More

    ಪತ್ರಕರ್ತರ ರಾಜ್ಯಮಟ್ಟದ ಸಮ್ಮೇಳನಕ್ಕೆ ಬೆಣ್ಣೆನಗರಿ ಸಜ್ಜು

    ದಾವಣಗೆರೆ : ಪತ್ರಕರ್ತರ ರಾಜ್ಯಮಟ್ಟದ 38ನೇ ಸಮ್ಮೇಳನ ಬೆಣ್ಣೆನಗರಿ ದಾವಣಗೆರೆಯಲ್ಲಿ ಶನಿವಾರ ಮತ್ತು ಭಾನುವಾರ ನಡೆಯಲಿದ್ದು ಸಿದ್ಧತೆಗಳು ಪೂರ್ಣಗೊಂಡಿವೆ.
     ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವ, ಜಿಲ್ಲಾ ಘಟಕದ ಆತಿಥ್ಯ ಹಾಗೂ ಜಿಲ್ಲಾ ವರದಿಗಾರರ ಕೂಟದ ಸಹಯೋಗದಲ್ಲಿ ನಗರದ ಹದಡಿ ರಸ್ತೆಯಲ್ಲಿರುವ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜನೆಯಾಗಿರುವ ಸಮ್ಮೇಳನದಲ್ಲಿ ನಾಡಿನ ಎಲ್ಲ ಜಿಲ್ಲೆಗಳಿಂದ 2 ಸಾವಿರಕ್ಕೂ ಹೆಚ್ಚು ಪತ್ರಕರ್ತರು ನೋಂದಣಿ ಮಾಡಿಸಿದ್ದು ಅವರಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ.
     ದಾವಣಗೆರೆಯು ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲಿದ್ದಾಗ 31 ವರ್ಷಗಳ ಹಿಂದೆ (1992) ಇಲ್ಲಿನ ರಾಜನಹಳ್ಳಿ ಹನುಮಂತಪ್ಪ ಧರ್ಮಶಾಲೆಯಲ್ಲಿ ಪತ್ರಕರ್ತರ ರಾಜ್ಯಮಟ್ಟದ ಸಮ್ಮೇಳನ ನಡೆದಿತ್ತು. ದಾವಣಗೆರೆ ಜಿಲ್ಲೆ ರಚನೆಯಾಗಿ 25 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಸಮ್ಮೇಳನ ನಡೆಯುತ್ತಿದೆ.
     ಈ ಸಮ್ಮೇಳನದಲ್ಲಿ ಸಂಘದಿಂದ 40 ಜನರಿಗೆ ದತ್ತಿ ಪ್ರಶಸ್ತಿ ನೀಡಲಾಗುವುದು. ಜಿಲ್ಲೆಯ 60 ವರ್ಷ ಮೇಲ್ಪಟ್ಟ ಹಿರಿಯ ಪತ್ರಕರ್ತರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಗುತ್ತದೆ.
     ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗ್ಗೆ 10.30ಕ್ಕೆ ಸಮ್ಮೇಳನ ಉದ್ಘಾಟಿಸುವರು. ಸ್ಮರಣ ಸಂಚಿಕೆಯನ್ನು ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ ಬಿಡುಗಡೆ ಮಾಡುವರು. ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ವಸ್ತು ಪ್ರದರ್ಶನವನ್ನು, ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ವ್ಯಂಗ್ಯಚಿತ್ರ ಪ್ರದರ್ಶನ ಉದ್ಘಾಟಿಸುವರು. ತಾವು ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಲಿದ್ದು ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಉಪಸ್ಥಿತರಿರುವರು. ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸುವರು.
     ಸಮ್ಮೇಳನದ ವೇದಿಕೆಯನ್ನು ಆಕರ್ಷಕವಾಗಿ ರೂಪಿಸಲಾಗಿದೆ. ಕಲ್ಯಾಣ ಮಂಟಪದ ಮುಂಭಾಗದಲ್ಲಿ ವರ್ಣರಂಜಿತ ಸೀರೆಗಳಿಂದ ಸಿಂಗಾರ ಮಾಡಲಾಗಿದೆ. ಛಾಯಾಚಿತ್ರ ಪ್ರದರ್ಶನ, ವಸ್ತು ಪ್ರದರ್ಶನ ಹಾಗೂ ವ್ಯಂಗ್ಯಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅದಕ್ಕಾಗಿ 20 ಮಳಿಗೆಗಳನ್ನು ಸ್ಥಾಪಿಸಲಾಗಿದೆ.
     ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಮತ್ತು ಎಸ್ಪಿ ಉಮಾ ಪ್ರಶಾಂತ್ ಸಮ್ಮೇಳನ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದರು.
     
     …
     (ಬಾಕ್ಸ್)
     ಹರ್ಡೇಕರ್ ಮಂಜಪ್ಪ ವೇದಿಕೆ
     ಸಮ್ಮೇಳನ ನಡೆಯುವ ಮುಖ್ಯ ಸಭಾ ವೇದಿಕೆಗೆ ಹರ್ಡೇಕರ್ ಮಂಜಪ್ಪ ಅವರ ಹೆಸರಿಡಲಾಗಿದೆ.
     ಮುಖ್ಯದ್ವಾರಕ್ಕೆ ಎಚ್.ಎನ್. ಷಡಾಕ್ಷರಪ್ಪ ಮತ್ತು ಸಿ. ಕೇಶವಮೂರ್ತಿ, ಎರಡನೇ ದ್ವಾರಕ್ಕೆ ಕೆ.ಎಂ. ಸಿದ್ದಲಿಂಗಸ್ವಾಮಿ ಮತ್ತು ನಾ.ಬ. ರುದ್ರಮುನಿ, ಮೂರನೇ ದ್ವಾರಕ್ಕೆ ಜೆ.ಬಿ. ಶಿವಲಿಂಗಪ್ಪ ಮತ್ತು ಸುರೇಶ್ ದೀಕ್ಷಿತ್ ದ್ವಾರ ಎಂದು ನಾಮಕರಣ ಮಾಡಲಾಗಿದೆ.
     …
     
     * ವಾಹನ ನಿಲುಗಡೆಗೆ ವ್ಯವಸ್ಥೆ
     ರಾಜ್ಯದ ವಿವಿಧೆಡೆಯಿಂದ ಆಗಮಿಸುವ ಪ್ರತಿನಿಧಿಗಳ ವಾಹನಗಳನ್ನು ನಿಲುಗಡೆ ಮಾಡಲು ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದ ಮುಂಭಾಗದಲ್ಲಿರುವ ಖಾಲಿ ಜಾಗ ಮತ್ತು ಐಟಿಐ ಕಾಲೇಜು ಆವರಣದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.
     ಕಾರ್ಯಕ್ರಮ ನಡೆಯುವ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದ ಹೊರಗೆ ಮತ್ತು ಒಳಗೆ ಒಬ್ಬ ಡಿವೈಎಸ್ಪಿ, 4 ಜನ ಸಿಪಿಐ, 19 ಪಿಎಸ್‌ಐ, 19 ಎಎಸ್‌ಐ, 94 ಜನ ಹೆಡ್ ಕಾನ್‌ಸ್ಟೇಬಲ್ ಸೇರಿ ಒಟ್ಟು 168 ಜನ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
     …
     
     * ಬೆಳಗ್ಗೆ 9 ಗಂಟೆಗೆ ಮಹಾತ್ಮರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ ನಂತರ ಜಯದೇವ ವೃತ್ತದಿಂದ ಮೆರವಣಿಗೆ ಹೊರಡಲಿದೆ. ಸಾರೋಟಿನಲ್ಲಿ ಇರಿಸಲಾಗುವ, ವೃಕ್ಷದ ಆಕೃತಿಯಲ್ಲಿ ಬರುವ ರೆಂಬೆ ಕೊಂಬೆಗಳಲ್ಲಿ ವಿವಿಧ ಪತ್ರಿಕೆಗಳ ಶಿರೋನಾಮೆಗಳನ್ನು ಬಿಂಬಿಸಲಾಗುವುದು. ಮೆರವಣಿಗೆಯಲ್ಲಿ ಕಲಾ ತಂಡಗಳು ಗಮನ ಸೆಳೆಯಲಿವೆ.
     
     * ‘ಕೃತಕ ಬುದ್ಧಿಮತ್ತೆ ಮತ್ತು ಮಾಧ್ಯಮಗಳ ಭವಿಷ್ಯ’, ‘ಪತ್ರಿಕೆಗಳು : ಹಿಂದೆ-ಇಂದು-ಮುಂದು’,  ‘ಸಾಮಾಜಿಕ ಮಾಧ್ಯಮ – ವೃತ್ತಿ ವಿಶ್ವಾಸಾರ್ಹತೆ’, ‘ಮಾಧ್ಯಮ ಮತ್ತು ಸರ್ಕಾರ’ ವಿಷಯಗಳ ಕುರಿತು ಗೋಷ್ಠಿಗಳು ನಡೆಯಲಿವೆ. ಹಿರಿಯ ಪತ್ರಕರ್ತರು, ವಿಷಯ ತಜ್ಞರು ಭಾಗವಹಿಸುವರು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
     
     * ಭಾನುವಾರ ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಸಚಿವರಾದ ರಾಮಲಿಂಗಾರೆಡ್ಡಿ, ಸಂತೋಷ್ ಲಾಡ್, ಲಕ್ಷ್ಮೀ ಹೆಬ್ಬಾಳ್‌ಕರ್, ಈಶ್ವರ ಖಂಡ್ರೆ, ಸಂಸದ ಜಿ.ಎಂ. ಸಿದ್ದೇಶ್ವರ ಪಾಲ್ಗೊಳ್ಳುವರು.
     …
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts