More

    ನುಡಿದಂತೆ ನಡೆದಿದ್ದೇವೆ, ಮುಂದೆಯೂ ನಡೆಯುತ್ತೇವೆ

    ದಾವಣಗೆರೆ : ಕಾಂಗ್ರೆಸ್ ಸರ್ಕಾರ ಎಂದರೆ ಗ್ಯಾರಂಟಿ, ಗ್ಯಾರಂಟಿ ಎಂದರೆ ಕಾಂಗ್ರೆಸ್. ನಾವು ನುಡಿದಂತೆ ನಡೆದಿದ್ದೇವೆ, ನಡೆಯುತ್ತೇವೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
     ಹರಿಹರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಣೆಬೆಳಕೆರೆ ಗ್ರಾಮದಿಂದ ಪ್ರಚಾರ ಕಾರ್ಯ ಆರಂಭಿಸಿದ ಅವರು ನಂದಿತಾವರೆ, ಭಾಸ್ಕರ್ ರಾವ್ ಕ್ಯಾಂಪ್, ವಿನಾಯಕ ನಗರ, ಕುಂಬಳೂರು, ನಿಟ್ಟೂರು, ಆದಾಪುರ, ಬೂದಿಹಾಳು, ನೆಹರು ಕ್ಯಾಂಪ್, ಗುಳದಹಳ್ಳಿ, ಸಂಕ್ಲೀಪುರ, ಮಲ್ಲನಾಯಕನಹಳ್ಳಿ, ಹರಳಹಳ್ಳಿ, ಹಾಲಿವಾಣ, ಕೊಪ್ಪ, ದಿಬ್ಬದಹಳ್ಳಿ, ಕೊಮಾರನಹಳ್ಳಿ, ಜಿಗಳಿ, ಜಿ.ಬೇವಿನಹಳ್ಳಿ, ಹಳ್ಳಿಹಾಳು, ಹಳ್ಳಿಹಾಳು ಕ್ಯಾಂಪ್, ಕಂಬತ್ತಹಳ್ಳಿ, ಕೊಕ್ಕನೂರು, ಜಿ.ಟಿ.ಕಟ್ಟೆ, ಮೂಗಿನಗೊಂದಿ, ಹಿಂಡಸಘಟ್ಟ ಕ್ಯಾಂಪ್, ಹಿಂಡಸಘಟ್ಟ, ಗೋವಿನಹಾಳು, ಗೋವಿನಹಾಳು ಕ್ಯಾಂಪ್‌ನಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.
     ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ತರುವ ಭರವಸೆ ನೀಡಿತ್ತು. ಅದರಂತೆ ಸರ್ಕಾರ ಬಂದ ತಕ್ಷಣ ಐದೂ ಯೋಜನೆಗಳನ್ನು ಜಾರಿಗೆ ತಂದು, ಹರಿಹರ ವಿಧಾನಸಭಾ ಕ್ಷೇತ್ರವೊಂದಕ್ಕೆ ಸುಮಾರು 168 ಕೋಟಿ ರೂ.ಗಳಷ್ಟು ಹಣವನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ತಿಳಿಸಿದರು.
     ಅದೇ ರೀತಿ ನಮ್ಮ ಸರ್ಕಾರ ಉದ್ಯೋಗದ ಭರವಸೆ ನೀಡಿದ್ದು, ಈಗಾಗಲೇ ಸಾವಿರಾರು ಉದ್ಯೋಗಗಳನ್ನು ರಾಜ್ಯ ಸರ್ಕಾರದ ಮಟ್ಟದಲ್ಲಿ ಸೃಜಿಸಲಾಗಿದ್ದು, ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಹರಿಹರದಲ್ಲಿಯೂ ಕಾರ್ಖಾನೆಗಳನ್ನು ಸ್ಥಾಪಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
     ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಂಚ ನ್ಯಾಯ ಪಚ್ಚೀಸ್ ಗ್ಯಾರಂಟಿ ಭರವಸೆಗಳನ್ನು ನೀಡಲಾಗಿದ್ದು, ಯುವ ನ್ಯಾಯದಡಿ ಯುವಕರಿಗೆ ಉದ್ಯೋಗ, ಮಹಿಳಾ ನ್ಯಾಯದಡಿ ಪ್ರತಿ ಮಹಿಳೆಗೆ 1 ಲಕ್ಷ ರೂ., ರೈತ ನ್ಯಾಯದಡಿ ಸ್ವಾಮಿನಾಥನ್ ಆಯೋಗವನ್ನು ಜಾರಿಗೊಳಿಸುವುದು ಸೇರಿ ಹಲವು ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ. ಅದರಂತೆ ನಾವು ಜಾರಿಗೆ ತರುತ್ತೇವೆ ಎಂದರು.
     ಮಾಜಿ ಶಾಸಕ ಎಸ್.ರಾಮಪ್ಪ, ಕಳೆದ ಚುನಾವಣೆಯಲ್ಲಿ ಹರಿಹರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಶ್ರೀನಿವಾಸ್ ನಂದಿಗಾವಿ ಮಾತನಾಡಿ ಕಾಂಗ್ರೆಸ್ ಪಕ್ಷವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಬಡವರು, ದೀನ ದಲಿತರು, ರೈತರು, ಕೂಲಿ ಕಾರ್ಮಿಕರು, ನಿರುದ್ಯೋಗಿಗಳು ಸೇರಿ ಎಲ್ಲರಿಗೂ ಅನುಕೂಲವಾಗುವ ಅನೇಕ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಿದೆ ಎಂದು ತಿಳಿಸಿದರು.
     ಚಿತ್ರದುರ್ಗ ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಎಸ್.ಎಸ್.ಬಕ್ಕೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಾಗೀಶ್ ಸ್ವಾಮಿ, ಹರಿಹರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ. ಹನುಮಂತಪ್ಪ, ಮಲೆಬೆನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಬೀದ್ ಅಲಿ, ಕುಣೆಬೆಳಕೆರೆ ವಿರೂಪಾಕ್ಷಪ್ಪ, ಕುಣೆಬೆಳಕೆರೆ ಬಸವರಾಜಪ್ಪ, ಹಾಲೇಶ ಗೌಡ, ಮೇಕಾ ಮುರುಳಿಕೃಷ್ಣ, ಸಪ್ತಗಿರಿ ರಾಮಮೂರ್ತಿ, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts