More

    ವರ್ಷವಿಡೀ ಕಲಾ ಚಟುವಟಿಕೆ ನಡೆಸಲು ಚಿಂತನೆ

    ದಾವಣಗೆರೆ : ದೃಶ್ಯಕಲಾ ಮಹಾವಿದ್ಯಾಲಯ ಸ್ಥಾಪನೆಗೊಂಡು 2024ಕ್ಕೆ 60 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ವರ್ಷಪೂರ್ತಿ ದಾವಣಗೆರೆ ವಿಶ್ವವಿದ್ಯಾಲಯದಿಂದ ಕಲೆಗೆ ಉತ್ತೇಜನ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ವಿವಿಯ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಹೇಳಿದರು.
     ನಗರದ ವಿಶ್ವವಿದ್ಯಾಲಯ ದೃಶ್ಯಕಲಾ ಮಹಾವಿದ್ಯಾಲಯದ ಕಲಾ ಗ್ಯಾಲರಿಯಲ್ಲಿ ವಿಜಯಪುರದ ಸೋಮಶೇಖರ ಸಾಲಿ ಪ್ರತಿಷ್ಠಾನದ ಸಹಯೋಗದಲ್ಲಿ ಜನ್ಮ ಶತಮಾನೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ಏರ್ಪಡಿಸಿರುವ ಸೋಮಶೇಖರ ಸಾಲಿ ಅವರ ಚಿತ್ರಕಲಾ ಪ್ರದರ್ಶನವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
     ಜನವರಿಯಿಂದ ಡಿಸೆಂಬರ್ ವರೆಗೆ ವಿಶೇಷ ಕಾರ್ಯಕ್ರಮ ನಡೆಸಲು ಉತ್ಸುಕರಾಗಿದ್ದೇವೆ. ಎಲೆ ಮರೆಯ ಕಾಯಿಯಂತಿರುವ ಕಲಾ ಪ್ರತಿಭೆಗಳಿಗೆ ವೇದಿಕೆ ಒದಗಿಸಲು ಉದ್ದೇಶಿಸಲಾಗಿದೆ. ಅಂತಹ ಕಲಾವಿದರನ್ನು ಗುರುತಿಸಿ ವಿಶ್ವವಿದ್ಯಾಲಯದ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.
     ಕಲಾ ವಿಮರ್ಶಕ ಅಬ್ಬಿಗೇರಿಯ ಡಾ.ಡಿ.ಎ. ಉಪಾಧ್ಯ ಮಾತನಾಡಿ, ಸೋಮಶೇಖರ ಸಾಲಿ ಅವರ ಕಲಾಕೃತಿಗಳು ಸೂಕ್ಷ್ಮ ಸಂವೇದನೆ ಹೊಂದಿವೆ. ಅವರ ಜೀವನವೇ ಸೃಜನಶೀಲವಾಗಿತ್ತು ಎಂದರು.
     ಸಾಲಿ ಅವರ ಕಲಾಕೃತಿಗಳು ಭಾರತೀಯ ಶೈಲಿಯವು ಎನ್ನುವುದುಂಟು. ಆದರೆ ಅದು ಸರಿಯಲ್ಲ. ಸೂಕ್ಷ್ಮವಾಗಿ ಗಮನಿಸಿದಾಗ ಸಾಲಿ ಅವರ ಕಲಾಕೃತಿಗಳು ಬ್ರಿಟಿಷ್ ಅಕಾಡೆಮಿಕ್ ಶೈಲಿಯವು ಎಂಬುದು ಗೊತ್ತಾಗುತ್ತದೆ. ರವಿವರ್ಮ ಭಾರತಕ್ಕೆ ಇದನ್ನು ಪರಿಚಯಿಸಿದ. ನಂತರ ಎಲ್ಲರೂ ಹಳೆಯದನ್ನು ಬಿಟ್ಟು ಹೊಸದಕ್ಕೆ ಒಗ್ಗಿಕೊಂಡರು ಎಂದು ವಿಶ್ಲೇಷಿಸಿದರು.
     ಪ್ರತಿಷ್ಠಾನದ ವಿದ್ಯಾಧರ ಸಾಲಿ ಮಾತನಾಡಿ, ಮನುಷ್ಯನ ನೂರು ವರ್ಷ ಸರಾಸರಿ ಜೀವನದಲ್ಲಿ ನಿದ್ದೆ, ಬಾಲ್ಯ, ವೃದ್ಧಾಪ್ಯ, ಕುಟುಂಬ ನಿರ್ವಹಣೆ ಹೊರತುಪಡಿಸಿದರೆ ಸಾಧನೆಗೆ ಅಲ್ಪಸಮಯ ಮಾತ್ರ ಸಿಗುತ್ತದೆ. ಅದರಲ್ಲೇ ಇಷ್ಟೊಂದು ಒಳ್ಳೆಯ ಕಲಾಕೃತಿ ರಚಿಸಿದ ನಮ್ಮ ತಂದೆಯ ಶ್ರಮ ದೊಡ್ಡದು. ಅವರು ಕಲೆಗೆ ಸಂಪೂರ್ಣ ತೊಡಗಿಸಿಕೊಂಡಿದ್ದರು. ರಾಜ್ಯದ ವಿವಿಧೆಡೆ ಜನ್ಮ ಶತಮಾನೋತ್ಸವ ಏರ್ಪಡಿಸುವ ಮೂಲಕ ಅವರ ಕಲಾಕೃತಿಗಳನ್ನು ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
     ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ವಿಜಯಪುರದ ಪಿ.ಎಸ್. ಕಡೇಮನಿ, ನಿವೃತ್ತ ಇಂಜಿನಿಯರ್ ಶಿವಮೊಗ್ಗದ ಉಮಾಪತಿ ಶರ್ಮ, ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜೈರಾಜ ಎಂ.ಚಿಕ್ಕಪಾಟೀಲ್ ಇದ್ದರು. ಇದೇ ವೇಳೆ ಜನ್ಮ ಶತಮಾನೋತ್ಸವದ ಕರಪತ್ರ ಬಿಡುಗಡೆ ಮಾಡಲಾಯಿತು.
     ನಿತಿನ್ ಚನ್ನಬಸವ ಸಾಲಿ ಪ್ರಾರ್ಥಿಸಿದರು. ರಮೇಶ ಚವ್ಹಾಣ್ ವಂದಿಸಿದರು. ದತ್ತಾತ್ರೇಯ ಭಟ್ ಕಾರ್ಯಕ್ರಮ ನಿರೂಪಿಸಿದರು. ಚಿತ್ರಕಲಾ ಪ್ರದರ್ಶನವು ನ. 1ರವರೆಗೆ ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ ನಡೆಯಲಿದೆ.
     …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts