More

    ಡೇಟಾ ಎಂಟ್ರಿ ಆಪರೇಟರ್‌ ಹುದ್ದೆ-ಬಾಡ ಗ್ರಾಪಂ ಜಿಪಂ ನಡುವೆ ಕಿತ್ತಾಟ

    ಕಾರವಾರ: ಕುಮಟಾ ತಾಲೂಕಿನ ಬಾಡ ಗ್ರಾಪಂ ಡೇಟಾ ಎಂಟ್ರಿ ಆಪರೇಟರ್ ನೇಮಕಾತಿ ವಿಚಾರ ಹೈಕೋರ್ಟ್‌ವರೆಗೆ ಹೋಗಿದ್ದು, ಗ್ರಾಪಂ ಹಾಗೂ ಜಿಪಂ ನಡುವೆ ಜಟಾಪಟಿಗೆ ಕಾರಣವಾಗಿದೆ.
    ಡೇಟಾ ಎಂಟ್ರಿ ಆಪರೇಟರ್ ನೇಮಕಾತಿ ವಿಷಯದಲ್ಲಿ ಹೈಕೋರ್ಟ್ ಆದೇಶ ಜಾರಿ ಮಾಡದ ಕಾರಣ ನೀಡಿ ಜಿಪಂ ಸಿಇಒ ಈಶ್ವರ ಕಾಂದೂ ಅವರು ಗ್ರಾಪಂ ಪಿಡಿಒ ಕಮಲಾ ಹರಿಕಂತ್ರ ಅವರನ್ನು ಅಮಾನತು ಮಾಡಿ ಕೆಲ ದಿನಗಳ ಹಿಂದೆ ಆದೇಶ ಹೊರಡಿಸಿದ್ದಾರೆ.

    ಮಾತ್ರವಲ್ಲ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಇತರ ಸದಸ್ಯರ ಸದಸ್ಯತ್ವ ರದ್ದತಿಗೆ ಶಿಫಾರಸು ಮಾಡಲಾಗುವುದು ಎಂದು ಅಂತಿಮ ಎಚ್ಚರಿಕೆ ನೋಟಿಸ್ ನೀಡಿದ್ದಾರೆ. ಆದರೆ, ಜಿಪಂನ ಈ ಕ್ರಮಕ್ಕೆ ಬಾಡ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ಸಿಡಿದೆದ್ದಿದ್ದಾರೆ. ಜಿಪಂ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
    ಆಗಿದ್ದೇನು ..?
    ಬಾಡ ಗ್ರಾಪಂನಲ್ಲಿ ಹಾಲಿ ಭಾರತೀ ಆಚಾರಿ ಎಂಬುವವರು ಡೇಟಾ ಎಂಟ್ರಿ ಆಪರೇಟರ್ ಕಂ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ನಿಯಮದಂತೆ ಅವರ ನೇಮಕಾತಿಯಾಗಿಲ್ಲ. ನನಗೆ ಹುದ್ದೆ ಸಿಗಬೇಕಿತ್ತು ಎಂಬುದು ಅದೇ ಗ್ರಾಪಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಂದಾ ಪರಮೇಶ್ವರ ನಾಯ್ಕ ಅವರ ವಾದ.

    ಇದನ್ನೂ ಓದಿ:ಮೂಲಸೌಕರ್ಯ ಒದಗಿಸದ್ದಕ್ಕೆ ಆಕ್ರೋಶ

    ಈ ಹಿನ್ನೆಲೆಯಲ್ಲಿ ಅವರು 2016 ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಅವರ ವಾದವನ್ನು ಪರಿಗಣಿಸಿ, ಗ್ರಾಪಂ ಅವರಿಗೆ ಕ್ಲರ್ಕ್ ಅಥವಾ ಬರ‍್ಯಾವುದೇ ಖಾಲಿ ಹುದ್ದೆ ನೀಡಲು ಅರ್ಜಿ ಪಡೆದು ಅವಕಾಶ ಮಾಡಿಕೊಡಬೇಕು ಎಂದು ಆದೇಶಿಸಿದೆ.

    ಈ ಪ್ರಕ್ರಿಯೆಯಲ್ಲಿ ಹಾಲಿ ಇರುವ ಡೇಟಾ ಎಂಟ್ರಿ ಆಪರೇಟರ್ ಭಾರತೀ ಆಚಾರಿ ಅವರ ನೌಕರಿಗೂ ಯಾವುದೇ ತೊಂದರೆಯಾಗಬಾರದು ಎಂದು ಎಚ್ಚರಿಸಿದೆ.

    ಆದರೆ, ನಂದಾ ಪರಮೇಶ್ವರ ನಾಯ್ಕ ಅವರಿಗೆ ಇದುವರೆಗೂ ಯಾವುದೇ ಹುದ್ದೆ ಕಲ್ಪಿಸಿಲ್ಲ ಎಂಬ ಕಾರಣ ನೀಡಿ ಜಿಪಂ ಸಿಇಒ ಕ್ರಮ ವಹಿಸಿದ್ದಾರೆ.

    ಒತ್ತಡ ಹಾಕುತ್ತಿದ್ದಾರೆ.
    ನಾವು ನ್ಯಾಯಸಮ್ಮತವಾಗಿ ನಡೆದುಕೊಂಡಿದ್ದೇವೆ. ಆದರೆ, ಜಿಪಂ ಉಪ ಕಾರ್ಯದರ್ಶಿ ಹಾಗೂ ಸಿಇಒ ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಬಾಡ ಗ್ರಾಪಂ ಉಪಾಧ್ಯಕ್ಷ ಮಂಜುನಾಥ ಹೊಸಬಯ್ಯ ನಾಯ್ಕ ದೂರಿದರು.

    ಅಧ್ಯಕ್ಷೆ ಗೀತಾ ಸುಬ್ರಾಯ ನಾಯ್ಕ ಹಾಗೂ ಎಲ್ಲ ಸದಸ್ಯರ ಜತೆ ಅವರು ಬುದವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
    ನಾವು ನ್ಯಾಯಾಲಯದ ಆದೇಶ ಪಾಲಿಸಿದ್ದೇವೆ. ಗ್ರಾಪಂನಲ್ಲಿ ಜವಾನ, ನೀರು ಗಂಟಿ ಹಾಗೂ ಸ್ವಚ್ಛತೆಗಾರ ಹುದ್ದೆಗಳು ಖಾಲಿ ಇವೆ. ಹೈಕೋರ್ಟ್ ಆದೇಶದಂತೆ ನೀವು ಯಾವ ಹುದ್ದೆಯನ್ನಾದರೂ ಆಯ್ದುಕೊಂಡು ಬಂದು ಕರ್ತವ್ಯಕ್ಕೆ ಹಾಜರಾಗಬಹುದು ಎಂದು ನಂದಾ ಪರಮೇಶ್ವರ ನಾಯ್ಕ ಅವರಿಗೆ ನಾವು ಪತ್ರ ನೀಡಿದ್ದೇವೆ.

    ಆದರೆ, ಅವರು ಬಂದು ಹಾಜರಾಗಿಲ್ಲ. ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್ ಹುದ್ದೆಯೇ ಬೇಕು ಎಂದು ಮೌಖಿಕವಾಗಿ ಹೇಳುತ್ತಿದ್ದಾರೆ. ಅವರನ್ನು ಆ ಹುದ್ದೆಗೆ ನೇಮಕ ಮಾಡಿದಲ್ಲಿ ಹಾಲಿ ಕರ್ತವ್ಯದಲ್ಲಿರುವ ಭಾರತೀ ಆಚಾರಿ ಅವರ ಹುದ್ದೆಗೆ ತೊಂದರೆ ನೀಡಿದಂತಾಗುತ್ತದೆ.

    ಜಿಪಂ ಅಧಿಕಾರಿಗಳು ನಮ್ಮ ಮೇಲೆ ಇನ್ನೂ ಒತ್ತಡ ಹೇರಿದರೆ ನಾವು ಕಾನೂನು ಹೋರಾಟ ನಡೆಸುತ್ತೇವೆ ಎಂದರು.



    ಹಾಲಿ ಡೇಟಾ ಎಂಟ್ರಿ ಆಪರೇಟರ್ ಭಾರತಿ ನಾರಾಯಣ ಆಚಾರಿ ಅವರ ನೌಕರಿಗೆ ಯಾವುದೇ ಧಕ್ಕೆಯಾಗದಂತೆ ನಂದಾ ಪರಮೇಶ್ವರ ನಾಯ್ಕ ಅವರಿಗೆ ನೌಕರಿ ಪಡೆಯಲು ಅವಕಾಶ ನೀಡಬೇಕು. 2 ತಿಂಗೋಳಗೆ ಆ ಪ್ರಕ್ರಿಯೆ ನೀಡಬೇಕು ಎಂದು. ಮಾನ್ಯ ಹೈಕೋರ್ಟ್ 2022 ಆಗಸ್ಟ್ನಲ್ಲೇ ಗ್ರಾಪಂಗೆ ಆದೇಶ ಮಾಡಿದೆ. ಅದನ್ನು ಜಾರಿ ಮಾಡಬೇಕಾಗಿರುವುದು ಗ್ರಾಪಂ ಪಿಡಿಒ ಹಾಗೂ ಅಲ್ಲಿನ ಆಡಳಿತ ಮಂಡಳಿಯ ಜವಾಬ್ದಾರಿಯಾಗಿದೆ. ಆದರೆ, ಹಲವು ತಿಂಗಳು ಕಳೆದರೂ ಆದೇಶ ಜಾರಿಯಾಗದೇ ಇರುವ ಕಾರಣ ನ್ಯಾಯಾಂಗ ನಿಂದನೆಯಾಗುವ ಸಾಧ್ಯತೆ ಇದೆ. ಇದರಿಂದ ಕಾನೂನು ಸಲಹೆ ಪಡೆದು, ಪಿಡಿಒ ಅವರ ಮೇಲೆ ಕ್ರಮ ವಹಿಸಿದ್ದು, ಆಡಳಿತ ಮಂಡಳಿಗೆ ನೋಟಿಸ್ ನೀಡಿದ್ದೇನೆ. ಹೊಸದಾಗಿ ಜವಾಬ್ದಾರಿ ವಹಿಸಿದ ಪಿಡಿಒ ಆದೇಶ ಜಾರಿ ಮಾಡಬೇಕು.
    ಈಶ್ವರ ಕುಮಾರ ಕಾಂದೂ
    ಜಿಪಂ ಸಿಇಒ, ಉತ್ತರ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts