More

    ಸರಳವಾಗಿ ನೆರವೇರಿದ ತುಮಕೂರು ದಸರಾ ; ಮೆರವಣಿಗೆಗೆ ಉಡುಪಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಚಾಲನೆ

    ತುಮಕೂರು: ಆಚಾರ, ವಿಚಾರ, ಕಲೆ, ಸಾಹಿತ್ಯದ ಬಗ್ಗೆ ಪ್ರತಿಯೊಬ್ಬರಿಗೂ ಗೌರವ ಇರಬೇಕು, ನಮ್ಮ ಸಂಸ್ಕೃತಿಯ ಬಗ್ಗೆ ಪ್ರಪಂಚದೆಲ್ಲೆಡೆ ಗೌರವವಿದ್ದು, ಅದನ್ನು ಉಳಿಸಿಕೊಳ್ಳಲು ಪ್ರತಿಯೊಬ್ಬರೂ ಹಬ್ಬ, ಉತ್ಸವಗಳಲ್ಲಿ ಭಾಗವಹಿಸಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.

    ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಸೋಮವಾರ ದಸರಾ ಉತ್ಸವ ಸಮಿತಿ ಆಯೋಜಿಸಿದ್ದ ದಸರಾ ಹಾಗೂ ಸಾಮೂಹಿಕ ಶಮೀಪೂಜೆಯಲ್ಲಿ ಭಾಗವಹಿಸಿ ಮಾತನಾಡಿ, ಪಾಶ್ಚಾತ್ಯ ದೇಶಗಳು ನಮ್ಮ ಸಂಸ್ಕೃತಿ ಅನುಕರಿಸಲು ಮುಂದಾಗಿವೆ ಎಂದರು. ಪ್ರತಿಯೊಬ್ಬರ ವೃತ್ತಿ, ಆಚಾರ, ವಿಚಾರವನ್ನು ಗೌರವಿಸಬೇಕು. ಮಕ್ಕಳು ಕೊಡು ಕೊಳ್ಳುವ ಉದಾರತೆಯಿಂದ ಬದುಕಿದಾಗ ನಾಡದೇವತೆಗೆ ಸಂತೋಷವಾಗುತ್ತದೆ, ಇಂತಹ ನಾಡಹಬ್ಬವನ್ನು ಸಾರ್ಥಕವಾಗಿಸಲು ಜಾತಿ, ಮತ, ಭೇದ ತೊರೆದು ಎಲ್ಲರೂ ಒಂದಾಗಬೇಕು ಎಂದರು.

    ಇದಕ್ಕೂ ಮೊದಲು ಬಿಜಿಎಸ್ ವೃತ್ತದಲ್ಲಿ ದಸರಾ ಮೆರವಣಿಗೆಗೆ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಚಾಲನೆ ನೀಡಿದರು. ನಗರದ ವಿವಿಧ ದೇವರುಗಳನ್ನೊಳಗೊಂಡ ಮೆರವಣಿಗೆ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಮಧ್ಯಾಹ್ನ 2ಕ್ಕೆ ನಗರದ ಬಿಜಿಎಸ್ ವೃತ್ತದಿಂದ ಆರಂಭಗೊಂಡು ಪ್ರಮುಖ ರಸ್ತೆಗಳಲ್ಲಿ ಸಾಗಿ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸಂಜೆ ಸಂಪನ್ನವಾಯಿತು.

    ಈ ಸಂದರ್ಭದಲ್ಲಿ ಸಂಸದ ಜಿ.ಎಸ್. ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್, ಮೇಯರ್ ಫರಿದಾಬೇಗಂ, ತಹಸೀಲ್ದಾರ್ ಮೋಹನ್‌ಕುವಾರ್, ಮೆರವಣಿಗೆ ಸಮಿತಿಯ ಅಧ್ಯಕ್ಷ ಕೆ.ಎಸ್.ಮಂಜುನಾಥ್, ಕಾರ್ಯಾಧ್ಯಕ್ಷ ಎಸ್.ಪಿ.ಚಿದಾನಂದ್, ಗೋವಿಂದರಾವ್, ಕಾರ್ಯದರ್ಶಿ ಜಿ.ಎಸ್.ಮಹೇಶ್, ಮಹಿಳಾ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷೆ ವಾಸವಿಗುಪ್ತ ಮತ್ತಿತರರು ಭಾಗವಹಿಸಿದ್ದರು.

    31 ವರ್ಷಗಳಿಂದ ದಸರಾ ಉತ್ಸವ ಸಮಿತಿಯಿಂದ ನವರಾತ್ರಿಯ ಹಬ್ಬ 3 ದಿನ ಸಂಘಟಿಸಲಾಗುತ್ತಿದ್ದು, ಈ ವರ್ಷ ಒಂದೇ ದಿನ ಆಚರಿಸಲಾಯಿತು. ಬೆಳಗ್ಗೆ 10ರಿಂದ ಸಾರ್ವಜನಿಕರಿಗೆ ರಂಗೋಲಿ ಸ್ಪರ್ಧೆ ನಡೆಯಿತು. ಮೊದಲ ಮೂರು ಸ್ಥಾನಗಳ ವಿಜೇತರಿಗೆ ತಲಾ 5, 3 ಹಾಗೂ 2 ಸಾವಿರ ರೂಪಾಯಿ ನಗದು ಬಹಮಾನ ನೀಡಲಾಯಿತು. ತಾಲೂಕು ತಹಸೀಲ್ದಾರ್ ಜಿ.ವಿ.ಮೋಹನ್‌ಕುಮಾರ್ ನೇತೃತ್ವ ವಹಿಸಿದ್ದರು. ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಗಂಗಾವತಿ ಪ್ರಾಣೇಶ್ ಮತ್ತು ತಂಡದಿಂದ ನಗೆಹಬ್ಬ ಕಾರ್ಯಕ್ರಮ ಜನರ ಗಮನ ಸೆಳೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts