More

    ಅಡಕೆ ಬೆಳೆಗಾರರಿಗೆ ಆಸರೆಯಾದ ‘ಉದ್ಯೋಗಖಾತ್ರಿ’

    ರಮೇಶ ಜಹಗೀರದಾರ್ ದಾವಣಗೆರೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಏಪ್ರಿಲ್‌ನಿಂದ ಇಲ್ಲಿಯವರೆಗೆ 6,500 ಎಕರೆಗೂ ಹೆಚ್ಚು ಅಡಕೆ ಬೆಳೆಯುವ ಪ್ರದೇಶ ವಿಸ್ತರಣೆಯಾಗಿದೆ.

    ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ವ್ಯಾಪ್ತಿಗೆ ಬರುವ ಚನ್ನಗಿರಿ ಮತ್ತು ಹೊನ್ನಾಳಿ ತಾಲೂಕುಗಳು ಸಾಂಪ್ರದಾಯಿಕವಾಗಿ ಅಡಕೆ ಬೆಳೆಯುವ ತಾಲೂಕುಗಳಾಗಿವೆ. ಅಲ್ಲಿನ ರೈತರಿಗೆ ಮಾತ್ರ ಉದ್ಯೋಗ ಖಾತ್ರಿಯಡಿ ಪ್ರಯೋಜನ ಸಿಕ್ಕಿದೆ.

    ಜಿಲ್ಲೆಯಲ್ಲಿ 65,279 ಹೆಕ್ಟೇರ್ ಅಡಕೆ ಬೆಳೆಯುವ ಪ್ರದೇಶವಿದೆ (ಮಾರ್ಚ್ ಅಂತ್ಯದವರೆಗಿನ ಮಾಹಿತಿ). ಅಲ್ಲಿನ ಬೆಳೆಗಾರರು ಖಾತ್ರಿಯಡಿ ಕಾಮಗಾರಿ ಕೈಗೊಂಡು ಅಡಕೆ ಬೆಳೆಯುವ ಪ್ರದೇಶವನ್ನು ಹಿಗ್ಗಿಸಿಕೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ.

    ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ರೈತರು ಪ್ರಯೋಜನ ಪಡೆಯಲು ಮುಂದೆ ಬರುತ್ತಿದ್ದಾರೆ. ಮೊದಲಿನಿಂದಲೂ ಅಡಕೆ ಬೆಳೆಯುತ್ತಿರುವ ಸಣ್ಣ ರೈತರು ಬೆಳೆ ಕ್ಷೇತ್ರವನ್ನು ಹಿಗ್ಗಿಸಿಕೊಳ್ಳುತ್ತಿದ್ದಾರೆ.

    ಇದುವರೆಗೆ 118 ಕೋಟಿ ಮೊತ್ತದ 9363 ಕಾಮಗಾರಿಗಳ ಕ್ರಿಯಾಯೋಜನೆಗೆ ಜಿಪಂನಿಂದ ಅನುಮೋದನೆ ನೀಡಲಾಗಿದೆ.ದಿನದಿಂದ ದಿನಕ್ಕೆ ಕಾಮಗಾರಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

    ರೈತರು ಅಡಕೆ ಬೆಳೆಯ ವಿಸ್ತರಣೆಗೆ ಒಲವು ತೋರುತ್ತಿದ್ದಾರೆ. ಭತ್ತ, ಮೆಕ್ಕೆಜೋಳ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದವರೂ ಅಡಕೆಯ ಕಡೆಗೆ ವಾಲುತ್ತಿದ್ದಾರೆ. ತೋಟದಲ್ಲಿ ಗುಂಡಿ ತೆಗೆಯುವುದು, ಗಿಡ ನೆಡುವುದು ಮುಂತಾದ ಕಾಮಗಾರಿಗಳನ್ನು ಕೈಗೊಳ್ಳಲು ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿ ಫಲಾನುಭವಿಗೆ 2.5 ಲಕ್ಷದ ವರೆಗೂ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ.

    ಚನ್ನಗಿರಿ ತಾಲೂಕಿನಲ್ಲಿ 31,500 ಹೆ. ಅಡಕೆ ಪ್ರದೇಶವಿತ್ತು. ಜೂನ್‌ನಿಂದ ಇಲ್ಲಿಯ ವರೆಗೆ 1200 ರೈತರು 2500-3000 ಎಕರೆಯಷ್ಟು ಬೆಳೆ ಕ್ಷೇತ್ರವನ್ನು ಹೆಚ್ಚಿಸಿಕೊಂಡಿದ್ದಾರೆ. ಒಬ್ಬೊಬ್ಬರು 1.5 ಎಕರೆಯಿಂದ 3 ಎಕರೆ ವರೆಗೂ ವಿಸ್ತರಣೆ ಮಾಡಿದ್ದಾರೆ. ಸುಮಾರು 3 ಕೋಟಿ ರೂ.ಗಳಷ್ಟು ಕಾಮಗಾರಿ ಆಗಿವೆ.

    ಹೊನ್ನಾಳಿ ತಾಲೂಕಿನಲ್ಲಿ ಅಂದಾಜು 4 ಸಾವಿರ ಎಕರೆಯಷ್ಟು ವಿಸ್ತರಣೆಯಾಗಿದೆ. 2200 ರೈತರು ಇದರ ಪ್ರಯೋಜನ ಪಡೆದಿದ್ದಾರೆ. 4.5 ಕೋಟಿ ರೂ.ಗಳಷ್ಟು ಕಾಮಗಾರಿಗಳಾಗಿವೆ.

    ಉದ್ಯೋಗ ಖಾತ್ರಿ ಯೋಜನೆಯಡಿ ಅವಕಾಶ ಕಲ್ಪಿಸಿರುವುದರಿಂದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಅನುಕೂಲವಾಗಿದೆ. ನೀರಿನ ವ್ಯವಸ್ಥೆ ಉತ್ತಮವಾಗಿ ಇರುವ ಕಡೆಗಳಲ್ಲಿ ವಿಸ್ತರಣೆ ಮಾಡಿಕೊಳ್ಳಲು ಸಾಧ್ಯವಾಗಿದೆ.
    > ಲಕ್ಷ್ಮೀಕಾಂತ ಬೊಮ್ಮನ್ನರ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ

    ಅಡಕೆ ಬೆಳೆ ವಿಸ್ತರಣೆಗೆ ಉದ್ಯೋಗ ಖಾತ್ರಿಯಡಿ ಅವಕಾಶ ಕಲ್ಪಿಸಿರುವುದು ರೈತರಿಗೆ ಅನುಕೂಲವಾಗಿದೆ. ನಾನು 2 ಎಕರೆ ಅಡಕೆ ಪ್ರದೇಶ ವಿಸ್ತರಣೆ ಮಾಡಿದ್ದೇನೆ. ಇಂದಿನ ದುಬಾರಿ ಕಾಲದಲ್ಲಿ ಸರ್ಕಾರ ಇಂಥ ಒಳ್ಳೇ ಯೋಜನೆ ಕೊಟ್ಟಿದೆ.
    > ನವೀನ್ ಕುಮಾರ್ ಕೆ.ಜಿ ಚನ್ನಗಿರಿ ತಾಲೂಕು ಕೊರಟಿಕೆರೆ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts