More

    ಜ್ಞಾನ, ಅನುಭವದ ಲಾಭ ಸಮಾಜಕ್ಕೆ ಸಿಗಲಿ

    ದಾವಣಗೆರೆ :  ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಬದುಕು ಕಟ್ಟಿಕೊಂಡಿರುವ ನಾವೆಲ್ಲ ಸಮಾಜಕ್ಕೆ ಮರಳಿ ಕೊಡುಗೆ ನೀಡಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕ ಆರ್. ಗಿರೀಶ್ ಹೇಳಿದರು.
     ನಗರದ ಬಿಐಇಟಿ ಕಾಲೇಜಿನಲ್ಲಿ ಶನಿವಾರ ಹಿರಿಯ ವಿದ್ಯಾರ್ಥಿಗಳ ಅಂತಾರಾಷ್ಟ್ರೀಯ ಸಮ್ಮಿಲನ ‘ಸವಿನೆನಪು’ ಉದ್ಘಾಟಿಸಿ ಮಾತನಾಡಿದರು.
     ಕಾಲೇಜಿನ ಹಳೆಯ ವಿದ್ಯಾರ್ಥಿಗಳು ತಾಂತ್ರಿಕ ವಿಷಯದಲ್ಲಿ ತಜ್ಞರಿದ್ದು ಜತೆಗೆ ಅನುಭವವೂ ಇದೆ. ಇದರ ಲಾಭ ಸಮುದಾಯಕ್ಕೆ ಆಗಬೇಕು. ರಾಜ್ಯದ ಅಭಿವೃದ್ಧಿಗೆ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಒಂದು ಪೋರ್ಟಲ್ ರೂಪಿಸಬೇಕು ಎಂದು ಸಲಹೆ ನೀಡಿದರು.
     ಬದುಕಿನ ಯಶಸ್ಸು ಕೇವಲ ಹಣ ಗಳಿಕೆಯಲ್ಲಿ ಇಲ್ಲ. ಜನರಿಗೆ ನಾವು ಎಷ್ಟು ನೆರವಾಗುತ್ತೇವೆ ಎಂಬುದು ಮುಖ್ಯವಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಭವಿಷ್ಯ ರೂಪಿಸಿಕೊಳ್ಳುವುದು ವಿದ್ಯಾರ್ಥಿಗಳ ಕೈಯಲ್ಲಿರುತ್ತದೆ ಎಂದು ತಿಳಿಸಿದರು.
     ಬಿಐಇಟಿ ಕಾಲೇಜಿನಲ್ಲಿ 1988 ರಿಂದ 1992 ರ ವರೆಗೆ ತಾವು ಬಿಐಇಟಿಯಲ್ಲಿ ಓದಿದ ದಿನಗಳನ್ನು ಗಿರೀಶ್ ನೆನಪಿಸಿಕೊಂಡರು. ತಮ್ಮ ಯಶಸ್ಸಿನಲ್ಲಿ ಕಾಲೇಜಿನ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.
     ಹೈದರಾಬಾದ್‌ನ ಅರಬಿಂದೋ ಫಾರ್ಮಾ ಲಿಮಿಟೆಡ್‌ನ ನಿರ್ದೇಶಕ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿ ಸತಕರ್ಣಿ ಮಕ್ಕಪತಿ ಮಾತನಾಡಿ, ಭಾರತದ ಬೆಳವಣಿಗೆಯಾಗಬೇಕಾದರೆ ಮಾಹಿತಿ ತಂತ್ರಜ್ಞಾನದ ಜತೆಗೆ ಮೂಲ ಇಂಜಿನಿಯರಿಂಗ್‌ನ ಕೊಡುಗೆಯೂ ಮಹತ್ವದ್ದಾಗಿದೆ. ಚೀನಾದ ಜತೆಗೆ ಸ್ಪರ್ಧಿಸಬೇಕಾದರೆ, ನಮ್ಮ ದೇಶದ ಜಿಡಿಪಿ ಹೆಚ್ಚಾಗಬೇಕಾದರೆ ಇದು ಬಹಳ ಮುಖ್ಯ ಎಂದು ಅಭಿಪ್ರಾಯಪಟ್ಟರು.
     ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಆ್ಯಂಟಿಬಾಡಿಗಳ ಉತ್ಪಾದನೆಯಲ್ಲಿ ಭಾರತ ಹೆಚ್ಚಿನ ಪ್ರಗತಿ ಸಾಧಿಸಬೇಕು. ವಿದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಅಷ್ಟು ಸಾಧನೆ ಆಗಿಲ್ಲ ಎಂದು ಹೇಳಿದರು.
     ಬಿಐಇಟಿ ಕಾಲೇಜು ತಮ್ಮ ಬದುಕನ್ನು ರೂಪಿಸುವಲ್ಲಿ ವಹಿಸಿದ ಪಾತ್ರವನ್ನು ವಿವರಿಸಿದ ಅವರು, ಬದುಕಿನಲ್ಲಿ ಉದ್ದೇಶ ಇಟ್ಟುಕೊಂಡು ಬೆಳೆಯಬೇಕು ಎಂದು ಯುವ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
     ಅಮೆರಿಕದ ಸ್ಯಾಪ್ ಲಿಮೋಸ್ ಎಂಟರ್‌ಪ್ರೈಸಸ್ ಸಂಸ್ಥೆಯ ನಿರ್ದೇಶಕ ಎನ್.ಎಸ್. ಆನಂದ ಕುಮಾರ್ ಮಾತನಾಡಿ, ಜೀವನದಲ್ಲಿ ವೈಫಲ್ಯಗಳೇ ಯಶಸ್ಸಿನ ಮೆಟ್ಟಿಲುಗಳಾಗಿವೆ. ವಿದ್ಯಾರ್ಥಿಗಳು ನಾಚಿಕೆ ಸ್ವಭಾವ ಬಿಟ್ಟು ಜನರೊಂದಿಗೆ ಬೆರೆಯುವುದನ್ನು ಕಲಿಯಬೇಕು, ಅದರಿಂದ ಬಹಳಷ್ಟು ವಿಷಯಗಳು ತಿಳಿಯುತ್ತವೆ ಎಂದರು.
     ಕನಸು ದೊಡ್ಡದಿರಬೇಕು, ಬದುಕಿಗೆ ಉದ್ದೇಶವಿರಬೇಕು. ನಕಾರಾತ್ಮಕ ಶಕ್ತಿಗಳಿಂದ ದೂರವಿರಬೇಕು. ಆರೋಗ್ಯದ ಕಡೆಗೆ ಗಮನವಿರಬೇಕು ಎಂದು ಕಿವಿಮಾತು ಹೇಳಿದರು.
     ಬಿಐಇಟಿ ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ಪ್ರಾಚಾರ್ಯ ಡಾ. ಎಚ್.ಬಿ. ಅರವಿಂದ್, ಹಳೆಯ ವಿದ್ಯಾರ್ಥಿಗಳಾದ ಬಿ.ವಿ. ಜಗದೀಶ್, ಎಚ್.ಎಂ.ಆರ್. ಸಿದ್ದೇಶ್ ಇದ್ದರು. ಡಾ. ಜಿ.ಪಿ. ದೇಸಾಯಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts