More

    ಇಂದು ಮಹಾನಗರ ಪಾಲಿಕೆಯ ಬಜೆಟ್ ಮಂಡನೆ

    ದಾವಣಗೆರೆ : ಮಹಾನಗರ ಪಾಲಿಕೆಯ ಪ್ರಸ್ತುತ ಸಾಲಿನ ಬಜೆಟ್ ಸೋಮವಾರ ಮಂಡನೆಯಾಗಲಿದ್ದು ಸ್ಮಾರ್ಟ್‌ಸಿಟಿಯ ಮಂದಿಗೆ ಏನು ಕೊಡುಗೆ ಸಿಗಲಿದೆ ಎನ್ನುವ ಕುತೂಹಲ ಮೂಡಿದೆ.
     ಸಾಮಾನ್ಯವಾಗಿ ಮುಂಗಡಪತ್ರ ಮಂಡನೆಯ ಸಭೆ ಬೆಳಗ್ಗೆಯೇ ಆರಂಭವಾಗುತ್ತವೆ. ಆದರೆ ಈ ಬಾರಿ ಮಧ್ಯಾಹ್ನ 3 ಗಂಟೆಗೆ ನಿಗದಿ ಮಾಡಲಾಗಿದೆ. ಚರ್ಚೆಗೆ ಸಮಯ ಸಿಗುವುದೆ ಎನ್ನುವ ಮಾತು ಕೇಳಿಬಂದಿದೆ.
     ನಗರ ಬೆಳೆದಂತೆ ಸೌಲಭ್ಯಗಳ ಬೇಡಿಕೆಯೂ ಹೆಚ್ಚಾಗಿದೆ. ಜನರಿಗೆ ಮುಖ್ಯವಾಗಿ ಬೇಕಿರುವುದು ಉತ್ತಮ ರಸ್ತೆಗಳು, ಬೀದಿದೀಪ, ಚರಂಡಿ ಸೇರಿ ಮೂಲಸೌಲಭ್ಯಗಳು. ತ್ಯಾಜ್ಯ ವಿಲೇವಾರಿ ಪರಿಣಾಮಕಾರಿಯಾಗಬೇಕು. ಸ್ವಚ್ಛತೆ ಕಾಪಾಡಬೇಕು ಎಂಬುದು ಸಹಜ ನಿರೀಕ್ಷೆ.
     ಹೊರ ವಲಯದ ಬಡಾವಣೆಗಳು ಮೂಲಸೌಲಭ್ಯಗಳಿಂದ ವಂಚಿತವಾಗಿವೆ. ಅಲ್ಲಿ ಒಳಚರಂಡಿ ವ್ಯವಸ್ಥೆಯಿಲ್ಲ, ಓಡಾಡಲು ಒಳ್ಳೆಯ ರಸ್ತೆಗಳಿಲ್ಲ. ಬೀದಿ ದೀಪಗಳಿಲ್ಲದೆ ಕತ್ತಲು ಕವಿದಿದೆ ಎನ್ನುವುದು ಸಾರ್ವಜನಿಕರ ದೂರು. ಕೈಗಾರಿಕಾ ಪ್ರದೇಶಗಳಲ್ಲೂ ಸೌಲಭ್ಯಗಳನ್ನು ಕಲ್ಪಿಸಬೇಕಿದೆ.
     ಪಾಲಿಕೆಯ ಮುಂಭಾಗ ಸೇರಿ ನಗರದ ಕೆಲವು ಕಡೆ ಸ್ಕೈವಾಕ್‌ಗಳು ಆಗಬೇಕು. ಬಿ.ಎಸ್.ಎನ್.ಎಲ್ ಬಳಿಯಿಂದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ವರೆಗೆ ಫ್ಲೈ ಓವರ್ ಆಗಬೇಕು ಎನ್ನುವ ಬೇಡಿಕೆಗೆ ಈ ಬಜೆಟ್‌ನಲ್ಲಿ ಏನಾದರೂ ಉತ್ತರ ಸಿಗಬಹುದೆ ಎಂದು ಕಾದುನೋಡಬೇಕಿದೆ.
     ನಗರದ ಸ್ವಚ್ಛತೆ ಮಾಡುವ ಪೌರಕಾರ್ಮಿಕರು, ಒಳಚರಂಡಿ ಸ್ವಚ್ಛತೆ ಮಾಡುವವರು, ವಾಹನ ಚಾಲಕರಿಗೆ ಆರೋಗ್ಯ ಸೌಲಭ್ಯ ಕಲ್ಪಿಸಬೇಕು. ಪಾಲಿಕೆಯಿಂದ ಸಾರ್ವಜನಿಕರಿಗೆ ಸೇವೆಗಳು ತ್ವರಿತವಾಗಿ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಡಿಜಿಟಲೀಕರಣಕ್ಕೆ ಒತ್ತು ಕೊಡಬೇಕು. ಬಿಡಾಡಿ ಪ್ರಾಣಿಗಳಿಂದ ಆಗುವ ಸಂಚಾರ ಸಮಸ್ಯೆಗೆ ಮುಕ್ತಿ ಹಾಡಬೇಕು. ಹೀಗೆ ನಿರೀಕ್ಷೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
     ಇದೆಲ್ಲದರ ಜತೆಗೆ ಪಾಲಿಕೆಯ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮುಂಗಡಪತ್ರದಲ್ಲಿ ಕಾರ್ಯಕ್ರಮಗಳು ರೂಪಿಸುವ ಅಗತ್ಯವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts