ದಾವಣಗೆರೆ: ಪರಿಸರಕ್ಕೆ ಪೂರಕವಾದ ಎಲೆಕ್ಟ್ರಿಕಲ್ ವಾಹನಗಳನ್ನು ಅವಲಂಬಿಸುವ ಅಗತ್ಯವಿದೆ ಎಂದು ಡೆಸಿಬಲ್ಸ್ ಲ್ಯಾಬ್ ಪ್ರೈ.ಲಿ.ನ ಸಿಇಒ ಎಸ್.ಡಿ.ಸೂರಜ್ ಹೇಳಿದರು.
ನಗರದ ಬಿಐಇಟಿ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಿಂದ ಶುಕ್ರವಾರ ಆರಂಭವಾದ ಎಲೆಕ್ಟ್ರಿಕಲ್ ವಾಹನಗಳ ಕುರಿತ ಮೂರು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪೆಟ್ರೋಲ್, ಡೀಸೆಲ್ ವಾಹನಗಳಿಂದ ವಾಯುಮಾಲಿನ್ಯ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕಲ್ ವಾಹನಗಳು ಅನಿವಾರ್ಯವಾಗಲಿವೆ. ಪೆಟ್ರೋಲ್, ಡೀಸೆಲ್ ವಾಹನಗಳು ಉಗುಳುವ ಹೊಗೆಯಿಂದ ಇಂಗಾಲ ಡೈ ಆಕ್ಸೈಡ್ ಪ್ರಮಾಣ ಹೆಚ್ಚುತ್ತಿದೆ ಎಂದು ತಿಳಿಸಿದರು.
ವಾಹನ ಹಾಗೂ ಇಂಧನಗಳ ಬೆಲೆ ದುಬಾರಿಯಾಗುತ್ತಿರುವ ಇಂದಿನ ದಿನಗಳಲ್ಲಿ ತಂತ್ರಜ್ಞಾನಕ್ಕಾಗಿ ಬೇರೆಯವರನ್ನು ಬೇಡುವ ಬದಲು ವಿದ್ಯಾರ್ಥಿಗಳು ಪರಿಣಾಮಕಾರಿ ಹಾಗೂ ಪರಿಸರಸ್ನೇಹಿ ತಂತ್ರಜ್ಞಾನ ಸಂಶೋಧಿಸಿ ಜನಸಾಮಾನ್ಯರಿಗೆ ತಲುಪಿಸಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಡಾ.ಎಂ.ಸಿ. ನಟರಾಜ, ಕಾಲೇಜಿನ ನಿರ್ದೇಶಕ ಪ್ರೊ.ವೈ.ವೃಷಭೇಂದ್ರಪ್ಪ ಮಾತನಾಡಿದರು. ವಿಭಾಗದ ಮುಖ್ಯಸ್ಥ ಡಾ.ಎಸ್.ಕೆ. ಕುಮಾರಪ್ಪ, ಡಿ.ಇ.ಉಮೇಶ್, ಟಿ.ಆರ್. ಮೋಹನ್, ಡಾ.ತಿಪ್ಪೇಸ್ವಾಮಿ ಏಕಬೋಟೆ, ಇ.ಅಶೋಕ ಇದ್ದರು.