More

    ಕುಡ್ಲದಲ್ಲಿ ಡಾಪ್ಲರ್ ವೆದರ್ ರಾಡಾರ್, ತ್ವರಿತ, ನಿಖರ ಹವಾಮಾನ ಮಾಹಿತಿ

    ವೇಣುವಿನೋದ್ ಕೆ.ಎಸ್.ಮಂಗಳೂರು

    ರಾಜ್ಯದಲ್ಲಿ ಹವಾಮಾನ ಕುರಿತ ತ್ವರಿತವಾಗಿ ಖಚಿತ ಮಾಹಿತಿ ಪಡೆಯುವ ಉದ್ದೇಶದಿಂದ ಹವಾಮಾನ ಇಲಾಖೆ ಕರಾವಳಿಯ ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಡಾಪ್ಲರ್ ವೆದರ್ ರಾಡಾರ್(ಡಿಡಬ್ಲೂೃಆರ್) ಸ್ಥಾಪನೆಗೆ ಮುಂದಾಗಿದೆ.

    ಇದುವರೆಗೆ ಒಂದು ದಿನ ಹಾಗೂ ಅದಕ್ಕಿಂತ ಹೆಚ್ಚಿನ ಮುನ್ಸೂಚನೆ ಅಂದರೆ ‘ಫೋರ್‌ಕಾಸ್ಟ್’ ಮಾತ್ರ ಲಭಿಸುತ್ತಿದೆ. ಒಂದು ವೇಳೆ ಡಾಪ್ಲರ್ ರಾಡಾರ್‌ಗಳನ್ನು ಸ್ಥಾಪಿಸಿದರೆ ‘ನೌ-ಕಾಸ್ಟ್’ (ಮುಂದಿನ ಒಂದೆರಡು ಗಂಟೆಗಳಲ್ಲಿ) ನಮ್ಮ ಹವಾಮಾನ ಹೇಗಿರಬಹುದು ಎನ್ನುವ ಮಾಹಿತಿ ಲಭ್ಯವಾಗಲಿದೆ. ಇದರಿಂದ ಜನರಿಗೆ ಹೆಚ್ಚು ತ್ವರಿತ ಮತ್ತು ನಿಖರವಾಗಿ ಹವಾಮಾನ ಮುನ್ಸೂಚನೆ ಸಿಗಲಿದೆ.

    ಹಳೆಯ ಸಾಂಪ್ರದಾಯಿಕ ರಾಡಾರ್‌ಗಳಿಗಿಂತ ಹೆಚ್ಚು ವೈಜ್ಞಾನಿಕ ಮಾಹಿತಿ ಇದರಲ್ಲಿ ಲಭ್ಯವಾಗುತ್ತದೆ. ಅದರೊಂದಿಗೆ ಪ್ರತಿ ಅರ್ಧ ಗಂಟೆಗೊಮ್ಮೆ ಹವಾಮಾನ ಇಲಾಖೆಯವರಿಗೆ ಮೋಡಗಳ ಚಲನೆ ಇರುವ ಉಪಗ್ರಹದ ಚಿತ್ರಗಳೂ ಸಿಗುವುದರಿಂದ ಜನರಿಗೆ ಉಪಯುಕ್ತವಾದ ಮುನ್ಸೂಚನೆ ನೀಡಬಹುದು.

    ಎಲ್ಲೆಲ್ಲಿ?: ಈ ಯೋಜನೆಯನ್ನು ವಿಶ್ವ ಬ್ಯಾಂಕ್ ನೆರವಿನೊಂದಿಗೆ ಕೈಗೆತ್ತಿಕೊಳ್ಳಲಾಗುತ್ತಿದೆ, ಸರಾಸರಿ ಒಂದು ಡಾಪ್ಲರ್ ರಾಡಾರ್‌ಗೆ 10-12 ಕೋಟಿ ರೂ.ಅಗತ್ಯವಿದೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ ರಾಡಾರ್ ಸ್ಥಾಪನೆ ಕುರಿತ ಪ್ರಸ್ತಾವನೆಯನ್ನು ವಿಶ್ವಬ್ಯಾಂಕ್‌ಗೆ ಸಲ್ಲಿಸಲಾಗಿದ್ದು ಅನುಮೋದನೆಯೂ ದೊರೆತಿದೆ. ಆದರೆ ಇದು ಸ್ಥಾಪನೆಯಾಗಲು ಕೆಲ ತಾಂತ್ರಿಕ ಪ್ರಕ್ರಿಯೆಗಳು ಪೂರ್ಣಗೊಳ್ಳದ ಕಾರಣ ಒಂದೆರಡು ವರ್ಷಗಳೇ ಬೇಕಾಗಬಹುದು ಎನ್ನಲಾಗುತ್ತಿದೆ.

    ಬೆಂಗಳೂರಿನಲ್ಲಿ ಎಲ್ಲಿ ಇದನ್ನು ಸ್ಥಾಪಿಸಬೇಕೆಂಬ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಆಗಿಲ್ಲ. ಮೂರು ಜಾಗಗಳನ್ನು ನೋಡಲಾಗಿದೆ. ಮಂಗಳೂರಿನ ಶಕ್ತಿನಗರ ಪ್ರದೇಶವನ್ನು ರಾಡಾರ್ ಸ್ಥಾಪನೆಗೆ ಅಂತಿಮಗೊಳಿಸಲಾಗಿದೆ ಎಂದು ಹವಾಮಾನ ಇಲಾಖೆ ಬೆಂಗಳೂರಿನ ನಿರ್ದೇಶಕಿ ಗೀತಾ ತಿಳಿಸಿದ್ದಾರೆ.

    ಈಗ ಎಲ್ಲೆಲ್ಲಿದೆ?: ಪ್ರಸ್ತುತ ಭಾರತದಲ್ಲಿ ಹೆಚ್ಚು ಸೈಕ್ಲೋನ್ ದಾಳಿಗೆ ತುತ್ತಾಗುವ ಪೂರ್ವ ಕರಾವಳಿಯಲ್ಲಿ ಹೆಚ್ಚು ಡಾಪ್ಲರ್ ರಾಡಾರ್‌ಗಳಿವೆ. ಕೋಲ್ಕತಾ, ಪಾರಾದೀಪ್, ಗೋಪಾಲಪುರ, ವಿಶಾಖಪಟ್ಟಣ, ಮಚಲೀಪಟ್ಟಣಂ, ಶ್ರೀಹರಿಕೋಟ, ಕರೈಕಲ್ ಮತ್ತು ಚೆನ್ನೈ, ಪಶ್ಚಿಮ ಕರಾವಳಿಯ ತಿರುವನಂತಪುರಂ, ಕೊಚ್ಚಿ, ಗೋವಾ ಮತ್ತು ಮುಂಬೈನಲ್ಲಿ ಇವೆ. ಕರಾವಳಿ ಹೊರತುಪಡಿಸಿದರೆ, ಶ್ರೀನಗರ, ಪಟಿಯಾಲಾ, ದೆಹಲಿ, ಜೈಪುರ ಸೇರಿದಂತೆ ಒಟ್ಟು 27ರಷ್ಟು ಡಾಪ್ಲರ್ ರಾಡಾರ್‌ಗಳು ದೇಶದಲ್ಲಿವೆ.

    ಡಾಪ್ಲರ್ ರಾಡಾರ್ ವಿಶೇಷತೆ: ಮೋಡಗಳ ಇರುವಿಕೆಯನ್ನು ಪತ್ತೆ ಮಾಡುವುದಷ್ಟೇ ಅಲ್ಲ, ಅವುಗಳು ಚಲನೆಯ ವೇಗವನ್ನೂ ಪತ್ತೆ ಮಾಡುವುದೇ ಡಾಪ್ಲರ್ ವೆದರ್ ರಾಡಾರ್‌ಗಳ ವಿಶೇಷ. ಸುಮಾರು 200 ಕಿ.ಮೀ.ದೂರದ ಮೋಡಗಳ ಪ್ರಮಾಣ ಎಷ್ಟಿದೆ ಎನ್ನುವುದನ್ನೂ ಪತ್ತೆ ಮಾಡುತ್ತದೆ. ತೀರ ಇತ್ತೀಚೆಗಿನ ಮಾಹಿತಿಯನ್ನೂ ಪಡೆಯಬಹುದು. ಎಷ್ಟು ಪ್ರಮಾಣದಲ್ಲಿ ಮಳೆಯಾಗಬಹುದು ಎನ್ನುವುದನ್ನೂ ತಿಳಿಯಬಹುದು. ಹಾಗಾಗಿಯೇ ಇಂತಹ ರಾಡಾರ್‌ಗಳನ್ನು ಅಳವಡಿಸಲು ಯೋಜಿಸಲಾಗಿದೆ.

    ಮುಖ್ಯವಾಗಿ ಮುಂದಿನ ಒಂದೆರಡು ಗಂಟೆಗಳಲ್ಲಿ ಹವಾಮಾನದಲ್ಲಿ ಆಗುವ ಬೆಳವಣಿಗೆಗಳ ಬಗ್ಗೆ ಡಾಪ್ಲರ್ ರಾಡಾರ್‌ಗಳು ನಿಖರ ಮಾಹಿತಿ ನೀಡುತ್ತವೆ. ಸೈಕ್ಲೋನ್‌ಗಳು ಹೆಚ್ಚಾಗಿರುವ ಈ ಸಂದರ್ಭ ಇದರ ಅಗತ್ಯ ಹೆಚ್ಚಿದೆ.

    ಗೀತಾ
    ನಿರ್ದೇಶಕಿ, ಭಾರತೀಯ ಹವಾಮಾನ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts