More

    ಸಮಾವೇಶದಲ್ಲಿ ಸಮಾಜದ ಒಗ್ಗಟ್ಟಿನ ಮಂತ್ರ

    ದಾವಣಗೆರೆ : ಅಖಿಲ ಭಾರತ ವೀರಶೈವ ಮಹಾಸಭಾದ 24ನೇ ಮಹಾ ಅಧಿವೇಶನದ ಮೊದಲ ದಿನ ಒಗ್ಗಟ್ಟಿನ ಮಂತ್ರ ಪಠಿಸಲಾಯಿತು. ಒಳ ಪಂಗಡಗಳ ಭೇದ ಮರೆತು ಇಡೀ ಸಮಾಜದ ಹಿತದೃಷ್ಟಿಯಿಂದ ಒಂದಾಗುವ ಸಂಕಲ್ಪ ಮಾಡಲಾಯಿತು.
     ಜಾತಿ ಗಣತಿ, ಕೇಂದ್ರದ ಒಬಿಸಿ ಪಟ್ಟಿಗೆ ಸೇರ್ಪಡೆಯಂಥ ವಿಚಾರಗಳು ಪ್ರಮುಖವಾಗಿ ಚರ್ಚೆಗೆ ಬಂದರೂ, ಸಂಘಟನೆಯನ್ನು ಗಟ್ಟಿಗೊಳಿಸುವುದು, ಒಗ್ಗಟ್ಟಿನಿಂದ ಹೆಜ್ಜೆ ಹಾಕುವ ಬಗ್ಗೆಯೇ ಒತ್ತು ಕೊಡಲಾಯಿತು.
     ಸಮಾಜಕ್ಕೆ ಅನ್ಯಾಯವಾದಾಗಲೆಲ್ಲ ಮಹಾಸಭೆಯು ಸಮಾಜದ ಜತೆಗೆ ಗಟ್ಟಿಯಾಗಿ ನಿಂತಿದೆ ಎಂದು ಶ್ರೀಶೈಲ ಜಗದ್ಗುರುಗಳು ಹೇಳಿದರು. ಭೀಮಣ್ಣ ಖಂಡ್ರೆ ಅಧ್ಯಕ್ಷರಿದ್ದಾಗ ಸಮಾಜಕ್ಕೆ ಅನ್ಯಾಯವಾಗುವ ವರದಿಯ ಪ್ರತಿಯನ್ನು ಹರಿದು ಹಾಕಿದ್ದನ್ನು ನೆನಪಿಸಿದರು.
     ಕೆಲ ವರ್ಷಗಳ ಹಿಂದೆ ವೀರಶೈವ-ಲಿಂಗಾಯತ ಭೇದ ಕಲ್ಪಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ನಡೆದಾಗ ಮಹಾಸಭಾ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಸಮಾಜದ ಪರವಾಗಿ ಕಲ್ಲುಬಂಡೆಯಂತೆ ನಿಂತರು. ಅವರಲ್ಲದೇ ಬೇರೆ ಯಾರೇ ಆ ಸ್ಥಾನದಲ್ಲಿ ಇದ್ದಿದ್ದರೂ ಸಮಾಜ ಇಬ್ಭಾಗವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.
     ವೀರಶೈವ ಮಹಾಸಭೆಯ ಹಿರಿಯರು 119 ವರ್ಷಗಳ ಹಿಂದೆ ದೀಪವನ್ನು ಹಚ್ಚಿ ಸಮಾಜದ ಹಿತದ ಕನಸು ಕಂಡರು. ಸ್ವಾರ್ಥವನ್ನು ತೊರೆದು ಒಂದಾದರೆ ಅವರ ಆಶಯ ಈಡೇರುತ್ತದೆ ಎಂದು ಸಿರಿಗೆರೆ ಜಗದ್ಗುರುಗಳು ಸೂಚ್ಯವಾಗಿ ತಿಳಿಸಿದರು.
     1918 ರಲ್ಲಿ ಹರಿಹರದಲ್ಲಿ ಮಹಾಸಭೆಯ ಅಧಿವೇಶನ ನಡೆದಿತ್ತು ಎಂಬುದನ್ನು ಅವರು ಉಲ್ಲೇಖಿಸಿದರು. ಮೈಸೂರು ಬಸವಯ್ಯ ಅವರು ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.
     ಪ್ರಾಸ್ತಾವಿಕ ಮಾತನಾಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ವೀರಶೈವ-ಲಿಂಗಾಯತ ಎರಡೂ ಒಂದೇ. ಇವನಾರವ ಎನ್ನದೇ ಇವ ನಮ್ಮವ ಎಂದು ಭಾವಿಸಿದಾಗ ಸಂಘಟನೆ ಬಲವಾಗುತ್ತದೆ. ಸಮಾಜದಲ್ಲಿರುವ ಕಡು ಬಡವರು, ರೈತರು, ನಿರುದ್ಯೋಗಿಗಳು, ಆರ್ಥಿಕ ದುರ್ಬಲರನ್ನು ಮೇಲೆತ್ತುವ ಕಾರ್ಯ ಆಗಬೇಕಿದೆ. ಒಗ್ಗಟ್ಟಿನಿಂದ ಇದ್ದಾಗ ಇದೆಲ್ಲ ಸಾಧ್ಯ ಎಂದು ಹೇಳಿದರು.
     ಮಹಾಸಭಾ ರಾಜ್ಯಾಧ್ಯಕ್ಷ ಎನ್. ತಿಪ್ಪಣ್ಣ, ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಸಚಿವ ಭಗವಂತ ಖೂಬಾ, ಶಾಸಕರಾದ ಬಿ.ಪಿ. ಹರೀಶ್, ಡಿ.ಜಿ. ಶಾಂತನಗೌಡ, ಬಸವರಾಜು ಶಿವಗಂಗಾ, ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ್, ಎಸ್.ಎಸ್. ಪಾಟೀಲ್, ಮಹಾಸಭಾ ಉಪಾಧ್ಯಕ್ಷರಾದ ಶಂಕರ್ ಬಿದರಿ, ಸಚ್ಚಿದಾನಂದ ಮೂರ್ತಿ, ಎಸ್.ಎಸ್. ಗಣೇಶ್, ಸಮಾಜದ ಮುಖಂಡ, ವಾಣಿಜ್ಯೋದ್ಯಮಿ ಬಿ.ಸಿ. ಉಮಾಪತಿ, ಮಹಾಸಭೆ ಕಾರ್ಯದರ್ಶಿ ಎಚ್.ಎಂ. ರೇಣುಕ ಪ್ರಸನ್ನ ಇದ್ದರು. ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ್ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts