More

    ಹೋರಾಟಕ್ಕೆ ಅಣಿಯಾದ ರೈತರು

    ದಾವಣಗೆರೆ : ಭದ್ರಾ ನಾಲೆಗಳಿಗೆ ಈ ಹಿಂದಿನ ತೀರ್ಮಾನದಂತೆ 100 ದಿನ ನೀರು ಹರಿಸಬೇಕು ಎಂದು ಜಿಲ್ಲೆಯ ಅಚ್ಚುಕಟ್ಟು ಭಾಗದ ರೈತರು ಪಟ್ಟು ಮುಂದುವರಿಸಿದ್ದು ಹೋರಾಟದ ಹಾದಿ ಹಿಡಿದಿದ್ದಾರೆ.
     ಭಾರತೀಯ ರೈತ ಒಕ್ಕೂಟದ ನೇತೃತ್ವದಲ್ಲಿ ಇಲ್ಲಿನ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಮಂಗಳವಾರ ಸಭೆ ಸೇರಿದ ರೈತರು, ಬುಧವಾರ ನಿಗದಿಯಾಗಿರುವ ನೀರಾವರಿ ಸಲಹಾ ಸಮಿತಿ ಸಭೆಯನ್ನು ರದ್ದುಗೊಳಿಸಬೇಕು. ಮೊದಲಿನ ನಿರ್ಧಾರದಲ್ಲಿ ಯಾವುದೇ ಮಾರ್ಪಾಡು ಮಾಡಬಾರದು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.
     ನಂತರ ಉಪ ವಿಭಾಗಾಧಿಕಾರಿ ಕಚೇರಿ ಮುಂದೆ ರಸ್ತೆತಡೆ ನಡೆಸಿ, ಎಸಿ ದುರ್ಗಾಶ್ರೀ ಅವರಿಗೆ ಮನವಿ ಸಲ್ಲಿಸಿದರು.
     ಸಭೆಯಲ್ಲಿ ಹರಿಹರ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಕಾಡಾ ಸಭೆಗೆ ತಾವು ಹೋಗುವುದಿಲ್ಲ. ಯಾವುದೇ ಸಭೆಗೆ 7 ದಿನ ಮೊದಲು ನೋಟಿಸ್ ನೀಡಬೇಕಾಗುತ್ತದೆ ಎಂದರು.
     ಜಿಲ್ಲೆಯ ಅಚ್ಚುಕಟ್ಟು ಭಾಗದ ರೈತರು ಈಗಾಗಲೇ ನಾಟಿ ಮಾಡಿದ್ದು ನೀರು ಅತ್ಯವಶ್ಯಕವಾಗಿ ಬೇಕಾಗಿದೆ. ನಾವೇ ನಿಜವಾದ ಅಚ್ಚುಕಟ್ಟಿನ ರೈತರು. ಇದನ್ನೆಲ್ಲ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರೋಣ ಎಂದು ತಿಳಿಸಿದರು.
     ಕಳೆದ ವರ್ಷ ಉತ್ತಮ ಮಳೆಯಾಗಿ ಜಲಾಶಯ ತುಂಬಿತ್ತು. ಆ ನೀರು ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದ ಅವರು, ಭತ್ತ ಬೆಳೆಯುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಡ್ಯಾಮ್ ಅವರ ಆಸ್ತಿಯಲ್ಲ ಎಂದು ಹೇಳಿದರು.
     ಒಕ್ಕೂಟದ ಅಧ್ಯಕ್ಷ ಎಚ್.ಆರ್. ಲಿಂಗರಾಜ್ ಶಾಮನೂರು ಮಾತನಾಡಿ, ನಾಲೆಯಲ್ಲಿ ಈಗಾಗಲೇ 25 ದಿನ ನೀರು ಹರಿಸಲಾಗಿದೆ. ಕುಡಿಯುವ ನೀರಿಗೆ 7 ಟಿಎಂಸಿ ತೆಗೆದು ಬಳಕೆಗೆ ಬರುವ ನೀರು 33.082 ಟಿ.ಎಂ.ಸಿ. ಇನ್ನೂ 75 ದಿನ ನೀರು ಬೇಕಿದೆ. 10 ಟಿಎಂಸಿ ನೀರು ಜಲಾಶಯದಲ್ಲಿ ಉಳಿಯಲಿದೆ ಎಂದು ತಿಳಿಸಿದರು.
     ಅಚ್ಚುಕಟ್ಟಿನಲ್ಲಿ ಜಿಲ್ಲೆಯದೇ ಸಿಂಹಪಾಲಿದೆ. ಮೇಲ್ಭಾಗದವರು ಶೇ. 10ರಷ್ಟು ಮಾತ್ರ ಇದ್ದಾರೆ. ಅಲ್ಲಿನವರು ಅಕ್ರಮ ಪಂಪ್‌ಸೆಟ್ ಹಾಕಿಕೊಂಡಿದ್ದಾರೆ. ಸರ್ಕಾರ ಅವರ ಒತ್ತಡಕ್ಕೆ ಮಣಿಯಬಾರದು ಎಂದು ಒತ್ತಾಯಿಸಿದರು.
     ಅಣೆಕಟ್ಟನ್ನು ನಿರ್ಮಿಸಿದ್ದು ಆಹಾರಧಾನ್ಯ ಬೆಳೆಯವುದಕ್ಕಾಗಿ. ಅಡಕೆ, ಗಾಂಜಾ ಬೆಳೆಯಲು ಅಲ್ಲ. 100 ದಿನ ನೀರು ಹರಿಸುವುದಾಗಿ ಒಮ್ಮೆ ಮಾಡಿರುವ ಆದೇಶವನ್ನು ಮಾರ್ಪಾಡು ಮಾಡಿದರೆ ಸರ್ಕಾರಕ್ಕೆ ಪ್ರತಿಭಟನೆಯ ಮೂಲಕ ಬಿಸಿ ಮುಟ್ಟಿಸಲಾಗುವುದು. ಡಿಸಿ, ಎಸಿ ಕಚೇರಿಗಳ ಮುಂದೆ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
     ಸರ್ಕಾರ ತುಂಗಾದಿಂದ ಭದ್ರಾ ಜಲಾಶಯಕ್ಕೆ ನೀರು ಎತ್ತುವಳಿ ಮಾಡಲು ಆದ್ಯತೆ ನೀಡಬೇಕು. ಮಳೆ ಅಕ್ಟೋಬರ್, ನವೆಂಬರ್ ವರೆಗೂ ಬರುವ ಸಾಧ್ಯತೆ ಇರುತ್ತದೆ. ಇದನ್ನೆಲ್ಲ ಗಮನಿಸಿ ಸರ್ಕಾರ ರೈತಪರ ನಿಲುವು ತಾಳಬೇಕು ಎಂದು ಆಗ್ರಹಿಸಿದರು.
     ರೈತ ಮುಖಂಡ ಕೊಳೇನಹಳ್ಳಿ ಬಿ.ಎಂ. ಸತೀಶ್ ಮಾತನಾಡಿ, ಆಹಾರಧಾನ್ಯ ಬೆಳೆಯಲು ಭದ್ರಾ ಜಲಾಶಯ ನಿರ್ಮಾಣ ಮಾಡಲಾಗಿದೆ. ಆದರೆ ಭತ್ತದ ಬೆಳೆಗಿಂತ ಅಡಕೆಗೆ ನೀರು ಬೇಕು ಎಂದು ಒತ್ತಾಯಿಸುವುದು ಸರಿಯಲ್ಲ. ಸರ್ಕಾರ ತರಾತುರಿಯಲ್ಲಿ ಶಿವಮೊಗ್ಗ ಜಿಲ್ಲೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ತಾತ್ಕಾಲಿಕ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸಭೆ ಕರೆದಿರುವುದು ಭತ್ತದ ಬೆಳೆಗಾರರಿಗೆ ಮರಣ ಶಾಸನವಾಗಿದೆ ಎಂದು ಹೇಳಿದರು.
     ಎಪಿಎಂಸಿ ಮಾಜಿ ಅಧ್ಯಕ್ಷ ಬೆಳವನೂರು ನಾಗೇಶ್ವರರಾವ್ ಮಾತನಾಡಿ, ಸರ್ಕಾರ 100 ದಿನ ನಿರಂತರವಾಗಿ ನೀರು ಹರಿಸುವುದಾಗಿ ಅಧಿಸೂಚನೆ ಹೊರಡಿಸಿದ್ದರಿಂದ ರೈತರು ಭತ್ತದ ನಾಟಿ ಮಾಡಿದ್ದಾರೆ. ಈಗಾಗಲೇ 2 ಬಾರಿ ಗೊಬ್ಬರ ಹಾಕಿದ್ದು, ಒಂದು ಎಕರೆಗೆ 35 ಸಾವಿರ ರೂ.ಗಳಷ್ಟು ಸಾಲ ಮಾಡಿ ಬಂಡವಾಳ ಸುರಿದಿದ್ದಾರೆ. ಈಗ ನೀರು ಹರಿಸುವ ವೇಳಾಪಟ್ಟಿಯನ್ನು ಪರಿಷ್ಕರಿಸುತ್ತೇವೆ ಎನ್ನುವುದು ಮಕ್ಕಳಾಟವಾಗಿದೆ ಎಂದು ಖಂಡಿಸಿದರು.
     ಮುಖಂಡ ಶಾನುಭೋಗರ ನಾಗರಾಜರಾವ್, ಮಾಜಿ ಮೇಯರ್ ಎಚ್.ಎನ್. ಗುರುನಾಥ್, ಬಲ್ಲೂರು ರವಿಕುಮಾರ್, ಕುಂದುವಾಡದ ಮಹೇಶ್, ಜಿಮ್ಮಿ ಹನುಮಂತಪ್ಪ ಮಾತನಾಡಿದರು.
     ಗೋಪನಾಳ ಕರಿಬಸಪ್ಪ, ಕುಂದುವಾಡದ ಗಣೇಶಪ್ಪ, ಕಕ್ಕರಗೊಳ್ಳ ಕಲ್ಲಿಂಗಪ್ಪ, ಬಾತಿ ವೀರೇಶ್ ದೊಗ್ಗಳ್ಳಿ,  ಶಿರಮನಹಳ್ಳಿ ಎ.ಎಂ. ಮಂಜುನಾಥ, ಕಕ್ಕರಗೊಳ್ಳ ಸಿದ್ದಲಿಂಗಪ್ಪ, ಕಲ್ಪನಳ್ಳಿ ರೇವಣಸಿದ್ದಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts