More

    ಚೀನಾ ವಸ್ತುಗಳ ನಿಷೇಧಕ್ಕೆ ಆಗ್ರಹ

    ದಾವಣಗೆರೆ: ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ ವಸ್ತುಗಳನ್ನು ನಿಷೇಧಿಸಬೇಕು ಹಾಗೂ ಅವುಗಳ ಮಾರಾಟವನ್ನು ಸಂಪೂರ್ಣ ಬಂದ್ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

    ಗುಂಡಿ ಸರ್ಕಲ್‌ನಲ್ಲಿ ಪ್ರತಿಭಟನಾಕಾರರು ಚೀನಾ ವಸ್ತುಗಳನ್ನು ನಾಶಪಡಿಸಿ ಆಕ್ರೋಶ ವ್ಯಕ್ತಪಡಿಸಿದರು.

    ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ, ನಮ್ಮ ದೇಶದಲ್ಲಿ ಉತ್ಪಾದನೆಯಾಗುವ ವಸ್ತುಗಳನ್ನು ನಾವೆಲ್ಲ ಉಪಯೋಗಿಸೋಣ, ಚೀನಾ ವಸ್ತುಗಳ ಆಮದು ನಿಷೇಧಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.

    ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅನಿತಾಬಾಯಿ ಮಾಲತೇಶ್ ಮಾತನಾಡಿ, ಮುಂದಿನ ದಿನಗಳಲ್ಲಿ ಗಣೇಶ ಚತುರ್ಥಿ ಹಾಗೂ ದೀಪಾವಳಿ ಹಬ್ಬ ಗಳಲ್ಲಿಯೂ ಸಹ ಚೀನಾ ವಸ್ತುಗಳನ್ನು ಉಪಯೋಗಿಸದೆ ನಮ್ಮ ದೇಶದಲ್ಲಿ ಉತ್ಪಾದನೆಯಾಗುವ ವಸ್ತುಗಳನ್ನು ಬಳಸಿ ಎಂದು ಕರೆ ನೀಡಿದರು.

    ನಗರಸಭೆ ಮಾಜಿ ಅಧ್ಯಕ್ಷ ಕೆ.ಜಿ.ಶಿವಕುಮಾರ್ ಮಾತನಾಡಿ, ದೇಶದ ಪ್ರತಿಯೊಬ್ಬರೂ ಚೀನಾ ವಸ್ತುಗಳನ್ನು ವಿರೋಧಿಸಿ ದೇಶಾಭಿಮಾನ ತೋರಬೇಕೆಂದು ತಿಳಿಸಿದರು.

    ಜಿಲ್ಲಾ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ್ ಮಾತನಾಡಿ, ಚೀನಾ ವಸ್ತುಗಳನ್ನು ನಾವು ಉಪಯೋಗಿಸುವುದರಿಂದ ದೇಶದಲ್ಲಿ ಗುಡಿ ಕೈಗಾರಿಕೆ ಮತ್ತು ಸಣ್ಣ ಕೈಗಾರಿಕೆಗಳಿಗೆ ಪೆಟ್ಟು ಬೀಳುತ್ತಿದೆ, ಆರ್ಥಿಕ ಸ್ಥಿತಿ ಪತನದತ್ತ ಸಾಗುತ್ತಿದೆ ಎಂದರು.

    ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಮಾತನಾಡಿ, ನಾವು ಸದಾ ಸೈನಿಕರ ಬೆಂಬಲಕ್ಕೆ ನಿಲ್ಲಬೇಕು. ನಮ್ಮ ಯೋಧರ ಮೇಲೆ ನಡೆದ ದಾಳಿಗೆ ಪ್ರತೀಕಾರ ತೀರಿಸಬೇಕೆಂದು ತಿಳಿಸಿದರು.

    ಪಾಲಿಕೆ ಸದಸ್ಯರಾದ ದೇವರಮನೆ ಶಿವಕುಮಾರ್, ಗಡಿ ಗುಡಾಳ್ ಮಂಜುನಾಥ್, ತಾಪಂ ಸದಸ್ಯೆ ಆಶಾ ಮುರಳಿ, ಮುಖಂಡರಾದ ದಾದಾಪೀರ್, ಕೆ.ಎಲ್.ಹರೀಶ್ ಬಸಾಪುರ, ಮುಜಾಹಿದ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts