More

    ಧರ್ಮ, ಸಂಸ್ಕೃತಿಯ ಅರಿವು ಇಂದಿನ ಅಗತ್ಯ

    ದಾವಣಗೆರೆ: ಮಾನವೀಯ ಸಂಬಂಧಗಳು ಸಡಿಲಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಧರ್ಮ, ಸಂಸ್ಕೃತಿಯ ಅರಿವು ಅವಶ್ಯಕ ಎಂದು ರಂಭಾಪುರಿ ಜಗದ್ಗುರು ಶ್ರೀ ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
     ಶ್ರೀ ಮದ್ವೀರಶೈವ ಸದ್ಭೋಧನಾ ಸಂಸ್ಥೆಯಿಂದ ನಗರದ ಅಭಿನವ ರೇಣುಕ ಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜನಜಾಗೃತಿ ಧರ್ಮ ಸಮಾವೇಶದ ಎರಡನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
     ಮನುಷ್ಯ ಜೀವನವನ್ನು ಸುಂದರ ಹಾಗೂ ಶುದ್ಧಗೊಳಿಸುವುದೇ ಧರ್ಮದ ಮೂಲ ಗುರಿಯಾಗಿದೆ. ಸಮರ ಜೀವನವನ್ನು ಅಮರತ್ವದೆಡೆಗೆ ಕೊಂಡೊಯ್ಯುವುದೇ ನಿಜವಾದ ಧರ್ಮ. ಸತ್ಯ- ಪ್ರಾಮಾಣಿಕತೆಗಿಂತ ಮಿಗಿಲಾದ ಧರ್ಮ ಬೇರೊಂದಿಲ್ಲ. ಇದರ ರಕ್ಷಾಕವಚವಾದ ಸತ್ಯ ನಾಶವಾದಲ್ಲಿ ಜಗತ್ತಿನಲ್ಲಿ ಯಾವುದೂ ಉಳಿಯುವುದಿಲ್ಲ ಎಂದು ತಿಳಿಸಿದರು.
     ಪರಿಶುದ್ಧ ಮತ್ತು ಪವಿತ್ರ ಜೀವನ ರೂಪಿತಗೊಳ್ಳಲು ಶ್ರೀ ಜಗದ್ಗುರು ರೇಣುಕಾಚಾರ್ಯರು ನಿರೂಪಿಸಿದ ತತ್ವ ಸಿದ್ಧಾಂತಗಳ ಅರಿವು, ಆಚರಣೆ ಮುಖ್ಯವಾಗಿದೆ. ಈ ದಿಸೆಯಲ್ಲಿ ಸರ್ವರೂ ಅರಿತು ಬಾಳಿದರೆ ಮಾನವ ಜೀವನ ಸಾರ್ಥಕವಾಗಲಿದೆ ಎಂದು ಹೇಳಿದರು.
     ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿ ಮಾತನಾಡಿ ಇಂದಿನ ವೈಚಾರಿಕ ಯುಗದಲ್ಲಿ ಧರ್ಮ ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಗೆ ಶ್ರಮಿಸುವ ಅಗತ್ಯವಿದೆ. ವೀರಶೈವ ಧರ್ಮದ ವಿಚಾರ ಧಾರೆಗಳು ಮನುಕುಲದ ಶ್ರೇಯಸ್ಸಿಗೆ ದಾರಿದೀಪ ಎಂದು ಹೇಳಿದರು.
     ದಾವಣಗೆರೆ ಹರಿಹರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎನ್.ಎ.ಮುರುಗೇಶ್ ಆರಾಧ್ಯ ಸಹಕಾರಿ ಸೇವಾ ಭೂಷಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ರಾಜ್ಯದಲ್ಲಿ ವೀರಶೈವ ಮಠಗಳು ಅಕ್ಷರ ಹಾಗೂ ಅನ್ನದಾಸೋಹ ನಡೆಸುತ್ತ ಸಮಾಜದ ಶ್ರೇಯೋಭಿವೃದ್ಧಿಗೆ ನಿರಂತರ ಶ್ರಮಿಸುತ್ತಿವೆ ಎಂದು ಹೇಳಿದರು.
     ಅಕ್ಷರ ಹಾಗೂ ಅನ್ನ ದಾಸೋಹ ನಡೆಸಿದ ವೀರಶೈವ ಮಠದ ಗುರುಗಳೊಬ್ಬರ ಭಾವಚಿತ್ರವನ್ನು ವಿಧಾನಸೌಧದಿಂದ ತೆಗೆದುಹಾಕಲಾಗಿದೆ. ಆದರೆ ಯಾವುದೇ ಜನಪ್ರತಿನಿಧಿಗಳೂ ಇದರ ಬಗ್ಗೆ ಧ್ವನಿ ಎತ್ತಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
     ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಮಾತನಾಡಿ ಸಮಾಜವನ್ನು ತಿದ್ದಲು ಹಾಗೂ ಸರಿದಾರಿಗೆ ತರಲು ರಂಭಾಪುರಿ ಜಗದ್ಗುರುಗಳು ಧರ್ಮ ಕಾರ್ಯಕ್ರಮ ನಡೆಸುವ ಮೂಲಕ ನಿರಂತರ ಶ್ರಮಿಸುತ್ತಿದ್ದಾರೆ. ಗುರುಗಳ ನೇತೃತ್ವದಲ್ಲಿ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಮುನ್ನಡೆಸಿಕೊಂಡು ಹೋಗೋಣ ಎಂದು ಹೇಳಿದರು.
     ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಹರಪನಹಳ್ಳಿ ತೆಗ್ಗಿನಮಠದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ, ಮೂತ್ರರೋಗ ತಜ್ಞ ಡಾ.ನವೀನ್, ದೇವರಮನೆ ಶಿವಕುಮಾರ್ ಇದ್ದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಿ.ಎಸ್.ಜಗದೀಶ್, ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಎಚ್.ದೇವರಾಜ್, ಗೋಪಾಲ್‌ರಾವ್ ಮಾನೆ ಅವರನ್ನು ಸನ್ಮಾನಿಸಲಾಯಿತು.
      ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್ ಸ್ವಾಗತಿಸಿದರು. ಹರಿಹರದ ಕಾಂತರಾಜ ಮತ್ತು ವೀರೇಶ ಬಡಿಗೇರ ಸಂಗೀತ ಸೇವೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts