More

    ಖಾದರ್-ಕೋಟ ಮಾತಿನೇಟು

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವರ್ಗಾವಣೆ ವಿಚಾರ ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ವೇದಿಕೆಯಾಗಿದೆ.
    ಬಕ್ರೀದ್ ಹಿನ್ನೆಲೆಯಲ್ಲಿ ಗೋಸಾಗಾಟದ ವಿರುದ್ಧ ಹಾಗೂ ಆ ವೇಳೆ ಕಾನೂನು ಕೈಗೆತ್ತಿಕೊಳ್ಳುವುದರ ವಿರುದ್ಧ ಜಿಲ್ಲಾಧಿಕಾರಿ ಹೊರಡಿಸಿದ ಅಧಿಸೂಚನೆಯನ್ನೇ ನೆಪವಾಗಿಟ್ಟು ವರ್ಗಾವಣೆ ಮಾಡಲಾಗಿದೆ ಎಂಬರ್ಥದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿವೆ.
    ಇದೇ ಧಾಟಿಯಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಟ್ವಿಟರ್‌ನಲ್ಲಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ನೈತಿಕ ಪೊಲೀಸ್‌ಗಿರಿ ಮಾಡಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿತ್ತು, ಎಚ್ಚರಿಕೆ ನೀಡಿದ್ದಕ್ಕೆ ಜಿಲ್ಲಾಧಿಕಾರಿ ಸಿಂಧೂ.ಬಿ.ರೂಪೇಶ್ ಅವರಿಗೆ ಕೊಲೆ ಬೆದರಿಕೆ ಒಡ್ಡಲಾಗಿದೆ. ಕೊಲೆ ಬೆದರಿಕೆ ಹಾಕಿದವರನ್ನು ಶಿಕ್ಷಿಸುವ ಬದಲು ಸರ್ಕಾರ ಡಿಸಿಗೆ ವರ್ಗಾವಣೆ ಶಿಕ್ಷೆ ನೀಡಿದೆ, ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಿಗಳಿಗೆ ಧೈರ್ಯ ತುಂಬಬೇಕಿತ್ತು, ಇಲ್ಲಿನ ಬಿಜೆಪಿ ಮುಖಂಡರು ರಾಜಕೀಯ ಮೇಲಾಟ ಮಾಡುತ್ತಿದ್ದಾರೆ. ಉತ್ತರಿಸು ಸರ್ಕಾರ, ನ್ಯಾಯ ಎಲ್ಲಿದೆ’ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
    ಇದಕ್ಕೆ ತಿರುಗೇಟು ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ‘ಖಾದರ್ ಸಚಿವರಾಗಿದ್ದ ಕಾಲದಲ್ಲಿ ದ.ಕ ಜಿಲ್ಲೆಯಲ್ಲಿ ಪೊಲೀಸರಿಗೆ ಬೆದರಿಕೆ, ಹಲ್ಲೆ ಮಾಡುವುದು, ಗೂಂಡಾಗಿರಿ ನಡೆಯುತ್ತಿತ್ತು, ಈಗ ಖಾದರ್ ಕಾಲ ಅಲ್ಲ ಎನ್ನುವುದನ್ನು ಅವರಿಗೆ ನೆನಪಿಸಬೇಕಿದೆ’ ಎಂದಿದ್ದಾರೆ.

    ಸ್ವಾಭಾವಿಕ ವರ್ಗಾವಣೆ: ಸರ್ಕಾರ ಕಾಲಕಾಲಕ್ಕೆ ಮಾಡುವ ಸ್ವಾಭಾವಿಕ ವರ್ಗಾವಣೆಯ ಭಾಗವಾಗಿ ಜಿಲ್ಲಾಧಿಕಾರಿ ವರ್ಗಾವಣೆ ಆಗಿದೆ. ಅದಕ್ಕೆ ಖಾದರ್ ರಾಜಕೀಯ ಲೇಪ ಬೆರೆಸಿದ್ದಾರೆ, ಅವರು ತಮ್ಮ ಮಾತುಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಕೋಟ ಆಗ್ರಹಿಸಿದ್ದಾರೆ. ಇದಕ್ಕೆ ಮತ್ತೆ ಟ್ವಿಟರ್ ಮೂಲಕ ಉತ್ತರಿಸಿರುವ ಖಾದರ್, ‘ಶ್ರೀನಿವಾಸ ಪೂಜಾರಿಯವರೇ, ನಮ್ಮ ಕಾಲದಲ್ಲಿ ಯಾವ ಐಎಎಸ್ ಅಧಿಕಾರಿಯೂ ಕೆಲಸವೇ ಬೇಡ ಅಂತ ರಾಜೀನಾಮೆ ನೀಡಿಲ್ಲ, ನಮ್ಮ ಕಾಲದಲ್ಲಿ ಡಿಸಿಗೆ ಧಮ್ಕಿ ಹಾಕುವ ಧೈರ್ಯ ಯಾವ ದುಷ್ಕರ್ಮಿಯೂ ತೋರಿಲ್ಲ, ಯಾವೊಬ್ಬ ಅಧಿಕಾರಿಯನ್ನೂ ರಾತ್ರೋರಾತ್ರಿ ಎತ್ತಂಗಡಿ ಮಾಡಿಲ್ಲ, ನಿಮ್ಮ ಕಾಲಗುಣ ಬಂದ ಒಂದೇ ವರ್ಷದಲ್ಲಿ ಇಬ್ಬರು ಡಿಸಿಗಳು ಅಪಮಾನದಿಂದ ಹೋಗಿದ್ದಾರೆ. ನಮ್ಮ ಕಾಲದಲ್ಲಿ ನಾನೇ ಅಧಿಕಾರ ಚಲಾಯಿಸಿದ್ದೆ, ಈಗ ಕಾಲ ನಿಮ್ಮದಿದ್ದರೂ ಅಧಿಕಾರ ಮಾತ್ರ ಬೇರೆಯವರ ಕೈಯ್ಯಲಿದೆಯಲ್ವ’ ಎಂದು ತಿರುಗೇಟು ನೀಡಿದ್ದಾರೆ.

    ಹೊಸ ಡಿಸಿ ಇಂದು ಅಧಿಕಾರ ಸ್ವೀಕಾರ ಸಾಧ್ಯತೆ
    ದಕ್ಷಿಣ ಕನ್ನಡ ನೂತನ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಜುಲೈ 30ರಂದು ಆಗಮಿಸಿ ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts