More

    ಅಪಾಯಕಾರಿ ಕಟ್ಟಡದಿಂದ ಕೊನೆಗೂ ಮುಕ್ತಿ

    ಪಿ.ಬಿ.ಹರೀಶ್ ರೈ ಮಂಗಳೂರು

    12 ವರ್ಷಗಳಿಂದ ಅಪಾಯಕಾರಿ ಸ್ಥಿತಿಯಲ್ಲಿದ್ದ ಎರಡು ಹಳೇ ಕಟ್ಟಡಗಳನ್ನು ನೆಲಸಮಗೊಳಿಸಲು ಮಂಗಳೂರು ಮಹಾನಗರ ಪಾಲಿಕೆ ಕೊನೆಗೂ ನಿರ್ಧರಿಸಿದೆ. ಕರೊನಾ ಸೋಂಕು ಈ ಎರಡು ಹಳೇ ಕಟ್ಟಡಗಳನ್ನು ಕೆಡಹುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ!

    ಮಂಗಳೂರು ನಗರದ ಸೆಂಟ್ರಲ್ ಮಾರ್ಕೆಟ್ ಮತ್ತು ಹಳೇ ಮೀನು ಮಾರ್ಕೆಟ್ ಬಳಿಯ ಕಟ್ಟಡ ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ಎನ್‌ಐಟಿಕೆ ಇಂಜಿನಿಯರ್‌ಗಳು ವರದಿ ಸಲ್ಲಿಸಿ 12 ವರ್ಷ ಕಳೆದಿದೆ. ಮನಪಾ ನಗರ ಯೋಜನಾ ಸ್ಥಾಯಿ ಸಮಿತಿ ಕಟ್ಟಡ ಕೆಡವಲು 12 ವರ್ಷದ ಹಿಂದೆಯೇ ಸೂಚನೆ ನೀಡಿತ್ತು. ಆದರೆ ವರ್ತಕರ ಲಾಬಿ ಹಾಗೂ ಪಾಲಿಕೆಯ ನಿರ್ಲಕ್ಷೃದಿಂದ ಅಪಾಯಕಾರಿ ಕಟ್ಟಡದಲ್ಲೇ ಇದುವರೆಗೆ ವ್ಯಾಪಾರ ನಡೆದಿತ್ತು.

    ಸ್ಥಳಾಂತರಕ್ಕೆ ನಕಾರ: ಲಾಕ್‌ಡೌನ್ ಸಂದರ್ಭ ಜನರನ್ನು ನಿಯಂತ್ರಿಸುವ ಸಲುವಾಗಿ ಸೆಂಟ್ರಲ್ ಮಾರ್ಕೆಟ್‌ನ ಸಗಟು ವ್ಯಾಪಾರಿಗಳನ್ನು ಬೈಕಂಪಾಡಿಯ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರ ಮಾಡುವಂತೆ ಜಿಲ್ಲಾಡಳಿತ ಸೂಚಿಸಿತ್ತು. ಆದರೆ ಸಗಟು ವ್ಯಾಪಾರಿಗಳು ಆರಂಭದಲ್ಲಿ ಈ ಪ್ರಸ್ತಾವನೆಗೆ ಪೂರಕವಾಗಿ ಸ್ಪಂದಿಸಲಿಲ್ಲ. ಹಾಗಾಗಿ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ ಎಂದು ತಿಳಿಸಿ ಮನಪಾ ಮಾರ್ಕೆಟ್ ಮುಚ್ಚಲು ನಿರ್ಧರಿಸಿದೆ. ಹಳೇ ಕಟ್ಟಡದಲ್ಲಿ ಯಾವುದೇ ವ್ಯವಹಾರ ನಡೆಸಲು ಅನುಮತಿ ನಿರಾಕರಿಸಿದೆ.

    ಮೀನು ಮಾರ್ಕೆಟ್ ಹೆಸರು: ಸೆಂಟ್ರಲ್ ಮಾರ್ಕೆಟ್‌ನಲ್ಲಿ ದಶಕಗಳ ಹಿಂದೆ ಮೀನು ಮಾರ್ಕೆಟ್ ಇತ್ತು. ಬಳಿಕ ಅಲ್ಲಿ ಹೊಸ ಸಂಕೀರ್ಣ ನಿರ್ಮಿಸುವ ಉದ್ದೇಶದಿಂದ ತಾತ್ಕಾಲಿಕವಾಗಿ ಸ್ಟೇಟ್‌ಬ್ಯಾಂಕ್ ಬಳಿ ಮೀನು ಮಾರ್ಕೆಟ್ ಶಿಫ್ಟ್ ಮಾಡಲಾಗಿತ್ತು. 1985ರಲ್ಲಿ ಹೊಸ ಕಟ್ಟಡ ಉದ್ಘಾಟನೆಯಾಗಿದ್ದರೂ, ಮೀನು ಮಾರ್ಕೆಟ್ ಇದ್ದ ಜಾಗ ಖಾಲಿಯಾಗಿಯೇ ಉಳಿದಿದೆ. ಹೆಸರಿಗೆ ಮಾತ್ರ ಇದು ಮೀನು ಮಾರ್ಕೆಟ್. ಎರಡು ಅಂತಸ್ತಿನ ಈ ಕಟ್ಟಡದಲ್ಲಿ ಮಟನ್, ಚಿಕನ್, ಬೀಫ್, ಹಂದಿ ಮಾಂಸದ ಮಾರಾಟ ಸ್ಟಾಲ್ ಸಹಿತ ಒಟ್ಟು 118 ಅಂಗಡಿ ಕೋಣೆಗಳಿವೆ. ಇಂದಲ್ಲ ನಾಳೆ ಕಟ್ಟಡ ಕೆಡವಲೇ ಬೇಕೆಂದು ಮನಪಾ ಇದರ ನಿರ್ವಹಣೆಗೆ ಗಮನಹರಿಸಿಲ್ಲ.

    ಸೆಂಟ್ರಲ್ ಮಾರ್ಕೆಟ್ ದುರವಸ್ಥೆ :ಸೆಂಟ್ರಲ್ ಮಾರ್ಕೆಟ್ ಎಂದೇ ಕರೆಯುವ ನಗರದ ಕೇಂದ್ರ ತರಕಾರಿ ಮಾರ್ಕೆಟ್‌ನಲ್ಲಿ 60 ಸಗಟು ವ್ಯಾಪಾರಿಗಳು, 300ಕ್ಕೂ ಅಧಿಕ ಚಿಲ್ಲರೆ ಮಾರಾಟಗಾರರು ಇದ್ದಾರೆ. ಮಾರ್ಕೆಟ್ ಸುತ್ತ, ಫುಟ್‌ಪಾತ್‌ನಲ್ಲಿ, ಪ್ರವೇಶ ದ್ವಾರದಲ್ಲಿ.. ಹೀಗೆ ಎಲ್ಲೆಂದರಲ್ಲಿ ಹಣ್ಣು, ತರಕಾರಿ ಮಾರಾಟ. ಸ್ವಚ್ಛತೆಯೂ ಇಲ್ಲ. ಮೂಲಸೌಕರ್ಯಗಳೂ ಇಲ್ಲ. ಕೇಂದ್ರ ತರಕಾರಿ ಮತ್ತು ಮೀನು ಮಾರ್ಕೆಟ್ 3.61 ಎಕರೆ ವಿಸ್ತೀರ್ಣ ಹೊಂದಿದೆ. ನಗರದ ಕೇಂದ್ರ ಭಾಗದಲ್ಲಿರುವ ಕೋಟ್ಯಂತರ ರೂ. ಮೌಲ್ಯದ ಈ ಜಾಗದಿಂದ ಪಾಲಿಕೆಗೆ ಆದಾಯ 60-70 ಲಕ್ಷ ರೂ. ಮಾತ್ರ.

    ಮಾರ್ಕೆಟ್‌ನ ಎರಡು ಕಟ್ಟಡಗಳು ಶಿಥಿಲಾವಸ್ಥೆಯಲ್ಲಿ ಇರುವ ಕಾರಣ ಅದನ್ನು ನೆಲಸಮಗೊಳಿಸಿ, ಆಧುನಿಕ ವ್ಯವಸ್ಥೆ ಹೊಸ ಕಟ್ಟಡ ನಿರ್ಮಾಣ ಅವಶ್ಯವಾಗಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಪಿಪಿಪಿ ಮಾದರಿಯಲ್ಲಿ ಹೊಸ ಮಾರ್ಕೆಟ್ ಕಟ್ಟಡ ನಿರ್ಮಾಣವಾಗಲಿದೆ.
    ಅಜಿತ್‌ಕುಮಾರ್ ಹೆಗ್ಡೆ ಶಾನಾಡಿ, ಆಯುಕ್ತರು, ಮನಪಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts