More

    ಭದ್ರಾ ಜಲಾಶಯದ ಒಳ ಹರಿವಿನತ್ತ ರೈತರ ಚಿತ್ತ

    ದಾವಣಗೆರೆ: ಭದ್ರಾ ಜಲಾಶಯಕ್ಕೆ ಒಳ ಹರಿವು ಕ್ರಮೇಣ ಹೆಚ್ಚಾಗುತ್ತಿದ್ದು ಜಿಲ್ಲೆಯ ಅಚ್ಚುಕಟ್ಟು ಭಾಗದ ರೈತರಲ್ಲಿ ಭರವಸೆ ಮೂಡಿಸಿದೆ. ಮಲೆನಾಡಿನಲ್ಲಿ ಆಗುವ ಮಳೆಯ ಮೇಲೆ ಎಲ್ಲವೂ ಅವಲಂಬಿತವಾಗಿದೆ.
     ಒಟ್ಟು 2.65 ಲಕ್ಷ ಎಕರೆ ಅಚ್ಚುಕಟ್ಟಿನಲ್ಲಿ ಶೇ. 65ರಷ್ಟು ಪ್ರದೇಶ ದಾವಣಗೆರೆ ಜಿಲ್ಲೆಯಲ್ಲೇ ಇದೆ. 65 ಸಾವಿರ ಹೆಕ್ಟೇರ್‌ನಷ್ಟು ಭತ್ತ ಬೆಳೆಯಲಾಗುತ್ತದೆ. ಜಲಾಶಯಕ್ಕೆ ಶನಿವಾರ ಬೆಳಗ್ಗೆ 5039 ಕ್ಯೂಸೆಕ್ ಒಳ ಹರಿವಿದ್ದು ಸಂಜೆ ವೇಳೆಗೆ ಜಾಸ್ತಿಯಾಗಿತ್ತು. ನೀರಿನ ಮಟ್ಟ 143.7 ಅಡಿ ತಲುಪಿತ್ತು.
     ಉತ್ತಮ ಮಳೆಯ ನಿರೀಕ್ಷೆಯೊಂದಿಗೆ ಅಚ್ಚುಕಟ್ಟು ಭಾಗದ ರೈತರು ಭತ್ತದ ಸಸಿಮಡಿಗಳನ್ನು ಮಾಡಿಕೊಂಡು ನಾಟಿಗೆ ಸಿದ್ಧತೆ ನಡೆಸಿದ್ದಾರೆ. ಕೊಳವೆಬಾವಿ ನೀರು ಲಭ್ಯ ಇರುವವರು ನಾಟಿ ಮಾಡಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ಉತ್ತಮ ಮಳೆಯಾಗಿದ್ದರಿಂದ ಜುಲೈ ಮಧ್ಯದ ಹೊತ್ತಿಗೆ ಜಲಾಶಯ ಭರ್ತಿಯಾಗಿತ್ತು. ಭತ್ತದ ನಾಟಿ ಕಾರ್ಯವೂ ಚುರುಕಾಗಿತ್ತು.
     ಈ ವರ್ಷ ಸ್ವಲ್ಪ ವಿಳಂಬವಾಗಿದೆ. ಆದರೂ ಈ ತಿಂಗಳ ಅಂತ್ಯದ ವರೆಗೆ ನಾಲೆಗೆ ನೀರು ಬಿಟ್ಟರೂ ಸಮಸ್ಯೆ ಆಗುವುದಿಲ್ಲ, ಆಗಸ್ಟ್ ಮೊದಲ ವಾರದಲ್ಲಿ ನಾಟಿ ಮಾಡಿಕೊಳ್ಳಬಹುದು. ಜುಲೈ ಮತ್ತು ಆಗಸ್ಟ್‌ನಲ್ಲಿ ಮಳೆಯಾಗುವುದು ಸಾಮಾನ್ಯವಾದ ಕಾರಣ ಆಶಾಭಾವನೆಯನ್ನು ಇಟ್ಟುಕೊಳ್ಳಬಹುದು ಎನ್ನುತ್ತಾರೆ ರೈತ ಮುಖಂಡರು.
     ಆದರೆ ಈಗಲೇ ಏನನ್ನೂ ಹೇಳಲು ಆಗುವುದಿಲ್ಲ, ಜಲಾಶಯದ ನೀರಿನ ಮಟ್ಟ ಕನಿಷ್ಠ 170 ಅಡಿಯಷ್ಟಾದರೂ ತಲುಪಿದರೆ ಒಳ್ಳೆಯದು ಎಂಬ ವಾದವೂ ಇದೆ. ಜಲಾಶಯದಲ್ಲಿ 13 ಟಿಎಂಸಿಯಷ್ಟು ಡೆಡ್ ಸ್ಟೋರೇಜ್ ಇರಲಿದ್ದು, 7 ಟಿಎಂಸಿಯಷ್ಟು ಕುಡಿಯುವ ನೀರಿಗೆ, 32 ಟಿಎಂಸಿಯಷ್ಟು ಭತ್ತ ಇನ್ನಿತರ ಬೆಳೆಗಳಿಗೆ ಬೇಕಾಗುತ್ತದೆ ಎನ್ನುತ್ತಾರೆ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ತಜ್ಞ ಎಂ.ಜಿ. ಬಸವನಗೌಡ.
     …
     (ಕೋಟ್)
     ಭದ್ರಾ ಜಲಾಶಯಕ್ಕೆ ಕ್ರಮೇಣ ಒಳ ಹರಿವು ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ನಮ್ಮ ಜಿಲ್ಲೆಯ ರೈತರು ಈಗಾಗಲೇ ನಾಟಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಮಲೆನಾಡು ಭಾಗದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಒಳ ಹರಿವು ಇನ್ನಷ್ಟು ಹೆಚ್ಚಾಗಲಿದೆ. ಕೆಲವೇ ದಿನಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತದೆ ಎನ್ನುವ ನಿರೀಕ್ಷೆಯಿದೆ.
      ಎಚ್.ಆರ್. ಲಿಂಗರಾಜ್ ಶಾಮನೂರು, ಭಾರತೀಯ ರೈತ ಒಕ್ಕೂಟದ ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts