More

    ಶಕ್ತಿ ದೇವತೆಗಳ ‘ನವ’ದರ್ಶನ : ದಸರಾ ಬೊಂಬೆಗಳ ಪ್ರದರ್ಶನ

    ಬೆಂಗಳೂರು: ದಸರಾ ಹಬ್ಬ ಆಚರಣೆಗೆ ಸಿಲಿಕಾನ್ ಸಿಟಿ ಸಜ್ಜಾಗುತ್ತಿದ್ದು, ಒಂಬತ್ತು ದಿನಗಳ ಕಾಲ ನಡೆಯುವ ನವರಾತ್ರಿ ಉತ್ಸವಕ್ಕೆ ದೇವಿ ದೇಗುಲಗಳಲ್ಲಿ ವಿಶೇಷ ಪೂಜೆ ಹಾಗೂ ಅಲಂಕಾರಕ್ಕೆ ಸಿದ್ಧತೆ ನಡೆಯುತ್ತಿದೆ. ಮತ್ತೊಂದೆಡೆ ಸಂಪ್ರದಾಯದಂತೆ ಗೊಂಬೆ ಹಬ್ಬಕ್ಕೂ ಅಣಿಯಾಗುತ್ತಿದೆ.

    ಪಿತೃಪಕ್ಷದ ಕೊನೆಯ ದಿನವಾದ ಮಹಾಲಯ ಅಮಾವಾಸ್ಯೆಯ ಮರುದಿನದಿಂದ ನವರಾತ್ರಿ ಆರಂಭವಾಗುತ್ತದೆ. ಈ ನವರಾತ್ರಿ ಶಕ್ತಿ ದೇವತೆಗಳ ಆರಾಧನೆಯ ಹಬ್ಬ. ದುರ್ಗಿ, ಶಾರದೆ, ಚಾಮುಂಡೇಶ್ವರಿ, ಬಂಡಿ ಮಹಾಂಕಾಳಿ, ಕಾಳಿಕಾಂಬ, ಚೌಡೇಶ್ವರಿ, ಬನಶಂಕರಿ ಹೀಗೆ ಎಲ್ಲ ಶಕ್ತಿ ದೇವತೆಗಳ ಉತ್ಸವ ನವರಾತ್ರಿಯ ವಿಶೇಷ.

    ಬೆಂಗಳೂರಿನ ಬನಶಂಕರಿ ದೇವಾಲಯದಲ್ಲಿ 108ನೇ ಶರನ್ನವರಾತ್ರಿ ಉತ್ಸವ ಆಯೋಜಿಸಲಾಗಿದ್ದು, ಆಶ್ವಯುಜ ಶುದ್ಧ ಪಾಡ್ಯಮಿಯಿಂದ ನವಮಿವರೆಗೆ ಅಂದರೆ 9 ದಿನಗಳ ಕಾಲ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಈಗಾಗಲೆ ಸಿದ್ಧತೆ ಭರದಿಂದ ಸಾಗಿದೆ. ಗಿರಿನಗರದ ಶ್ರೀ ಶಾರದಾಂಬಾ ದೇವಾಲಯದಲ್ಲಿ ಶ್ರೀ ಶಾರದಾ ಮಹಾಭಿಷೇಕ ಮತ್ತು ಶರನ್ನವರಾತ್ರಿ ಮಹೋತ್ಸವ ಏರ್ಪಡಿಸಲಾಗಿದೆ.

    ವಿಶೇಷ ಅಲಂಕಾರ ಪೂಜೆ: ಮತ್ತೀಕೆರೆಯ ಶ್ರೀ ಚೌಡೇಶ್ವರಿ ದೇವಿ ದೇವಾಲಯ, ಮಲ್ಲೇಶ್ವರದ ಸರ್ಕಲ್ ಮಾರಿಯಮ್ಮ ದೇವಾಲಯ, ಗಂಗಮ್ಮ ದೇವಾಲಯ, ಮೆಜೆಸ್ಟಿಕ್‌ನ ಅಣ್ಣಮ್ಮ ದೇವಾಲಯ, ಶೇಷಾದ್ರಿಪುರಂನ ಮಹಾಲಕ್ಷ್ಮೀ ದೇವಾಲಯ, ಗವೀಪುರದ ಬಂಡಿ ಮಹಾಂಕಾಳಿ ದೇವಾಲಯ, ಮುತ್ಯಾಲನಗರದ ಮುತ್ಯಾಲಮ್ಮ ದೇವಿ ದೇವಾಲಯ, ಶಂಕರ ಮಠದ ಶ್ರೀ ಶಾರದಾ ದೇವಿ ದೇವಳ, ಮಲ್ಲೇಶ್ವರದ ಕನ್ನಿಕಾ ಪರಮೇಶ್ವರಿ ದೇವಾಲಯ, ವಿ.ವಿ.ಪುರಂ ವಾಸವೀದೇವಿ ಸೇರಿ ನಗರದ ದೇವಿ ದೇವಾಲಯಗಳಲ್ಲಿ ಒಂಬತ್ತು ದಿನಗಳ ಕಾಲ ನಿತ್ಯ ವಿಶೇಷ ಅಲಂಕಾರ ಹಾಗೂ ಪೂಜೆಗಳು ನಡೆಯಲಿವೆ.

    ಬನಶಂಕರಿ ದೇವಿ ವಿಶೇಷತೆ: ಬನಶಂಕರಿ ದೇವಾಲಯದಲ್ಲಿ ಅ.15ರ ಭಾನುವಾರ ದೇವಿಗೆ ಅರಿಶಿನ ಕುಂಕುಮ ಅಲಂಕಾರ ನಡೆಯಲಿದ್ದು, ಸಹಸ್ರಮೋದಕ ಶ್ರೀ ಮಹಾಗಣಪತಿ ಹೋಮ ನಡೆಯಲಿದೆ. ಅ.16ರಂದು ತರಕಾರಿ ಅಲಂಕಾರ, ರುದ್ರ ಕಾದಶಿನಿ ಹೋಮ, ಅ.17ರಂದು ಬಳೆ ಅಲಂಕಾರ, ಸಹಸ್ರ ಕಮಲ ಶ್ರೀ ಸೂಕ್ತ ಹೋಮ, ಅ.18ರಂದು ಹಣ್ಣಿನ ಅಲಂಕಾರ, ಶ್ರೀಲಕ್ಷ್ಮೀನಾರಾಯಣ ಹೃದಯ ಹೋಮ, ಮಹಾಸುದರ್ಶನ ಹೋಮ, ಅ.19ರಂದು ಶ್ರೀ ಲಲಿತಾ ತ್ರಿಪುರಸುಂದರಿ ಅಲಂಕಾರ, ಶ್ರೀ ಲಲಿತಾ ಸಹಸ್ರನಾ ಹೋಮ, ಅ.20ರಂದು ಸರಸ್ವತಿ ಅಲಂಕಾರ, ಸರಸ್ವತಿ ಹೋಮ ಮತ್ತು ಧನ್ವಂತರಿ ಹೋಮ, ಅ.21ರಂದು ಸಿರಿಓಲೆ ಅಲಂಕಾರ, ಶ್ರೀ ರಾಮತಾರಕ ಹೋಮ ಮತ್ತು ಪವಮಾನ ಹೋಮ, ಅ.22ರಂದು ಮಹಿಷಮರ್ದಿನಿ ಅಲಂಕಾರ, ಶ್ರೀ ದುರ್ಗಾ ಹೋಮ ನಡೆಯಲಿದೆ. ಅ.23ರಂದು ವಿಶೇಷ ಅಲಂಕಾರ ಹಾಗೂ ಶ್ರೀ ನವಚಂಡಿಕಾ ಹೋಮ ನಡೆಯಲಿದ್ದು, ಅಂದು ಸಂಜೆ 5 ಗಂಟೆಗೆ ಶ್ರೀ ಶಾಕಾಂಬರಿ ಅಮ್ಮನವರಿಗೆ ರಾಜಬೀದಿ ಉತ್ಸವ, 7.30ಕ್ಕೆ ಶಮೀ ಪೂಜೆ ಜರುಗಲಿದೆ. 9 ದಿನಗಳ ಕಾಲವೂ ಕಲಾವಿದರಿಂದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

    ಕಣ್ಮನ ಸೆಳೆವ ಗೊಂಬೆಗಳು: ನವರಾತ್ರಿಯೊಂದಿಗೆ ಗೊಂಬೆಗಳ ಸಂಭ್ರಮಕ್ಕೆ ರಾಜಧಾನಿ ಸಜ್ಜಾಗುತ್ತಿದೆ. ಮಾರುಕಟ್ಟೆಗಳಲ್ಲಿ ಗೊಂಬೆ ವ್ಯಾಪಾರ ಬಿರುಸಾಗಿದ್ದು, ಅರಮನೆ, ಅಂಬಾರಿ, ವಿಧಾನಸೌಧ, ಚಂದ್ರಯಾನ-3ರ ಮಾದರಿ ಸೇರಿ ತರಹೇವಾರಿ ಹಾಗೂ ಆಕರ್ಷಕ ಗೊಂಬೆಗಳು ಕಣ್ಮನ ಸೆಳೆಯುತ್ತಿವೆ. ಗೊಂಬೆ ಕೂರಿಸುವ ಸಂಪ್ರದಾಯ ಇರುವವರು ಈಗಾಗಲೆ ಗೊಂಬೆಗಳ ಖರೀದಿ ಆರಂಭಿಸಿದ್ದಾರೆ. ಮಲ್ಲೇಶ್ವರ, ಗಾಂಧಿ ಬಜಾರ್, ಮಡಿವಾಳ ಸೇರಿ ನಗರದ ಮಾರುಕಟ್ಟೆಗಳಲ್ಲಿ ಹಾಗೂ ಮಳಿಗೆಗಳಲ್ಲಿ ಗೊಂಬೆಗಳ ಮಾರಾಟ ಚುರುಕಾಗಿದೆ.

    ಶ್ರೀರಾಮ ಕಥಾ ಸುಧಾ: ಭಾರತೀಯ ವಿದ್ಯಾ ಭವನದ ಬೆಂಗಳೂರು ಕೇಂದ್ರವು ಅ.15ರಿಂದ 24ರವರೆಗೆ ‘ಶ್ರೀರಾಮ ಕಥಾ ಸುಧಾ’ ಶೀರ್ಷಿಕೆಯಡಿ ಗೊಂಬೆ ಹಬ್ಬ ಏರ್ಪಡಿಸಿದೆ. ಭವನದ ಕೆ.ಆರ್.ಜೆ ಸಭಾಂಗಣದಲ್ಲಿ ಪ್ರದರ್ಶನ ನಡೆಯಲಿದೆ.
    ಕುಶಲಕರ್ಮಿಗಳ ಕುಟುಂಬದವರಾದ ಅಪರ್ಣ ಮತ್ತು ಶ್ರೀಕಾಂತ ಆಚಾರ್ಯ ಅವರು ಈ ಪ್ರದರ್ಶನ ರೂಪಿಸಿದ್ದಾರೆ. ಕೈಯಿಂದಲೇ ಮಾಡಿರುವ ಸಾಂಪ್ರದಾಯಿಕ ಶೈಲಿಯ ಗೊಂಬೆಗಳ ಮೂಲಕ ರಾಮಾಯಣ, ಮಹಾಭಾರತ, ಶ್ರೀಮದ್ಭಾಗವತ ಮೊದಲಾದ ಪುರಾಣ ಕತೆಗಳನ್ನು ಬಿಂಬಿಸುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಅಪರ್ಣ ದಂಪತಿ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ವರ್ಷದ ನವರಾತ್ರಿಯಲ್ಲಿ ರಾಮಾಯಣದ ಕಥೆಯ ಸಾರವನ್ನು ಬಿಂಬಿಸುವ ಗೊಂಬೆ ಹಬ್ಬವನ್ನು ಆಯೋಜಿಸುವ ಮೂಲಕ ಯುವಪೀಳಿಗೆಗೆ ರಾಮಾಯಣ ಪರಿಚಯ ಮಾಡಿಕೊಡಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts