More

    ಮಂಗಳೂರು ನಗರದ ರಸ್ತೆಬದಿ ಅಪಾಯಕಾರಿ ಮರಗಳು

    ಮಂಗಳೂರು: ಮಂಗಳೂರು ನಗರ ವಿವಿಧ ಕಡೆ ರಸ್ತೆ ಬದಿ ಬೃಹತ್ ಮರಗಳು ಒಣಗಿ ನಿಂತಿದ್ದು, ಇನ್ನು ಕೆಲವು ಕೊಂಬೆಗಳು ಮುರಿದು ಬೀಳುವ ಹಂತದಲ್ಲಿವೆ. ಅರಣ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆ ಎಚ್ಚರ ವಹಿಸದಿದ್ದರೆ ಮಳೆಗಾಲದಲ್ಲಿ ಬೆಂಗಳೂರು, ಮೈಸೂರು ಮಾದರಿಯಲ್ಲಿ ಇಲ್ಲೂ ಅನಾಹುತ ಸಂಭವಿಸುವ ಸಾಧ್ಯತೆಗಳಿವೆ.

    ನಗರದಲ್ಲಿ ಒಣಗಿದ, ರೋಗಗ್ರಸ್ತ ಮತ್ತು ವಯಸ್ಸಾದ ಮರಗಳು, ರೆಂಬೆಗಳನ್ನು ಮಳೆಗಾಲಕ್ಕೆ ಮುನ್ನವೇ ತೆರವುಗೊಳಿಸುವ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಗಾಳಿ, ಮಳೆಯಾಗುವ ಸಂದರ್ಭ ಅದರಲ್ಲೂ ರಾತ್ರಿ ವೇಳೆ ರಸ್ತೆಯಲ್ಲಿ ಸಂಚರಿಸುವವರಿಗೆ ಅಪಾಯಕಾರಿ. ಕೆಲವೊಂದು ಮರಗಳು ಬುಡ ಸಮೇತ ನೆಲಕ್ಕುರುಳಿದರೆ, ಇನ್ನು ಕೆಲವು ಕಡೆ ಗಾಳಿ ಜೋರಾಗಿ ಬೀಸಿದಾಗ ರೆಂಬೆ ಮುರಿದು ಬೀಳುವ ಸಾಧ್ಯತೆ ಇದೆ.

    ಎಲ್ಲೆಲ್ಲಿವೆ

    ನಗರದ ಜೈಲು ರಸ್ತೆಯಲ್ಲಿ ಬೃಹತ್ ಮಾವಿನ ಮರವೊಂದು ಒಣಗಿ ನಿಂತಿದ್ದು, ಇದರ ಅಡಿಯಲ್ಲಿ ನಿರಂತರವಾಗಿ ವಾಹನಗಳು ಸಂಚರಿಸುತ್ತಿವೆ. ಸಮೀಪದಲ್ಲಿ ಅಂಗಡಿ, ಹೋಟೆಲ್‌ಗಳಿವೆ. ವಾಹನ ಪಾರ್ಕಿಂಗ್ ಕೂಡ ಮಾಡಲಾಗುತ್ತಿದೆ. ಈ ಅಪಾಯಕಾರಿ ಮರವನ್ನು ತಕ್ಷಣ ತೆರವು ಮಾಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

    ಕೂಳೂರು- ಕಾವೂರು ರಸ್ತೆ, ಕೆಪಿಟಿ- ಬೋಂದೆಲ್ ರಸ್ತೆ, ಕಂಕನಾಡಿ-ವೆಲೆನ್ಸಿಯಾ ರಸ್ತೆ, ಮಣ್ಣಗುಡ್ಡ ಪರಿಸರ ಮೊದಲಾದ ನಗರದ ಹೃದಯ ಭಾಗಗಳಲ್ಲಿ ಅಪಾಯಕಾರಿ ಮರಗಳಿವೆ. ಇನ್ನು ಕೆಲವು ಕಡೆ ರಸ್ತೆ ಬದಿಗಳಲ್ಲಿ ತೆಂಗಿನ ಮರಗಳಿದ್ದು, ಜೋರು ಗಾಳಿ, ಮಳೆಗೆ ಬುಡ ಸಮೇತ ನೆಲಕ್ಕುರುಳುತ್ತಿವೆ. ಬಹುತೇಕ ಸಂದರ್ಭ ವಿದ್ಯುತ್ ತಂತಿಗಳ ಮೇಲೆ ಮರ ಮುರಿದು ಬಿದ್ದು ಮೆಸ್ಕಾಂಗೂ ಆರ್ಥಿಕ ನಷ್ಟ. ಸರಿಪಡಿಸುವ ತನಕ ಸ್ಥಳೀಯರಿಗೆ ವಿದ್ಯುತ್ ಕೂಡ ಕಡಿತಗೊಳ್ಳುತ್ತದೆ.

    ಬೇರುಗಳಿಗೆ ಹಾನಿ

    ರಸ್ತೆ ವಿಸ್ತರಣೆ, ಕಾಂಕ್ರಿಟ್ ಕಾಮಗಾರಿ, ಒಳಚರಂಡಿ, ನೀರಿನ ಕೊಳವೆಗಳು, ವಿದ್ಯುತ್ ಕೇಬಲ್ ಅಳವಡಿಕೆ ಸಹಿತ ಇತರೆ ಕಾಮಗಾರಿಗಳಿಗೆ ನೆಲ ಅಗೆಯುವಾಗ ಮರದ ಬೇರುಗಳನ್ನು ತುಂಡರಿಸಲಾಗುತ್ತದೆ. ಭೂಮಿಯ ಮೇಲ್ಭಾಗದಲ್ಲಿ ಎಷ್ಟು ವಿಶಾಲವಾಗಿ ರೆಂಬೆ-ಕೊಂಬೆಗಳು ಚಾಚಿರುತ್ತವೆಯೋ, ಭೂಮಿಯೊಳಗೆ ಅದರ ಬೇರುಗಳ ಜಾಲವೂ ಅಷ್ಟೆ ಹರಡಿರಬೇಕು. ಇಲ್ಲದಿದ್ದರೆ, ಸಮತೋಲನ ತಪ್ಪುತ್ತದೆ. ಬೇರುಗಳಿಗೆ ಹೆಚ್ಚಿನ ಹಾನಿ ಆದರೆ ಮರ ಸಾಯುತ್ತದೆ. ಇದೇ ಪರಿಸ್ಥಿತಿ ನಗರದ ಮರಗಳಿಗೆ ಉಂಟಾಗಿದೆ.

    ಅಂಗಡಿ-ಮುಂಗಟ್ಟುಗಳು, ಜಾಹೀರಾತು ಫಲಕಗಳಿಗೆ ಅಡ್ಡಿಯಾಗುವ ಮರಗಳಿಗೆ ವಿಷವಿಟ್ಟು ಸಾಯಿಸಲಾಗುತ್ತಿದೆ. ಮನೆ ಛಾವಣಿ ಮೇಲೆ ಎಲೆಗಳು ಉದುರುವ ಕಾರಣಕ್ಕೆ ಮತ್ತು ಮೆಸ್ಕಾಂ ಸಿಬ್ಬಂದಿ ವಿದ್ಯುತ್ ತಂತಿಗಳಿಗೆ ತಾಗುವ ರೆಂಬೆಗಳನ್ನು ಮನಸೋಇಚ್ಛೆ ಕಡಿದು ಬಿಸಾಡುತ್ತಿದ್ದಾರೆ. ರೆಂಬೆಗಳನ್ನು ವೈಜ್ಞಾನಿಕವಾಗಿ ಕತ್ತರಿಸುತ್ತಿಲ್ಲ. ಇದರಿಂದಾಗಿ, ಸಮತೋಲನ ಕಳೆದುಕೊಂಡು ಮಳೆಗಾಲದಲ್ಲಿ ನೆಲಕ್ಕುರುಳುತ್ತಿವೆ.

    ಮಂಗಳೂರು ನಗರದಲ್ಲಿ ರಸ್ತೆಬದಿ ಅಪಾಯಕಾರಿ ಮರಗಳು ಇರುವುದು ಗಮನಕ್ಕೆ ಬಂದಿದ್ದು, ಅವುಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಜತೆ ಸಮಾಲೋಚನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.
    ಜಯಾನಂದ ಅಂಚನ್ ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts