More

    ಎಲ್ಲ ನಿರುದ್ಯೋಗಿಗಳಿಗೂ ಭತ್ಯೆ ನೀಡಲು ಆಗ್ರಹ

    ದಾವಣಗೆರೆ: ಎಲ್ಲ ನಿರುದ್ಯೋಗಿಗಳಿಗೂ ನಿರುದ್ಯೋಗ ಭತ್ಯೆ ನೀಡಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
     ಮಹಾತ್ಮ ಗಾಂಧಿ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ನಂತರ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
     ಸಂಘಟನೆಯ ಜಿಲ್ಲಾ ಸಂಚಾಲಕ ಎಸ್. ಪರಶುರಾಮ್ ಮಾತನಾಡಿ, ಕಾಂಗ್ರೆಸ್ ನೇತೃತ್ವದ ಸರ್ಕಾರವು ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲು ಮೊದಲ ಮಂತ್ರಿಮಂಡಲದ ಸಭೆಯಲ್ಲಿಯೆ ತೀರ್ಮಾನಿಸಿ ಷರತ್ತುಬದ್ಧ ಆದೇಶ ಹೊರಡಿಸಿದೆ ಎಂದು ತಿಳಿಸಿದರು.
     ಆದರೆ ಪದವಿ ಮತ್ತು ಡಿಪ್ಲೊಮಾ ಮುಗಿಸಿರುವ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ನೀಡುವ ಯುವ ನಿಧಿ ಯೋಜನೆಯ ಪ್ರಕಾರ, 2022-23ನೇ ಶೈಕ್ಷಣಿಕ ವರ್ಷದಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ. ಅದೂ ಎರಡು ವರ್ಷಗಳ ಅವಧಿಗೆ ಮಾತ್ರ ಎಂಬ ಷರತ್ತು ವಿಧಿಸಲಾಗಿದೆ.
     ಹಾಗಾದರೆ ಈ ಅವಧಿಗೆ ಮುನ್ನ ಪದವಿ, ಡಿಪ್ಲೊಮಾ, ಇನ್ನಿತರ ವೃತ್ತಿಪರ ಕೋರ್ಸ್‌ಗಳನ್ನು ಮುಗಿಸಿ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಜನರು ನಿರುದ್ಯೋಗಿಗಳಲ್ಲವೆ ಎಂದು ಪ್ರಶ್ನಿಸಿದರು. ನಿಜವಾಗಿಯೂ ನಿರುದ್ಯೋಗದ ಬಿಸಿ ತಟ್ಟುತ್ತಿರುವುದು ಹತ್ತಾರು ವರ್ಷಗಳಿಂದ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಜನರಿಗೆ. ಅವರಿಗೆ ನಿರುದ್ಯೋಗ ಭತ್ಯೆ ನೀಡಬೇಕಾಗಿರುವುದು ಅತ್ಯವಶ್ಯಕ ಎಂದು ತಿಳಿಸಿದರು.
     ಕಾಂಗ್ರೆಸ್ ಪಕ್ಷವು ಚುನಾವಣೆಗೆ ಮುನ್ನ ಎಲ್ಲ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ನೀಡುತ್ತೇವೆ ಎಂದು ಕೊಟ್ಟಿದ್ದ ಭರವಸೆಯನ್ನು ನಂಬಿ, ರಾಜ್ಯದ ಬಹುತೇಕ ಯುವಜನರು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ ಎಂದರು.
     ಇಂತಹ ಯುವ ಸಮುದಾಯದ ನಿರೀಕ್ಷೆಯನ್ನು ಹುಸಿಗೊಳಿಸಿ 2022-23ನೇ ಸಾಲಿನಲ್ಲಿ ತೇರ್ಗಡೆಯಾದವರಿಗೆ ಮಾತ್ರ ನಿರುದ್ಯೋಗ ಭತ್ಯೆ ನೀಡುತ್ತೇವೆ ಎಂಬುದು ಧೂರ್ತತನವಲ್ಲವೆ ಎಂದು ಪ್ರಶ್ನಿಸಿದರು.
     ಈ ಎಲ್ಲ ಯುವಕರು ತಮ್ಮ ಮೊದಲ ಆದ್ಯತೆಯಾಗಿ ಕೇಳುತ್ತಿರುವುದು ಉದ್ಯೋಗವನ್ನೇ ಹೊರತು ನಿರುದ್ಯೋಗ ಭತ್ಯೆಯನ್ನಲ್ಲ. ಆದರೆ ಅವರ ಯೋಗ್ಯತೆಗೆ ತಕ್ಕದಾದ ಉದ್ಯೋಗವನ್ನು ಒದಗಿಸಲಾಗದ ಸರ್ಕಾರ, ಅವರು ಆತ್ಮ ಗೌರವದಿಂದ ಬದುಕಲು ಬೇಕಾದ ನಿರುದ್ಯೋಗ ಭತ್ಯೆಯನ್ನು ಕೊಡಬೇಕಾಗಿರುವುದು ಸರ್ಕಾರದ ಕನಿಷ್ಠ ಜವಾಬ್ದಾರಿಯಾಗಿದೆ ಎಂದು ಹೇಳಿದರು.
     ನಿರುದ್ಯೋಗ ಭತ್ಯೆ ಎಂಬುದು ನಿರುದ್ಯೋಗಿ ಯುವಜನರ ಹಕ್ಕೇ ಹೊರತು ಸರ್ಕಾರದ ಕೃಪಾ ಭಿಕ್ಷೆಯಲ್ಲ. ಇದನ್ನು ಈಡೇರಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಸರ್ಕಾರ ಈ ರೀತಿ ‘ನಿರುದ್ಯೋಗಿ’ ಎಂಬ ಪದವನ್ನು ಮನಸೋ ಇಚ್ಛೆ ವ್ಯಾಖ್ಯಾನಿಸಿಕೊಂಡು ಅವರಿಗೆ ಮಾತ್ರ ನಿರುದ್ಯೋಗ ಭತ್ಯೆ ನೀಡುತ್ತೇವೆ ಎನ್ನುವುದು ನಾಡಿನ ಯುವ ಸಮುದಾಯಕ್ಕೆ ಬಗೆಯುವ ದ್ರೋಹವಾಗಿದೆ ಎಂದು ತಿಳಿಸಿದರು.
     ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಸರ್ಕಾರವೇ ನಿಗದಿಪಡಿಸಿರುವ ವಯೋಮಿತಿಯಲ್ಲಿರುವ ಎಲ್ಲ ನಿರುದ್ಯೋಗಿಗಳಿಗೂ ನಿರುದ್ಯೋಗ ಭತ್ಯೆಯನ್ನು ಅವರಿಗೆ ಉದ್ಯೋಗ ದೊರಕುವವರೆಗೂ ನೀಡಬೇಕೆಂದು ಆಗ್ರಹಿಸಿದರು.
     ಜಿಲ್ಲಾ ಸಂಘಟನಾಕಾರರಾದ ಶಶಿಕುಮಾರ್, ಗುರುಪ್ರಸಾದ್, ಮನು, ರಾಘವೇಂದ್ರ ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts