More

    ಅಭಿವೃದ್ಧಿ ಸಂಕಲ್ಪದ ಮಹಾನಗರ ಪಾಲಿಕೆ ಬಜೆಟ್

    ದಾವಣಗೆರೆ : ಸ್ಕೈವಾಕ್, ಫ್ಲೈಓವರ್ ನಿರ್ಮಾಣ ಸೇರಿ ನಗರದ ಅಭಿವೃದ್ಧಿ ಸಂಕಲ್ಪದ, 17.65 ಕೋಟಿ ರೂ. ಉಳಿತಾಯದ 2024-25ನೇ ಸಾಲಿನ ಬಜೆಟ್ ಅನ್ನು ಕಾಂಗ್ರೆಸ್ ಆಡಳಿತದ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಮಂಗಳವಾರ ಮಂಡಿಸಲಾಯಿತು.
     ಪಾಲಿಕೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಜಗದೀಶ್ ಬಜೆಟ್ ಮಂಡಿಸಿದರು.
     ಈ ಹಿಂದಿನ ಬಜೆಟ್‌ಗಳಲ್ಲಿ ಘೋಷಣೆಯಾಗಿದ್ದ ಹಲವು ಯೋಜನೆಗಳು ಈ ಬಾರಿಯೂ ಪ್ರಸ್ತಾಪವಾಗಿವೆ. ಮೂಲ ಸೌಲಭ್ಯಗಳಿಗೆ ಆದ್ಯತೆ ನೀಡುವ ಜತೆಗೆ ಮಾಲಿನ್ಯ ನಿಯಂತ್ರಣ, ತ್ಯಾಜ್ಯ ನಿರ್ವಹಣೆ, ಕ್ರೀಡೆ, ಆರೋಗ್ಯಕ್ಕೂ ಒತ್ತು ಕೊಡಲಾಗಿದೆ.
     ವಾಣಿಜ್ಯ ಮಳಿಗೆಗಳ ಬಾಡಿಗೆ, ಕಟ್ಟಡ, ಉದ್ದಿಮೆ ಪರವಾನಗಿ, ಅಭಿವೃದ್ಧಿ ಶುಲ್ಕ, ನೀರು ಸರಬರಾಜು ಶುಲ್ಕ, ಆಸ್ತಿ ತೆರಿಗೆ, ಎಸ್‌ಎಫ್‌ಸಿ ವೇತನ ಅನುದಾನ ಸೇರಿ 155.67 ಕೋಟಿ ರೂ. ರಾಜಸ್ವ ಜಮೆಗಳನ್ನು ಬಜೆಟ್‌ನಲ್ಲಿ ತೋರಿಸಲಾಗಿದೆ.
     ಒಟ್ಟು 139.93 ಕೋಟಿ ರೂ. ರಾಜಸ್ವ ಪಾವತಿ, 182.24 ಕೋಟಿ ರೂ. ಬಂಡವಾಳ ಜಮೆ, 228.34 ಕೋಟಿ ರೂ. ಬಂಡವಾಳ ಪಾವತಿ, 189.51 ಕೋಟಿ ರೂ. ಅಸಾಮಾನ್ಯ ಜಮೆಗಳು, 195.52 ಕೋಟಿ ರೂ. ಅಸಾಮಾನ್ಯ ಪಾವತಿಗಳನ್ನು ಈ ಆಯವ್ಯಯ ಒಳಗೊಂಡಿದೆ.
     ಬಜೆಟ್ ಪ್ರತಿಗಳನ್ನು ಮೇಯರ್ ಬಿ.ಎಚ್. ವಿನಾಯಕ ಬಿಡುಗಡೆ ಗೊಳಿಸಿದರು. ಉಪ ಮೇಯರ್ ಯಶೋದಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ಲತೀಫ್, ಎಚ್. ಉದಯಕುಮಾರ್, ಆಯುಕ್ತೆ ರೇಣುಕಾ ಇದ್ದರು.
     …
     
     * ಫ್ಲೈ-ಓವರ್ ನಿರ್ಮಾಣ
     ನಗರದಲ್ಲಿ ವಿಪರೀತ ವಾಹನ ದಟ್ಟಣೆ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಹಾಗೂ ವಾಹನ ಅಪಘಾತಗಳ ಪ್ರಮಾಣ ತಗ್ಗಿಸಲು ಈರುಳ್ಳಿ ಮಾರ್ಕೆಟ್‌ನಿಂದ ವಿನೋಬನಗರ 4ನೇ ಮೇನ್ ವರೆಗೆ ಮೇಲು ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆ.
     ಇದರ ಕಾರ್ಯಸಾಧ್ಯತಾ ವರದಿ, ಡಿಪಿಆರ್ ತಯಾರಿಯ ನಂತರ ಯೋಜನಾ ವೆಚ್ಚದ ಅಂದಾಜು ಸಿಗಲಿದ್ದು, ಪ್ರಸಕ್ತ ವರ್ಷದಲ್ಲಿಯೆ ಯೋಜನೆ ಕಾರ್ಯಾರಂಭ ಮಾಡಲು ಉದ್ದೇಶಿಸಲಾಗಿದೆ.
     …
     
     * ಪಾದಚಾರಿಗಳಿಗೆ ಸ್ಕೈ-ವಾಕ್
     ಬಹು ದಿನಗಳಿಂದ ನನೆಗುದಿಗೆ ಬಿದ್ದಿದ್ದ ಸ್ಕೈ-ವಾಕ್ ನಿರ್ಮಾಣ ವಿಚಾರ ಪ್ರಸ್ತುತ ಬಜೆಟ್‌ನಲ್ಲೂ ಪ್ರಸ್ತಾಪವಾಗಿದೆ. ಪಾಲಿಕೆ ಹಾಗೂ ರೈಲು ನಿಲ್ದಾಣದ ಮುಂಭಾಗ ಅಧಿಕ ವಾಹನ ದಟ್ಟಣೆ ಉಂಟಾಗುತ್ತಿದ್ದು, ಪಾದಚಾರಿಗಳ ಸುಗಮ ಸಂಚಾರಕ್ಕೆ ಸ್ಕೈ-ವಾಕ್ ನಿರ್ಮಿಸಲು ಆಯವ್ಯಯದಲ್ಲಿ 1 ಕೋಟಿ ರೂ. ಮೀಸಲಿಡಲಾಗಿದೆ.
     …
     
     *ಬಾತಿ-ಆವರಗೆರೆ ಕೆರೆ ಅಭಿವೃದ್ಧಿ
     ನಗರ ವ್ಯಾಪ್ತಿಯ ಆವರಗೆರೆ ಹಾಗೂ ಬಾತಿ ಕೆರೆಗಳ ಸಮಗ್ರ ಅಭಿವೃದ್ಧಿಗೆ ಯೋಜಿಸಲಾಗಿದೆ. ಇದರಲ್ಲಿ ಒಂದು ಕೆರೆಯನ್ನು ನೀರು ಸಂಗ್ರಹ ಹಾಗೂ ಮತ್ತೊಂದು ಕೆರೆಯನ್ನು ದೋಣಿ ವಿಹಾರ ಹಾಗೂ ಜಲಕ್ರೀಡೆ ವ್ಯವಸ್ಥೆಯೊಂದಿಗೆ ಪಿಕ್‌ನಿಕ್ ಸ್ಪಾಟ್ ಆಗಿ ರೂಪಿಸಲು ಉದ್ದೇಶಿಸಲಾಗಿದೆ. ಕಾರ್ಯಸಾಧ್ಯತಾ ವರದಿ, ಡಿಪಿಆರ್ ತಯಾರಾದ ನಂತರ ಯೋಜನಾ ವೆಚ್ಚದ ಅಂದಾಜು ಸಿಗಲಿದ್ದು ಪ್ರಸ್ತುತ ವರ್ಷದಲ್ಲೆ ಕಾರ್ಯಾರಂಭ ಮಾಡಲಾಗುವುದು.
     …
     
     * ಚರಂಡಿ-ಕಾಲುವೆಗಳಿಗೆ ಒತ್ತು
     ರಾಜ್ಯ ಹಾಗೂ ಕೇಂದ್ರ ಸರ್ಕಾರ ಮತ್ತು ಜರ್ಮನ್ ಬ್ಯಾಂಕ್ ನೆರವಿನಡಿ 1000 ಕೋಟಿಗಳ ಅಭಿವೃದ್ಧಿ ಯೋಜನೆ ಕೈಗೊಳ್ಳಲು ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದ್ದು, ಮೊದಲ ಹಂತದಲ್ಲಿ 650 ಕೋಟಿ ರೂ.ಗಳಲ್ಲಿ ನಗರ ವ್ಯಾಪ್ತಿಯ ಚರಂಡಿ, ಕಾಲುವೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಕ್ರಿಯಾ ಯೋಜನೆ ಸಲ್ಲಿಸಲಾಗುವುದು.
     …
     
     * ಮಾಲಿನ್ಯ ನಿಯಂತ್ರಣ: ನಗರವನ್ನು ಧೂಳು ಮುಕ್ತವಾಗಿಸಿ ಶುದ್ಧ ಗಾಳಿ ದೊರೆಯಲು ಪೂರಕವಾಗಿ ಕ್ಲೀನ್ ಏರ್ ಪ್ರೋಗ್ರಾಂ ಅಡಿ ಕಳೆದ ಸಾಲಿನ 7 ಕೋಟಿ ರೂ ಹಾಗೂ 2024-25ನೇ ಸಾಲಿನಲ್ಲಿ ಬಿಡುಗಡೆಯಾಗುವ 10 ಕೋಟಿ ರೂ.ಗಳಲ್ಲಿ ನವೀನ ರೀತಿಯ ಪೇವರ್ಸ್‌ಗಳ ಅಳವಡಿಕೆ ಹಾಗೂ ಗಿಡಮರಗಳನ್ನು ಬೆಳೆಸಲು ಕ್ರಮ ವಹಿಸಲಾಗುವುದು.
     
     * ವೆಂಡಿಂಗ್ ರೆನ್ : ನಗರದಲ್ಲಿ ಈಗಾಗಲೇ ಡೇ ನಲ್ಮ್ ಯೋಜನೆಯಡಿ 4 ವೆಂಡಿಂಗ್ ರೆನ್‌ಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ಇನ್ನೂ ಮೂರು ಜಾಗಗಳಲ್ಲಿ 1.76 ಕೋಟಿ ರೂ. ಅಂದಾಜು ವೆಚ್ಚದಲ್ಲಿ ವೆಂಡಿಂಗ್ ರೆನ್‌ಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ.
     
     * ಅವೈಜ್ಞಾನಿಕ ರಸ್ತೆ ಉಬ್ಬು ಸರಿಪಡಿಸುವುದು : ನಗರದ ರಸ್ತೆಗಳಲ್ಲಿ ಅನೇಕ ಕಡೆ ರಸ್ತೆ ಉಬ್ಬುಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ್ದು, ಸರ್ವೀಸ್ ಗ್ಯಾಪ್‌ಗಳಲ್ಲಿ ಅಳವಡಿಸಿರುವ ಪೇವರ್‌ಗಳು ಕಿತ್ತುಹೋಗಿ ಅಪಘಾತಗಳು ಸಂಭವಿಸುತ್ತಿವೆ. ಅವುಗಳನ್ನು ವೈಜ್ಞಾನಿಕವಾಗಿ ನಿರ್ಮಿಸಲಿ 2 ಕೋಟಿ ರೂ. ಮೀಸಲಿಡಲಾಗುವುದು
     
     * ಪ್ಲಾಸ್ಟಿಕ್ ಬುಟ್ಟಿಗಳ ವಿತರಣೆ
     ಸಾರ್ವಜನಿಕರಲ್ಲಿ ತ್ಯಾಜ್ವ ವಿಂಗಡಣೆಯ ಬಗ್ಗೆ ಅರಿವು ಮೂಡಿಸಲು ಪಾಲಿಕೆ ವತಿಯಿಂದ ಆಯ್ದ ವಾರ್ಡುಗಳಲ್ಲಿ ಮನೆ ಮನೆಗೆ ಉಚಿತವಾಗಿ ಹಸಿ ಕಸ ಹಾಗೂ ಒಣ ಕಸ ವಿಂಗಡಿಸಲು ಪ್ಲಾಸ್ಟಿಕ್ ಬಕೆಟ್‌ಗಳನ್ನು ಒದಗಿಸಲಾಗುವುದು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts