More

    ದಾವಣಗೆರೆಯಲ್ಲಿ ವಲಸೆ ಹಕ್ಕಿಗಳ ಬರ

    ರಮೇಶ ಜಹಗೀರದಾರ್ ದಾವಣಗೆರೆ
     ವಲಸೆ ಹಕ್ಕಿಗಳ ನೆಚ್ಚಿನ ತಾಣಗಳಾದ ಜಿಲ್ಲೆಯ ಕೆರೆಗಳಲ್ಲಿ ಈ ವರ್ಷ ವಿದೇಶಗಳಿಂದ ಬಂದಿರುವ ಪಕ್ಷಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಪರಿಸರದಲ್ಲಿ ಏರುಪೇರು ಆಗುತ್ತಿರುವುದು, ನೀರು ಮತ್ತು ಆಹಾರದq, ಲಭ್ಯತೆಯ ಕೊರತೆ ಇದಕ್ಕೆ ಪ್ರಮುಖ ಕಾರಣವಾಗಿದೆ.
     ಯುರೋಪ್ ಮತ್ತು ಮಂಗೋಲಿಯಾ ಭಾಗದಲ್ಲಿ ನವೆಂಬರ್‌ನಿಂದ ಏಪ್ರಿಲ್ ವರೆಗೆ ಕೊರೆಯುವ ಚಳಿ ಇರುವ ಕಾರಣ ಪ್ರತಿ ವರ್ಷ ನವೆಂಬರ್ ಹೊತ್ತಿಗೆ ಸಾವಿರಾರು ಸಂಖ್ಯೆಯಲ್ಲಿ ಬಾನಾಡಿಗಳು ಬರುತ್ತಿದ್ದವು. ಇಲ್ಲಿನ ಕೊಂಡಜ್ಜಿ, ನಾಗನೂರು, ಹದಡಿ ಕೆರೆಗಳಲ್ಲದೇ ಸಮೀಪದ ನಾಗಲಾಪುರ, ಕಂಚಿಕೆರೆಗೂ ವಲಸೆ ಬರುವುದು ವಾಡಿಕೆ.
     ಮಂಗೋಲಿಯಾದಿಂದ ಕೊಂಡಜ್ಜಿ ಕೆರೆಗೆ ಈ ಬಾರಿ 250 ಪಟ್ಟೆತಲೆ ಹೆಬ್ಬಾತುಗಳು ಬಂದಿವೆ. ಯುರೋಪಿನಿಂದ ಚಲುಕ ಬಾತು, ಬಿಳಿ ಹುಬ್ಬಿನ ಬಾತು, ಕಪ್ಪು ಬಾಲದ ಗೊರವಗಳು 50 ರಿಂದ 100 ಸಂಖ್ಯೆಯಲ್ಲಿವೆ.
     ಈ ಹಿಂದೆ ಸಾವಿರ ಸಂಖ್ಯೆಯಲ್ಲಿ ಹಕ್ಕಿಗಳ ಹಿಂಡಿನ ಆಗಮನವಾಗುತ್ತಿತ್ತು. 2008 ರಲ್ಲಿ ಕುಂದುವಾಡ ಕೆರೆಗೆ 4 ಸಾವಿರ ಪಕ್ಷಿಗಳು ಬಂದಿದ್ದನ್ನು ಪಕ್ಷಿ ವೀಕ್ಷಕ ಡಾ. ಎಸ್. ಶಿಶುಪಾಲ ನೆನಪು ಮಾಡಿಕೊಳ್ಳುತ್ತಾರೆ. ಅದಾದ ನಂತರವೂ ಪ್ರತಿ ವರ್ಷ 1 ರಿಂದ 2 ಸಾವಿರ ಸಂಖ್ಯೆ ಸಾಮಾನ್ಯವಾಗಿತ್ತು. ಈ ವರ್ಷ 100ರ ಅಂಕಿಯನ್ನು ದಾಟಿಲ್ಲ.
     …
     (ಬಾಕ್ಸ್)
     ಪೂರಕವಾಗಿಲ್ಲ ಪರಿಸರ
     ವಲಸೆ ಹಕ್ಕಿಗಳು ನೀರು ಮತ್ತು ಆಹಾರ ಲಭ್ಯವಿರುವ ಕೆರೆಗಳನ್ನು ಹುಡುಕಿಕೊಂಡು ಬರುತ್ತವೆ. ಈ ವರ್ಷ ಮಳೆಯಾಗಿಲ್ಲ, ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಿದೆ. ಬರಗಾಲದ ಪರಿಣಾಮ ಬೆಳೆ ಹಾನಿಯಾಗಿದೆ. ಕೀಟಗಳೂ ಮಾಯವಾಗಿದ್ದು ಪಕ್ಷಿಗಳಿಗೆ ಆಹಾರ ಇಲ್ಲದಂತಾಗಿದೆ. ಅವುಗಳು ವಾಸಿಸಲು ಪೂರಕ ವ್ಯವಸ್ಥೆ ಇಲ್ಲದಂತಾಗಿದೆ.
     ವಿಜಯನಗರ ಜಿಲ್ಲೆಯ ತುಂಗಭದ್ರಾ ಹಿನ್ನೀರು ಪ್ರದೇಶ ಮತ್ತು ಅಂಕಸಮುದ್ರ ಪಕ್ಷಿಧಾಮದಲ್ಲಿ ನೀರಿನ ಲಭ್ಯತೆ ಇರುವ ಕಾರಣ ಅಲ್ಲಿಗೆ ಹೆಚ್ಚು ಹಕ್ಕಿಗಳು ವಲಸೆಗೊಂಡಿವೆ.
     ಕೆಲವು ಹಕ್ಕಿಗಳಿಗೆ ಕೆರೆಗಳಲ್ಲಿ ತುಂಬಿ ತುಳುಕುವಷ್ಟು ನೀರೂ ಇರಬಾರದು, ತೀರಾ ಕಡಿಮೆ ನೀರೂ ಇರಬಾರದು. ಜತೆಗೆ ಕೆರೆಯಲ್ಲಿ ಕೆಸರು ಇದ್ದರೆ ಕೆಲವು ಹುಳಗಳು ಬರುತ್ತವೆ, ಅವುಗಳನ್ನು ತಿನ್ನಲು ಪಕ್ಷಗಳು ಅಲ್ಲಿಗೆ ತೆರಳುತ್ತವೆ.
     ಕುಂದುವಾಡ ಕೆರೆಯಲ್ಲಿ 3 ವರ್ಷ ನೀರು ಇಲ್ಲದ ಕಾರಣ ವಲಸೆ ಹಕ್ಕಿಗಳು ಬಂದಿಲ್ಲ. ಈ ಬಾರಿಯೂ ಅಲ್ಲಿ ಹಕ್ಕಿಗಳ ಕಲರವ ಕ್ಷೀಣವಾಗಿದೆ.
     ಯುರೋಪ್ ಮತ್ತು ಮಂಗೋಲಿಯಾದಲ್ಲಿ ಚಳಿಗಾಲದಲ್ಲಿ ಮೈನಸ್ 20 ಡಿಗ್ರಿಯಷ್ಟು ಉಷ್ಣಾಂಶ ಇರುತ್ತದೆ. ದಾವಣಗೆರೆ ಪರಿಸರದಲ್ಲಿ 20 ರಿಂದ 35 ಡಿಗ್ರಿಯಷ್ಟು ತಾಪಮಾನ ಇರುವುದರಿಂದ ಹಕ್ಕಿಗಳು ಇಲ್ಲಿಗೆ ವಲಸೆ ಬರುತ್ತವೆ. ಆದರೆ ಇಲ್ಲಿ ಅವು ಸಂತಾನೋತ್ಪತ್ತಿ ಮಾಡುವುದಿಲ್ಲ. ಮೂರ್ನಾಲ್ಕು ತಿಂಗಳಷ್ಟು ಇಲ್ಲಿದ್ದು ತಮ್ಮ ದೇಶಕ್ಕೆ ವಾಪಸಾಗುತ್ತವೆ.
     …
     (ಕೋಟ್)
     ಜಾಗತಿಕ ತಾಪಮಾನದಲ್ಲಿ ಏರುಪೇರು ಆಗುತ್ತಿರುವುದು, ಮಳೆ ಕೊರತೆಯಿಂದ ಕೆರೆಗಳಲ್ಲಿ ನೀರು ಇಲ್ಲದಂತೆ ಆಗಿರುವುದು ಮತ್ತು ಆಹಾರದ ಲಭ್ಯತೆ ಕಡಿಮೆಯಾಗಿರುವುದು ವಲಸೆ ಹಕ್ಕಿಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ. ಮೊದಲಿನಷ್ಟು ಸಂಖ್ಯೆಯಲ್ಲಿ ನಮ್ಮ ಜಿಲ್ಲೆಗೆ ಬರುತ್ತಿಲ್ಲ.
       ಡಾ. ಎಸ್. ಶಿಶುಪಾಲ, ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮಜೀವಿ ವಿಭಾಗದ ಪ್ರಾಧ್ಯಾಪಕ
    ಕಮಲ
     …
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts