬಹುದು.

    ಎಫ್‌ಐಡಿಗೆ (ಫಾರ್ಮರ್ ಐಡೆಂಟಿಫಿಕೇಷನ್) ಒಳಪಡದ ರೈತರು ಆಧಾರ್ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿಗಳನ್ನು ರೈತ ಸಂಪರ್ಕ ಕೇಂದ್ರಗಳಿಗೆ ಸಲ್ಲಿಸಿ ಸೇರ್ಪಡೆಯಾಗಬಹುದು. ಇದರಿಂದ ನಿಗದಿತ ಸಹಾಯಧನವಲ್ಲದೆ ಇಲಾಖೆಯ ಇತರೆ ಸೌಲಭ್ಯಗಳ ಪ್ರಯೋಜನ ಪಡೆಯಬಹುದು ಎನ್ನುತ್ತಾರೆ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಡಿ.ಎಂ. ಶ್ರೀಧರ್.

    ತಾಲೂಕುವಾರು ಜಮೆ
    ಚನ್ನಗಿರಿ – 8382
    ದಾವಣಗೆರೆ – 10557
    ಹರಿಹರ – 3406
    ಹೊನ್ನಾಳಿ – 7573
    ಜಗಳೂರು – 15549
    ನ್ಯಾಮತಿ – 7171
    ಒಟ್ಟು – 52638

    ಮೆಕ್ಕೆಜೋಳ ಬೆಳೆಯುಗವ ಜಂಟಿ ಖಾತೆದಾರರು ಆದಷ್ಟು ಶೀಘ್ರವಾಗಿ ಛಾಪಾಕಾಗದದಲ್ಲಿ ಒಪ್ಪಿಗೆ ಪತ್ರ ನೀಡಬೇಕಿದೆ. ರೈತರ ಗುರುತಿನ ಚೀಟಿಗೆ ಸೇರದ 76787 ರೈತರು ದಾಖಲಾತಿಗಳೊಂದಿಗೆ ಸೇರ್ಪಡೆಯಾಗುವ ಅವಕಾಶ ಇದೆ. ರೈತರು ಇದರ ಲಾಭ ಪಡೆಯಬೇಕಿದೆ.
    > ಶರಣಪ್ಪ ಮುದುಗಲ್ ಜಂಟಿ ಕೃಷಿ ನಿರ್ದೇಶಕ

    ಒಂದೂ ಮುಕ್ಕಾಲು ಎಕರೆಯಲ್ಲಿ ಮೆಕ್ಕೆಜೋಳ ಬೆಳೆದಿದ್ದೆ. ಮಾರುಕಟ್ಟೆಯಲ್ಲಿ ಕೇವಲ 1200 ರೂ.ನಿಂದ 1300 ರೂ. ಬೆಲೆ ಇದ್ದುದರಿಂದಾಗಿ ನಷ್ಟವಾಗಿತ್ತು. ಇದೀಗ ಖಾತೆಗೆ 5 ಸಾವಿರ ರೂ. ಸಹಾಯಧನ ತಲುಪಿದೆ. ಇದರಿಂದ ಸಮಾಧಾನವಾಗಿದೆ.
    ಸೋಮಣ್ಣ ಬಾತಿ ಬೆಳಗುತ್ತಿ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts