More

    ಡೇಟಿಂಗ್ ಆ್ಯಪ್‌ ಯುವತಿಯರಿಗೆ ಮರುಳಾಗುವ ಮುನ್ನ ಎಚ್ಚರ; ‘ಬೆತ್ತಲೆ ಗ್ಯಾಂಗ್’ ಬ್ಲ್ಯಾಕ್‌ಮೇಲ್‌ಗೆ ವೈದ್ಯ ಬಲಿ!

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನಗ್ನ ವಿಡಿಯೋ-ಫೋಟೋ ತೋರಿಸಿ ಸುಲಿಗೆ ಮಾಡುವ ಬೆತ್ತಲೆ ಗ್ಯಾಂಗ್‌ಗೆ ಸಿಲುಕಿ ಯುವ ವೈದ್ಯ, ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ರೈಲ್ವೇ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

    ಕೆಂಗೇರಿ ಬಳಿ ರೈಲಿಗೆ ಸಿಲುಕಿ ವೈದ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ರೈಲ್ವೆ ಪೊಲೀಸರು ತನಿಖೆ ಕೈಗೊಂಡಾಗ ‘ಬೆತ್ತಲೆ ಗ್ಯಾಂಗ್’ ಬ್ಲ್ಯಾಕ್‌ಮೇಲ್ ಬೆಳಕಿಗೆ ಬಂದಿದೆ. ತಾಂತ್ರಿಕ ಮಾಹಿತಿ ಕಲೆ ಹಾಕಿದ ರೈಲ್ವೇ ಪೊಲೀಸರು ಮಧ್ಯಪ್ರದೇಶದ ಭೂಪಾಲ್‌ನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಡೇಟಿಂಗ್ ಆ್ಯಪ್‌ನಲ್ಲಿ ವೈದ್ಯನಿಗೆ ಯುವತಿ ಸೋಗಿನಲ್ಲಿ ಆರೋಪಿ ಪರಿಚಯ ಮಾಡಿಕೊಂಡಿದ್ದಾನೆ. ಹುಡುಕಿ ಸೋಗಿನಲ್ಲಿ ಸ್ನೇಹ ಬೆಳೆಸಿಕೊಂಡು ಮೋಸದ ಜಾಲಕ್ಕೆ ಎಳೆದು ವೈದ್ಯನ ಜತೆಗೆ ಖಾಸಗಿ ಸಂಭಾಷಣೆಯಲ್ಲಿ ತೊಡಗಿದ್ದಾನೆ.

    ಮೋಸಗಾರನ ವಂಚನೆ ತಿಳಿಯದ ವೈದ್ಯ, ಡೇಟಿಂಗ್ ಆ್ಯಪ್‌ನಲ್ಲಿ ಮಾತುಕತೆ ಮುಂದುವರಿಸಿದ್ದ. ಪ್ರೀತಿ-ಪ್ರೇಮವೆಂದು ವಂಚಿಸಿ, ನಗ್ನವಾಗುವಂತೆ ವೈದ್ಯನಿಗೆ ಪ್ರಚೋದನೆ ಮಾಡಿದ್ದಾನೆ. ಅಂತೆಯೇ ನಗ್ನನಾದ ವೈದ್ಯನ ವಿಡಿಯೋ ಮತ್ತು ಫೋಟೋವನ್ನು ಸಂಗ್ರಹಿಸಿಕೊಂಡು ಹಣಕ್ಕಾಗಿ ಬ್ಲಾಕ್ ಮೇಲ್ ಶುರು ಮಾಡಿದ್ದ. ಮರ್ಯಾದೆಗೆ ಅಂಜಿ ವೈದ್ಯ, 67 ಸಾವಿರ ರೂಪಾಯಿಯನ್ನು ಆರೋಪಿ ಬ್ಯಾಂಕ್ ಖಾತೆಗೆ ಆನ್‌ಲೈನ್‌ನಲ್ಲಿ ಜಮೆ ಮಾಡಿದ್ದರು.

    ಆರೋಪಿ ಪದೇ ಪದೆ ಹಣಕ್ಕೆ ಪೀಡಿಸಲು ಶುರು ಮಾಡಿದ್ದ. ಬೇಸರಗೊಂಡ ವೈದ್ಯ, ಮರ್ಯಾದೆಗೆ ಅಂಜಿ ಕೆಂಗೇರಿ ಸಮೀಪ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದ. ಈ ಬಗ್ಗೆ ಸಿಟಿ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದಾಗ ವೈದ್ಯನ ಡೆತ್ ನೋಟ್ ಲಭ್ಯವಾಗಿತ್ತು. ಅದರಲ್ಲಿ ತನ್ನ ಸಾವಿಗೆ ಡೇಟಿಂಗ್ ಆ್ಯಪ್‌ನ ಗೆಳೆತಿ ಕಾರಣ ಎಂದು ಉಲ್ಲೇಖಿಸಿದ್ದ ಎನ್ನಲಾಗಿದೆ. ಈ ಮಾಹಿತಿ ತಿಳಿದ ರೈಲ್ವೆ ಪೊಲೀಸರು, ಮಧ್ಯಪ್ರದೇಶಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿಲಿಕಾನ್ ಸಿಟಿಯಲ್ಲಿ 2ನೇ ಬಲಿ: ನಗರದಲ್ಲಿ ‘ಬೆತ್ತಲೆ ಗ್ಯಾಂಗ್’ ಬ್ಲ್ಯಾಕ್‌ಮೇಲ್‌ಗೆ 2ನೇ ಬಲಿ. ಇದಕ್ಕೂ ಮುನ್ನ ಕೆ.ಆರ್.ಪುರದಲ್ಲಿ ಯುವಕ ಮರ್ಯಾದೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಪ್ರಕರಣದಲ್ಲಿ ರಾಜಸ್ಥಾನ ಮೂಲದ ಮೂವರನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ದರು. ಇದೀಗ ವೈದ್ಯ ಆತ್ಮಹತ್ಯೆ ಮಾಡಿದ್ದಾನೆ.

    ಎಚ್ಚರ ಇರಲಿ: ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಡೇಟಿಂಗ್ ಆ್ಯಪ್‌ಗಳು ಸೇರಿದಂತೆ ಜಾಲತಾಣಗಳಲ್ಲಿ ಸುಂದರ ಯುವತಿಯರ ಪೋಟೋಗಳನ್ನು ಪ್ರೊಪೈಲ್‌ಗೆ ಬಳಸಿ ಸೈಬರ್ ಖದೀಮರು ಬಲೆ ಬೀಸುತ್ತಾರೆ. ಅವರ ಗಾಳಕ್ಕೆ ಸಿಲುಕಿದವರ ಜತೆ ಆರಂಭದಲ್ಲಿ ಚಾಟಿಂಗ್ ನಡೆಸಿ ಅಶ್ಲೀಲವಾಗಿ ಸಂಭಾಷಣೆ ಶುರು ಮಾಡುತ್ತಾರೆ. ನಿಮಗೆ ಗೊತ್ತಾಗದಂತೆ ನಿಮ್ಮ ಸ್ನೇಹಿತರ, ಕುಟುಂಬ ಸದಸ್ಯರ ಮೊಬೈಲ್ ನಂಬರ್, ವಿಳಾಸ ಸಂಗ್ರಹಿಸುತ್ತಾರೆ. ಬಳಿಕ ಆತ್ಮೀಯವಾಗಿ ಮಾತನಾಡಿ ನಗ್ನರಾಗುವಂತೆ ಪ್ರಚೋದನೆ ಮಾಡಿ ನಿಮಗೆ ತಿಳಿಯದಂತೆ ಈ ಬೆತ್ತಲೆ ವಿಡಿಯೋ ಸಂಗ್ರಹಿಸಿಕೊಂಡು ಆನಂತರ ಬ್ಲಾಕ್ ಮೇಲ್ ಮಾಡಿ ಸುಲಿಗೆ ಮಾಡುತ್ತಾರೆ.

    ಹಳಿ ತಪ್ಪಿದ ಗುವಾಹಟಿ- ಬಿಕಾನೇರ್ ಎಕ್ಸ್‌ಪ್ರೆಸ್ ರೈಲು: ಮೂವರು ಸಾವು, 12 ಬೋಗಿ ಚೆಲ್ಲಾಪಿಲ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts