More

    ಹಾಳಾದ ರಸ್ತೆ, ಪ್ರಯಾಣಕ್ಕೆ ಅವಸ್ಥೆ

    ಅಥಣಿ: ಇತ್ತೀಚೆಗೆ ಸುರಿದ ಮಳೆ ಮತ್ತಿತರ ಕಾರಣಗಳಿಂದ ಪಟ್ಟಣದ ಪ್ರಮುಖ ರಸ್ತೆಗಳು ಹಾಳಾಗಿವೆ. ಇದರಿಂದ ವಾಹನ ಸವಾರರು ನಿತ್ಯ ಭಯದಲ್ಲೇ ಸಂಚಾರ ಮಡುತ್ತಿದ್ದಾರೆ. ರಸ್ತೆಯಲ್ಲಿ ಗುಂಡಿಗಳು ಬಿದ್ದು ಪ್ರಯಾಣಿಕರು ಸಮಸ್ಯೆ ಅನುಭವಿಸುತ್ತಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ರಮಕ್ಕೆ ಮುಂದಾಗದಿರುವುದರಿಂದ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಸಾಯಿ ಮಂದಿರದ ವರೆಗಿನ ಅಥಣಿ-ಜಮಖಂಡಿ ರಾಜ್ಯ ಹೆದ್ದಾರಿಯಲ್ಲಿ ಆಳವಾದ ಗುಂಡಿಗಳು ನಿರ್ಮಾಣವಾಗಿದೆ. ಇದೇ ಮಾರ್ಗಕ್ಕೆ ಹೊಂದಿಕೊಂಡಂತೆ ಡಿಸಿಎಂ ಲಕ್ಷ್ಮಣ ಸವದಿ ಅವರ ಮನೆ ಹಾಗೂ ಕಚೇರಿ ಇದ್ದು, ನಿತ್ಯ ಸಾವಿರಾರು ಜನರು ಈ ರಸ್ತೆ ಮೂಲಕ ಸಚಿವರ ಕಚೇರಿಗೆ ವಿವಿಧ ಕೆಲಸಗಳಿಗೆ ತೆರಳುತ್ತಾರೆ.

    2 ವರ್ಷದಲ್ಲಿ ಹಾಳಾದ ರಸ್ತೆ: ಅಥಣಿ-ಜಮಖಂಡಿ ರಸ್ತೆಯನ್ನು 2 ವರ್ಷದ ಹಿಂದೆ ಅಭಿವೃದ್ಧಿ ಪಡಿಸಲಾಗಿತ್ತು. ಆದರೆ, ಕಾಮಗಾರಿ ಕೈಗೊಂಡು ಕೇವಲ 2 ವರ್ಷದಲ್ಲೇ ರಸ್ತೆ ಹಾಳಾಗಿದೆ. ಕಾಮಗಾರಿ ಗುಣಮಟ್ಟದಿಂದ ಕೂಡಿರದ ಕಾರಣ ರಸ್ತೆ
    ಹಾಳಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    ಆರಂಭವಾಗದ ಕಾಮಗಾರಿ: 2018ರ ವಿಧಾನಸಭೆ ಚುನಾವಣೆ ಮುನ್ನ ಕೇಂದ್ರ ಸಚಿವ ನಿತೀನ ಗಡ್ಕರಿ ಅವರು ವಿಜಯಪುರ-ಸಂಕೇಶ್ವರ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿ ಮೊದಲ ಹಂತವಾಗಿ ವಿಜಯಪುರದಿಂದ ಕಾಗವಾಡದವರೆಗಿನ ಸುಮಾರು 100 ಕಿ.ಮಿ. ರಸ್ತೆಯನ್ನು 1,100 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ, 3 ವರ್ಷ ಕಳೆಯುತ್ತ ಬಂದರೂ ಕಾಮಗಾರಿ ಆರಂಭವಾಗಿಲ್ಲ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಹ ಕಾಮಗಾರಿ ಆರಂಭಕ್ಕೆ ಮುತವರ್ಜಿ ವಹಿಸದ ಕಾರಣ ಪ್ರಮುಖ ಯೋಜನೆ ನನೆಗುದ್ದಿಗೆ ಬಿದ್ದಿದೆ.

    ಅಪಾಯದಲ್ಲೇ ಜನಸಂಚಾರ: ಗುಂಡಿ ಬಿದ್ದು ರಸ್ತೆ ಹಾಳಾದ ಕಾರಣ ಈ ಮಾರ್ಗದ ಮೂಲಕ ವಾಹನ ಸವಾರರು ನಿತ್ಯ ಭಯದಲ್ಲೇ ಸಂಚಾರ ಮಾಡುತ್ತಿದ್ದಾರೆ. ಅನೇಕ ವಾಹನ ಸವಾರರು ಬಿದ್ದು ಗಾಯಮಾಡಿಕೊಂಡಿರುವ ಅನೇಕ ಉದಾಹರಣೆಗಳಿವೆ. ಈಗಾಗಲೇ ಕಬ್ಬಿನ ಹಂಗಾಮು ಆರಂಭವಾಗಿದ್ದು, ರಸ್ತೆ ಹಾಳಾದ ಕಾರಣ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಣೆ ಮಾಡಲು ಸಮಸ್ಯೆಯಾಗುತ್ತಿದೆ ಎಂದು ರೈತರು ದೂರಿದ್ದಾರೆ.

    ಇನ್ನಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರಸ್ತೆ ದುರಸ್ತಿಗೆ ಮುಂದಾಗಬೇಕು ಎಂಬುದು ವಾಹನ ಸವಾರರ ಒಕ್ಕೊರಲ ಒತ್ತಾಸೆಯಾಗಿದೆ.

    ವಿಜಯಪುರ-ಕಾಗವಾಡ ರಸ್ತೆಯನ್ನು ಮೇ ತಿಂಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರ ಮಾಡಲಾಗಿದೆ. ರಸ್ತೆ ಹಾಳಾದ ಕುರಿತು ಇಲಾಖೆ ಇಂಜಿನಿಯರ್ ಪರಿಶೀಲಿಸಿ, ಕ್ರಮದ ಭರವಸೆ ನೀಡಿದ್ದಾರೆ. ಅಲ್ಲದೆ, ಕಾಂಕ್ರಿಟ್ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ಸಿಕ್ಕ ನಂತರ ಕಾಮಗಾರಿ ಆರಂಭಿಸಲಾಗುವುದು. ಅಲ್ಲಿಯವರೆಗೆ ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿಸಲಾಗುವುದು.
    | ಜಯಾನಂದ ಹಿರೇಮಠ ಎಇಇ, ಲೋಕೊಪಯೋಗಿ ಇಲಾಖೆ, ಅಥಣಿ

    ರಸ್ತೆ ಹಾಳಾದ ಕಾರಣ ಕಬ್ಬಿನ ಕಾರ್ಖಾನೆಗೆ ಕಬ್ಬು ಸಾಗಣೆ ಮಾಡಲು ಸಮಸ್ಯೆಯಾಗುತ್ತಿದೆ. ವಿಜಯಪುರ-ಕಾಗವಾಡ ರಸ್ತೆ ಸಂಪೂರ್ಣ ಹಾಳಾಗಿದೆ. ಅಥಣಿ-ಜಮಖಂಡಿ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವ ಕಾರಣ ಸಂಚಾರ ದುಸ್ತರವಾಗಿದೆ. ಶೀಘ್ರ ಸಮಸ್ಯೆ ಬಗೆಹರಿಸದಿದ್ದರೆ ರಸ್ತೆ ತಡೆ ನಡೆಸಿ, ಉಗ್ರ ಪ್ರತಿಭಟನೆ ನಡೆಸಲಾಗುವುದು.
    | ಮಹಾದೇವ ಮಡಿವಾಳ ಅಧ್ಯಕ್ಷರು, ರೈತ ಸಂಘ ಅಥಣಿ ಘಟಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts