More

    ವಂಚನೆಯ ಕರಾಳ ಜಾಲ: ಮೋಸದಾಟ ತಡೆಯಲು ಬೇಕಿದೆ ಸೂಕ್ತ ನೀತಿ

    ಜನರ ಅಗತ್ಯ, ಅನಿವಾರ್ಯತೆಗಳಿಗೆ ಸೂಕ್ತವಾಗಿ ಸ್ಪಂದಿಸಿದರೆ ಸುಧಾರಣೆಯ ದಾರಿಗಳು ತೆರೆದುಕೊಳ್ಳುತ್ತವೆ. ಆದರೆ, ಇದನ್ನೇ ದುರುಪಯೋಗ ಪಡಿಸಿಕೊಂಡು ವಂಚನೆ, ಮೋಸ ಮಾಡಿದರೆ ಅದರಿಂದ ಅಸಂಖ್ಯ ಜನರ ಭವಿಷ್ಯವೇ ಅತಂತ್ರವಾಗುತ್ತದೆ. ವಂಚನೆಗೆ ನಾನಾ ಮುಖಗಳು ಎಂಬುದು ಗೊತ್ತಿರುವಂಥದ್ದೇ. ಅದೆಷ್ಟೇ ಎಚ್ಚರಿಕೆ ನೀಡಿದರೂ, ಅರಿವು ಮೂಡಿಸಿದರೂ ಇಂಥ ಜಾಲಗಳು ಅಲ್ಲಲ್ಲಿ ಸಕ್ರಿಯವಾಗಿ, ಅಮಾಯಕರನ್ನು ಯಾಮಾರಿಸುತ್ತವೆ. ನೌಕರಿ ಕೊಡಿಸುವ ನೆಪದಲ್ಲಿ ವಂಚನೆ ಮಾಡುವಂಥ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆ. ಯುವಕ/ಯುವತಿಯರು ಬದುಕು ಕಟ್ಟಿಕೊಳ್ಳಲು ಉತ್ತಮ ಉದ್ಯೋಗವನ್ನು ಅರಸುವುದು ಸ್ವಾಭಾವಿಕ. ಉದ್ಯೋಗ ಪಡೆದುಕೊಳ್ಳಲು ದೀರ್ಘ ಪ್ರಕ್ರಿಯೆ ಅನುಸರಿಸಬೇಕಾಗುತ್ತದೆ. ಇಂಥ ಹೊತ್ತಲ್ಲಿಯೇ ವಂಚಕರ ಪ್ರವೇಶ ಆಗುವುದು. ಇಂತಿಷ್ಟು ಹಣ ಕೊಟ್ಟರೆ ನೌಕರಿ ಕೊಡಿಸುವುದಾಗಿ ನಂಬಿಸಿಬಿಡುತ್ತಾರೆ. ಇಂತಿಂಥ ಕಡೆಗಳಲ್ಲಿ ಇಷ್ಟು ಜನರಿಗೆ ನೌಕರಿ ಕೊಡಿಸಿದ್ದೇವೆ ಎಂದು ಬೊಗಳೆ ಬಿಡುತ್ತಾರೆ. ಸಮಯ ಮತ್ತು ಶ್ರಮ ಉಳಿಯುತ್ತದೆ ಎಂಬ ಲೆಕ್ಕಾಚಾರದಲ್ಲಿ ಉದ್ಯೋಗಾಕಾಂಕ್ಷಿಗಳು ಇಂಥವರಿಗೆ ದುಡ್ಡು ಕೊಟ್ಟು, ಕೈಸುಟ್ಟುಕೊಳ್ಳುತ್ತಾರೆ. ತಮಗೆ ಮೋಸವಾಗಿದೆ ಎಂದು ಅರ್ಥವಾಗುವಷ್ಟರಲ್ಲಿ ತಡವಾಗಿರುತ್ತದೆ. ಇಲ್ಲವೆ, ಇವರು ನೀಡಿರುವ ಮೊತ್ತಕ್ಕೆ ಸಾಕ್ಷ್ಯಾಧಾರಗಳು ಇಟ್ಟುಕೊಂಡಿರುವುದಿಲ್ಲ. ಕೆಲವೊಬ್ಬರು ಐದು, ಹತ್ತು ಸಾವಿರ ಹಣ ಕಳೆದುಕೊಂಡಾಗ, ಇಷ್ಟು ಹಣಕ್ಕಾಗಿ ಪೊಲೀಸ್ ಠಾಣೆ, ನ್ಯಾಯಾಲಯ ಅಂತ ಅಲೆದಾಡುವುದು ಕಷ್ಟ ಎಂದು ಸುಮ್ಮನಾಗಿಬಿಡುತ್ತಾರೆ. ಇದರಿಂದ, ವಂಚಕರು ತಮಗೆ ಏನೂ ಆಗುವುದಿಲ್ಲ, ಕಾನೂನಿನ ಕೈ ತಮ್ಮ ಬಳಿ ತಲುಪುವುದಿಲ್ಲ ಎಂದು ಭಾವಿಸಿಕೊಂಡು ಮತ್ತಷ್ಟು ಜನರಿಗೆ ಟೋಪಿ ಹಾಕುತ್ತಾರೆ.

    ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಲ್ಲೂ ಇಂಥದ್ದನ್ನು ಗಮನಿಸಬಹುದು. ಅರೆಕಾಲಿಕ ಉದ್ಯೋಗ ಕೊಡುತ್ತೇವೆ, ಮನೆಯಿಂದಲೇ ಇಷ್ಟು ಗಂಟೆ ಕೆಲಸ ಮಾಡಿ ಒಳ್ಳೆಯ ಸಂಬಳ ಪಡೆಯಬಹುದು ಅಂತೆಲ್ಲ ಆಮಿಷ ತೋರಿಸಿ, ಲಿಂಕ್​ಗಳನ್ನು ಕಳುಹಿಸುತ್ತಾರೆ. ಈ ಲಿಂಕ್ ಕ್ಲಿಕ್ ಮಾಡಿದಾಗ ಅರ್ಜಿಗೆ ಶುಲ್ಕ, ಪ್ರವೇಶ ಶುಲ್ಕ, ಆನ್​ಲೈನ್ ಸಂದರ್ಶನಕ್ಕೂ ಶುಲ್ಕ ಎಂತೆಲ್ಲ ಹಣ ಕಿತ್ತುಕೊಂಡು, ಕೊನೆಗೆ ಪಂಗನಾಮ ಹಾಕುವಂಥ ಪ್ರಕರಣಗಳಿಗೆ ಕೊರತೆಯಿಲ್ಲ. ಚಿತ್ರದುರ್ಗದಲ್ಲಿ ಇಂಥದ್ದೇ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಭಾರತೀಯ ಸೇನೆಯಲ್ಲಿ ನೌಕರಿ ಕೊಡಿಸುವುದಾಗಿ ಯುವಕರಿಗೆ ವಂಚಿಸಿದ್ದ ಇಬ್ಬರು ಈಗ ಪೊಲೀಸರ ಅತಿಥಿಯಾಗಿದ್ದಾರೆ. ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳಲ್ಲಿ 150 ಯುವಕರಿಗೆ ಆಮಿಷವೊಡ್ಡಿ, ಉದ್ಯೋಗ ಆಕಾಂಕ್ಷಿಗಳಿಂದ ಅರ್ಜಿ ಶುಲ್ಕ, ಇನ್ನಿತರ ನೆಪದಲ್ಲಿ 1 ಕೋಟಿ ರೂ. ಸುಲಿಗೆ ಮಾಡಲಾಗಿದೆ. ಈ ಬಗ್ಗೆ ನೊಂದ ಯುವಕರು ಕೊಟ್ಟ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ನಕಲಿ ಗುರುತಿನ ಚೀಟಿ, ಸೇನಾ ನೇಮಕಾತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂಬುದು ಗಮನಾರ್ಹ.

    ಇಂಥ ಪ್ರಕರಣಗಳನ್ನು ವ್ಯವಸ್ಥೆ ಗಂಭೀರವಾಗಿ ಪರಿಗಣಿಸಬೇಕಿದೆ. ವಂಚನೆಯ ಜಾಲಗಳಿಗೆ ಕಡಿವಾಣ ಹಾಕಲು ಸರ್ಕಾರ ಸೂಕ್ತ ನೀತಿಯೊಂದನ್ನು ರೂಪಿಸುವುದು ಅವಶ್ಯ. ಯುವಕರು ಕೂಡ ಹಿಂದೆಮುಂದೆ ಯೋಚನೆ ಮಾಡದೆ ದುಡ್ಡು ನೀಡುವಂಥ ದಡ್ಡತನ ಮಾಡಬಾರದು. ಇಂಥ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ನೀಡಬೇಕು. ಆಗಲೇ, ಸಮಾಜದ್ರೋಹಿಗಳ ಹೆಡೆಮುರಿ ಕಟ್ಟಲು ಸಾಧ್ಯ.

    ಈ ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳ ಬೇಡಿಕೆ ಹೆಚ್ಚಿದ ನಂತರ ವಿಮಾನ ಟಿಕೆಟ್‌ ದರ ಶೇ.30ರಷ್ಟು ಅಗ್ಗ

    ಬಿಕ್ಕಟ್ಟು: ಇಂಧನ ಕೊರತೆಯಿಂದ ದಿವಾಳಿಯ ಅಂಚಿನಲ್ಲಿರುವ ಪಾಕಿಸ್ತಾನ ಏರ್‌ಲೈನ್ಸ್, 26 ವಿಮಾನಗಳ ಹಾರಾಟ ರದ್ದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts