More

    ಪ್ರಾಣ ಕಸಿಯುವ ಕೇಬಲ್

    ಹರೀಶ್ ಮೋಟುಕಾನ, ಮಂಗಳೂರು
    ನಗರದಲ್ಲಿ ಎಲ್ಲೆಂದರಲ್ಲಿ ಕಂಬಗಳಿಗೆ ಸುತ್ತಿ ಇಟ್ಟಿರುವ ಕೇಬಲ್‌ಗಳು ಭಾರಿ ಅಪಾಯಕಾರಿಯಾಗಿದೆ. ಒಂದಿಷ್ಟು ರಸ್ತೆ ಅಂಚಿನಲ್ಲಿ ದ್ವಿಚಕ್ರ ಚಲಾಯಿಸಿದರೆ ಕುತ್ತಿಗೆಗೆ ಸಿಲುಕಿಕೊಂಡು ಪ್ರಾಣ ಎರವಾಗುವುದು ನಿಶ್ಚಿತ.
    ಬಳ್ಳಾಲ್‌ಭಾಗ್-ಮಣ್ಣಗುಡ್ಡ ರಸ್ತೆಯಲ್ಲಿ ಎರಡು ದಿನಗಳ ಹಿಂದೆ ದ್ವಿಚಕ್ರ ಸವಾರರೊಬ್ಬರ ಕುತ್ತಿಗೆಗೆ ಈ ಕೇಬಲ್ ಸಿಲುಕಿದ ಪರಿಣಾಮ ರಸ್ತೆಗೆ ಎಸೆಯಲ್ಪಟ್ಟಿದ್ದರು. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಕೇಬಲ್‌ಗಳು ಯಾವುದೇ ಕ್ಷಣದಲ್ಲಿ ಅಮಾಯಕರ ಪ್ರಾಣ ತೆಗೆಯಲು ಸಿದ್ಧವಾಗಿರುವಂತೆ ಕಂಬಗಳಿಗೆ ಸುತ್ತಿಡಲಾಗಿದೆ.

    ನಗರದ ಬಳ್ಳಾಲ್‌ಭಾಗ್, ಬಿಜೈ ಕಾಪಿಕಾಡ್ ರಸ್ತೆ, ಮೇರಿಹಿಲ್ ಸೇರಿಂದತೆ ನಗರದ ನಾನಾ ಕಡೆ ಕಂಬಗಳಿಗೆ, ಮರಗಳಿಗೆ ಕೇಬಲ್‌ಗಳನ್ನು ಸುತ್ತಿ ಇಡಲಾಗಿದೆ. ಇದು ಕೆಲವೊಮ್ಮೆ ಬಿಚ್ಚಿ ರಸ್ತೆಗೆ, ಫುಟ್‌ಪಾತ್‌ಗೆ ಬೀಳುತ್ತವೆ. ಪಾದಚಾರಿಗಳ ಕಾಲಿಗೆ ಸಿಲುಕಿ ಹಲವು ಮಂದಿ ಬಿದ್ದು, ಎದ್ದು ಹೋಗಿದ್ದಾರೆ. ಸಾರ್ವಜನಿಕರ ಸುರಕ್ಷತೆ ಉದ್ದೇಶದಿಂದ ಈ ಕೇಬಲ್‌ಗಳನ್ನು ನಿರ್ವಹಣೆ ಕಡೆಗೆ ಸಂಬಂಧಪಟ್ಟ ಕಂಪೆನಿಗಳು ಗಮನ ನೀಡಬೇಕಾಗಿದೆ.

    ವಿದ್ಯುತ್ ಪ್ರವಹಿಸುವ ಅಪಾಯ:  ಈ ಕೇಬಲ್‌ಗಳನ್ನು ನಗರದಲ್ಲಿ ವಿದ್ಯುತ್ ಕಂಬಗಳಿಗೆ ಕಟ್ಟಿರುವುದು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದೆ. ಮಳೆಗೆ ಕೇಬಲ್‌ಗಳು ಹಾಳಾಗಿ ಅದರ ಮೂಲಕ ವಿದ್ಯುತ್ ಪ್ರವಹಿಸುವ ಸಾಧ್ಯತೆಯೂ ಇದೆ. ಆದ್ದರಿಂದ ಸಾರ್ವಜನಿಕರು ಇದನ್ನು ಮುಟ್ಟದೆ ಇರುವುದು ಹೆಚ್ಚು ಸುರಕ್ಷಿತ. ಪಾದಚಾರಿಗಳು ಓಡಾಡುವಾಗ ಈ ಕೇಬಲ್‌ಗಳ ಕಡೆಗೆ ಗಮನ ವಹಿಸುವುದು ಉತ್ತಮ.

    ಸ್ಪಂದನೆ ಅವಶ್ಯ: ಕೇಬಲ್‌ಗಳನ್ನು ರವಾನೆ ಮಾಡಿರುವ ಕಂಪನಿಗಳು ಅದರ ನಿರ್ವಹಣೆ ಕಡೆಗೆ ಸಕಾಲಕ್ಕೆ ಗಮನ ವಹಿಸಬೇಕು. ಸಾರ್ವಜನಿಕರಿಂದ ಬರುವ ದೂರುಗಳಿಗೆ ಸ್ಪಂದಿಸಬೇಕು. ಅಮಾಯಕರ ಜೀವ ಕಸಿಯುವ ಕೆಲಸವನ್ನು ಕೇಬಲ್‌ಗಳು ಮಾಡುತ್ತಿವೆ. ಅಲ್ಲಲ್ಲಿ ಮರಗಳಿಗೆ, ಕಂಬಗಳಿಗೆ ಕೇಬಲ್ ಸುತ್ತಿಡುವುದು ನಗರದ ಅಂದವನ್ನೂ ಕೆಡಿಸುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
    ಕೇಬಲ್‌ಗಳನ್ನು ವಿದ್ಯುತ್ ಕಂಬಕ್ಕೆ ಕಟ್ಟುವವರ ವಿರುದ್ಧ ಮೆಸ್ಕಾಂ ಸೂಕ್ತ ಕ್ರಮ ಕೈಗೊಳ್ಳಬೇಕು. ಮರಗಳಿಗೆ ಕಟ್ಟದಂತೆ ಮಹಾನಗರಪಾಲಿಕೆ, ಅರಣ್ಯ ಇಲಾಖೆ ಸೂಕ್ತ ಎಚ್ಚರಿಕೆ ನೀಡಬೇಕು. ಕೇಬಲ್‌ಗಳನ್ನು ಸುತ್ತಿ ಇಡುವುದರಿಂದ ಮರಗಳ ಬೆಳವಣಿಗೆಗೂ ಅಡ್ಡಿಯಾಗುತ್ತದೆ ಎಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ವಿದ್ಯುತ್ ಕಂಬ, ಮರಗಳಿಗೆ ಕೇಬಲ್‌ಗಳನ್ನು ಸುತ್ತಿ ಇಟ್ಟಿರುವುದು ನಗರದ ನಾನಾ ಕಡೆಗಳಲ್ಲಿ ಕಂಡು ಬಂದಿವೆ. ಇದು ದ್ವಿಚಕ್ರ ವಾಹನ ಸವಾರರಿಗೆ, ಪಾದಚಾರಿಗಳಿಗೆ ತೊಂದರೆ ಉಂಟಾಗುತ್ತಿದೆ. ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕಾಗಿದೆ. ಕೇಬಲ್‌ಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಬೇಕು.
    ವಿಘ್ನೇಶ್ ಮಂಗಳೂರು, ಖಾಸಗಿ ಉದ್ಯೋಗಿ

    ಬಿಎಸ್ಸೆನ್ನೆಲ್ ಕೇಬಲ್‌ಗಳು ಅಪಾಯಕಾರಿಯಾಗಿದ್ದರೆ ಗಮನ ವಹಿಸಿ ಸರಿಪಡಿಸಲಾಗುವುದು. ಮಣ್ಣಗುಡ್ಡ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದಾಗ ದ್ವಿಚಕ್ರ ಸವಾರ ಸಂಚರಿಸಿದಾಗ ಕೇಬಲ್ ಸಿಲುಕಿಕೊಂಡು ಬಿದ್ದು ಗಾಯಗೊಂಡಿರುವುದು ಗಮನಕ್ಕೆ ಬಂದಿದೆ. ಅವರಿಗೆ ಆಸ್ಪತ್ರೆಯ ವೆಚ್ಚ ನೀಡಿದ್ದೇವೆ. ಎಲ್ಲ ಕಡೆ ಪರಿಶೀಲನೆ ನಡೆಸುತ್ತಿದ್ದು, ಅಪಾಯಕಾರಿಯಾಗಿರುವಲ್ಲಿ ಸರಿಪಡಿಸಲಾಗುವುದು.
    ನಾರಾಯಣ ಪೈ, ಬಿಎಸ್ಸೆನ್ನಲ್ ಉಪ ವಿಭಾಗ ಅಭಿಯಂತರರು, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts