More

    ಐತಿಹಾಸಿಕ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕ್ರಮ

    ದಾವಣಗೆರೆ : ಎರಡನೇ ಮಂತ್ರಾಲಯ ಎಂದು ಪ್ರಸಿದ್ಧಿ ಪಡೆದಿರುವ ಹೊನ್ನಾಳಿಯ ಪುಣ್ಯ ಕ್ಷೇತ್ರ ರಾಘವೇಂದ್ರ ಸ್ವಾಮಿಗಳ ಮಠ ಹಾಗೂ ತೀರ್ಥರಾಮೇಶ್ವರ ಸೇರಿ ತಾಲೂಕಿನ ಐತಿಹಾಸಿಕ ಕ್ಷೇತ್ರಗಳನ್ನು ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
     ಹೊನ್ನಾಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತೀರ್ಥರಾಮೇಶ್ವರ ಗ್ರಾಮದಿಂದ ಮಂಗಳವಾರ ಪ್ರಚಾರ ಕಾರ್ಯ ಆರಂಭಿಸಿದ ಅವರು, ಬೆಳಗುತ್ತಿ ಮಲ್ಲಿಗೇನಹಳ್ಳಿ, ರಾಮೇಶ್ವರ ಹರಗನಹಾಳು, ಗುಡಹಳ್ಳಿ, ಜೀನಹಳ್ಳಿ, ಕತ್ತಿಗೆ, ಕೆಂಚಿಕೊಪ್ಪ, ಚಿನ್ನಿಕಟ್ಟೆ, ಸವಳಂಗ, ಸೊಗಿಲು ಚಟ್ನಹಳ್ಳಿ, ಫಲವನಹಳ್ಳಿ, ಮುಸ್ಸೇನಹಾಳು, ಕುಂಕವ, ವಡೆಯರಹತ್ತೂರು, ಗಂಗನಕೋಟೆ, ಬಸವನಹಳ್ಳಿ, ಹರಳಹಳ್ಳಿ, ಅರಬಗಟ್ಟೆ, ಮಾದನಬಾವಿ, ಸೊರಟೂರು ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.
     ಹೊನ್ನಾಳಿ ತಾಲೂಕಿನಲ್ಲಿ ಅನೇಕ ಐತಿಹಾಸಿಕ ಸ್ಥಳಗಳಿದ್ದು, ಕೇಂದ್ರದಿಂದ ಹೆಚ್ಚಿನ ಅನುದಾನ ತಂದು ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
     ಕೇಂದ್ರದಿಂದ ಪ್ರತಿ ಕ್ಷೇತ್ರಕ್ಕೆ ವಸತಿಯುತ ಶಾಲೆಗಳು ಮಂಜೂರಾಗಲಿದ್ದು, ಅವುಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಈ ಭಾಗದ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
     ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ತರುವ ಭರವಸೆ ನೀಡಿತ್ತು. ಅದರಂತೆ ಸರ್ಕಾರ ಬಂದ ತಕ್ಷಣ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು, ಹೊನ್ನಾಳಿ ವಿಧಾನಸಭಾ ಕ್ಷೇತ್ರವೊಂದಕ್ಕೆ ಮಾರ್ಚ್ ಅಂತ್ಯಕ್ಕೆ ಸುಮಾರು 128 ಕೋಟಿ ರೂ.ಗಳಷ್ಟು ಹಣವನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ಹೇಳಿದರು.
     ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಂಚ ನ್ಯಾಯ ಪಚ್ಚೀಸ್ ಗ್ಯಾರಂಟಿ ಭರವಸೆಗಳನ್ನು ನೀಡಲಾಗಿದ್ದು, ಯುವ ನ್ಯಾಯದಡಿ ಯುವಕರಿಗೆ ಉದ್ಯೋಗ, ಮಹಿಳಾ ನ್ಯಾಯದಡಿ ಪ್ರತಿ ಮಹಿಳೆಗೆ 1 ಲಕ್ಷ ರೂ., ರೈತ ನ್ಯಾಯದಡಿ ಸ್ವಾಮಿನಾಥನ್ ಆಯೋಗವನ್ನು ಜಾರಿಗೊಳಿಸುವುದು. ನರೇಗಾ ಕೂಲಿ ಹಣವನ್ನು 400 ರೂ.ಗಳಿಗೆ ಹೆಚ್ಚಿಸಲಾಗುವುದು. ಇಂಥ ಹಲವು ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದ್ದು, ಅದರಂತೆ ಜಾರಿಗೆ ತರುತ್ತೇವೆ ಎಂದರು.
     ಶಾಸಕ ಡಿ.ಜಿ.ಶಾಂತನಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಯೋಗಿ, ನಾಗಪ್ಪ, ಡಿ.ಜಿ.ವಿಶ್ವನಾಥ್, ಮುಖಂಡರಾದ ಗದಿಗೇಶ್, ಬಿ. ಸಿದ್ದಪ್ಪ, ಉಮಾಪತಿ, ಚಂದ್ರಶೇಖರಪ್ಪ, ಮಧುಗೌಡ, ರಾಘವೇಂದ್ರ ನಾಯ್ಕ, ಜಯದೇವ ನಾಯ್ಕ ಸೇರಿ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts