More

    ಎಚ್ಚರ ತಪ್ಪಿದರೆ ಅಪಾಯ ನಿಶ್ಚಿತ


    ಧಾರವಾಡ: ರಸ್ತೆಗಳಲ್ಲಿ ಎಲ್ಲೆಂದರಲ್ಲಿ ತಗ್ಗು-ಗುಂಡಿಗಳು. ಮಳೆಯಾದರೆ ಸಾಕು ಹಳ್ಳಗಳಂತೆ ತುಂಬಿಕೊಳ್ಳುತ್ತವೆ. ಇದು ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಮೃತ್ಯುಕೂಪವಾದ ಗ್ರಾಮೀಣ ಭಾಗದ ರಸ್ತೆಗಳ ಸ್ಥಿತಿ.
    ಜಿಲ್ಲೆಯಲ್ಲಿ ಒಂದು ವಾರ ಸತತ ಸುರಿದ ಮಳೆಯಿಂದ ಗ್ರಾಮೀಣ ಭಾಗದ ಬಹುತೇಕ ರಸ್ತೆಗಳು ಹದಗೆಟ್ಟಿವೆ. ಮಳೆಗೂ ಮುಂಚೆ ಕೆಲ ರಸ್ತೆಗಳು ಹಾಳಾಗಿದ್ದವು. ಇದೀಗ ಗುಂಡಿಗಳು ಮತ್ತಷ್ಟು ಹೆಚ್ಚಾಗಿ, ಗುಣಮಟ್ಟದ ಕಾಮಗಾರಿಯ ಕರಾಳತೆ ಬಿಚ್ಚಿಡುತ್ತಿವೆ.
    ಜಿಲ್ಲೆಯ ಗ್ರಾಮೀಣ ಭಾಗದ ಎಲ್ಲ ರಸ್ತೆಗಳನ್ನು ಉತ್ತಮವಾಗಿ ನಿರ್ವಿುಸಲಾಗಿದೆ ಎಂದು ಜನಪ್ರತಿನಿಧಿಗಳು ಹೇಳುತ್ತಲೇ ಬರುತ್ತಿದ್ದಾರೆ. ಆದರೆ, ಅದು ಮಾತಿಗೆ ಮಾತ್ರ ಎಂಬುದು ಇದೀಗ ಜನರಿಗೆ ಅರ್ಥವಾಗುತ್ತಿದೆ. ಬರೀ ಒಂದು ವಾರ ಸುರಿದ ಮಳೆಗೆ ಅನೇಕ ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿವೆ. ಇನ್ನೂ ಮಳೆಗಾಲ ಪೂರ್ಣಗೊಳ್ಳುವ ಹೊತ್ತಿಗೆ ರಸ್ತೆಗಳ ಸ್ಥಿತಿ ಹೇಗೆ? ಎಂಬ ಚಿಂತೆ ಜನರನ್ನು ಕಾಡುತ್ತಿದೆ.
    ಮುಖ್ಯ ರಸ್ತೆಗಳಲ್ಲಿ ಗುಂಡಿಗಳ ಹಾವಳಿ ಹೆಚ್ಚಿದ್ದರೆ, ಊರಿನಲ್ಲಿನ ರಸ್ತೆಗಳ ಸ್ಥಿತಿ ಇನ್ನೊಂದು ರೀತಿ. ಗ್ರಾಮಗಳಲ್ಲಿನ ರಸ್ತೆಗಳು ಕೆಸರು ಗದ್ದೆಗಳಾಗಿ ಪರಿವರ್ತನೆಯಾಗಿವೆ. ಶಾಲಾ ಮಕ್ಕಳು, ವೃದ್ಧರು, ಮಹಿಳೆಯರು ರಸ್ತೆಯಲ್ಲಿ ಸಂಚರಿಸುವುದೇ ತಲೆನೋವಾಗಿ ಪರಿಣಮಿಸಿದ್ದು, ಕೆಸರಿನ ಅಭಿಷೇಕ ಮಾಮೂಲಿಯಾಗಿದೆ. ಮುಗದ ಗ್ರಾಮದಿಂದ ಕಲಕೇರಿ, ಧಾರವಾಡದಿಂದ ಯಾದವಾಡ ಮಾರ್ಗವಾಗಿ ಉಪ್ಪಿನಬೆಟಗೇರಿ ಹಾಗೂ ಬೈಲಹೊಂಗಲಗೆ ತೆರಳುವ ರಸ್ತೆ, ನವಲಗುಂದ ಮುಖ್ಯ ರಸ್ತೆ, ದೇವರಹುಬ್ಬಳ್ಳಿಯಿಂದ ದೇವಗಿರಿ-ಲಾಳಗಟ್ಟಿಗೆ ತೆರಳುವ ರಸ್ತೆ, ವರವನಾಗಲಾವಿ, ಮಂಡಿಹಾಳ ರಸ್ತೆಗಳಲ್ಲಿ ಮೊಣಕಾಲುದ್ದ ಗುಂಡಿಗಳು ಬಿದ್ದಿದ್ದರೆ, ಕ್ಯಾರಕೊಪ್ಪ ಗ್ರಾಮದಲ್ಲಿನ ರಸ್ತೆಗಳು ಕೆಸರು ಗದ್ದೆಯಾಗಿದ್ದು, ವಾಹನ ಸವಾರರು ಕೈಯಲ್ಲಿ ಜೀವ ಹಿಡಿದು ಸಾಗುವಂತಾಗಿದೆ. ಸ್ವಲ್ಪ ಆಯ ತಪ್ಪಿದರೂ ಅಪಾಯ ನಿಶ್ಚಿತ ಎಂಬ ಸ್ಥಿತಿ ನಿರ್ವಣವಾಗಿದೆ. ಇತ್ತೀಚೆಗೆ ನಿರ್ವಣಗೊಂಡ ರಸ್ತೆಗಳ ಗುಣಮಟ್ಟ ಮಳೆಯಿಂದ ಅನಾವರಣಗೊಂಡಿದೆ. ಹೊಸ ರಸ್ತೆಗಳ ಡಾಂಬರ್ ಒಂದೇ ಮಳೆಗೆ ಕಿತ್ತು ಬರುತ್ತಿವೆ. ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟದಲ್ಲಿ ಎಂದಿಗೂ ರಾಜಿ ಇಲ್ಲ ಎಂದು ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳೂ ಹೇಳುತ್ತಾರೆ. ಆದರೆ ಮಳೆಯಿಂದ ಗುಣಮಟ್ಟ ಬಯಲಾಗುತ್ತಿದೆ. ಇಂತಹ ಘಟನೆಗೆ ಅನೇಕ ರಸ್ತೆಗಳು ಸಾಕ್ಷಿಯಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts