More

    ಸಕ್ರಿಯ ಪ್ರಕರಣ ಉಡುಪಿಯಲ್ಲೇ ಹೆಚ್ಚು

    ಉಡುಪಿ/ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯು ಕೋವಿಡ್-19 ಅತ್ಯಧಿಕ ಪ್ರಕರಣಗಳನ್ನು ದಾಖಲಿಸುತ್ತಿದ್ದಾಗ ಅತಿ ಕಡಿಮೆ ಸೋಂಕಿತರನ್ನು ಹೊಂದಿದ್ದ ಉಡುಪಿ ಜಿಲ್ಲೆಯ ಸೋಂಕಿತರ ಪಟ್ಟಿ ಕೆಲವು ದಿನಗಳಿಂದ ಏರುಗತಿಯಲ್ಲಿ ಸಾಗುತ್ತಿದೆ.

    ಗುರುವಾರ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಇದುವರೆಗೆ ದ.ಕ ಜಿಲ್ಲೆಯಲ್ಲಿ 9707 ಮಂದಿಗೆ ಸೋಂಕು ತಗುಲಿದೆ; ಇವರಲ್ಲಿ 7120 ಮಂದಿ ಸೋಂಕು ಮುಕ್ತರಾಗಿದ್ದು, 2291 ಸಕ್ರಿಯ ಪ್ರಕರಣಗಳಿವೆ. ಉಡುಪಿ ಜಿಲ್ಲೆಯಲ್ಲಿ 9383 ಮಂದಿಗೆ ಸೋಂಕು ತಗುಲಿದೆ; ಇವರಲ್ಲಿ 6492 ಮಂದಿ ಸೋಂಕು ಮುಕ್ತರಾಗಿದ್ದಾರೆ, 2818 ಸಕ್ರಿಯ ಪ್ರಕರಣಗಳಿವೆ.

    ಇದರಂತೆ ಸೋಂಕಿತರ ಸಂಖ್ಯೆಯಲ್ಲಿ ಉಡುಪಿ 300ರಷ್ಟು ಮಾತ್ರವೇ ವ್ಯತ್ಯಾಸ ಹೊಂದಿದೆ. ಆದರೆ ಸಕ್ರಿಯ ಪ್ರಕರಣಗಳು ಉಡುಪಿ ಜಿಲ್ಲೆಯಲ್ಲೇ ಅಧಿಕ. ಮರಣ ಸಂಖ್ಯೆ ದ.ಕ. ಜಿಲ್ಲೆಯಲ್ಲಿ 294 ಆಗಿದ್ದರೆ, ಉಡುಪಿಯಲ್ಲಿ 82 ಮಾತ್ರ ಎನ್ನುವುದು ಸಮಾಧಾನಕರ ಅಂಶ.

    ಗುರುವಾರ ದ.ಕ. ಜಿಲ್ಲೆಯಲ್ಲಿ 177 ಮಂದಿಗೆ ಹಾಗೂ ಉಡುಪಿ ಜಿಲ್ಲೆಯಲ್ಲಿ 349 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಕೆಲದಿನಗಳಿಂದ ಹೆಚ್ಚೆಚ್ಚು ಪ್ರಕರಣಗಳು (ಆ.17-270, ಆ.18-421, ಆ.19-375) ದಾಖಲಾಗುತ್ತಿವೆ. ಇದಕ್ಕೆ ಟೆಸ್ಟಿಂಗ್ ಪ್ರಮಾಣ ಹೆಚ್ಚಿರುವುದು ಕಾರಣ ಎಂದು ಜಿಲ್ಲಾಡಳಿತ ತಿಳಿಸಿದೆ.
    ಉಡುಪಿ ಜಿಲ್ಲೆಯಲ್ಲಿ ಗುರುವಾರ 360 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇದೂವರೆಗೆ 6492 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಗುರುವಾರ 2078 ಮಂದಿಯ ಗಂಟಲ ದ್ರವ ಮಾದರಿಯನ್ನು ಕೋವಿಡ್ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಇನ್ನೂ 1093 ಮಂದಿಯ ವರದಿ ಬರಲು ಬಾಕಿ ಇದೆ.

    ದ.ಕ. 177 ಪಾಸಿಟಿವ್: ಜಿಲ್ಲೆಯಲ್ಲಿ ಗುರುವಾರ 177 ಮಂದಿ ಕರೊನಾ ಪಾಸಿಟಿವ್ ಆಗಿದ್ದರೆ, 187 ಮಂದಿ ಸೋಂಕು ಮುಕ್ತರಾಗಿದ್ದಾರೆ. ಸೋಂಕಿತರಲ್ಲಿ 92 ಮಂದಿ ಲಕ್ಷಣ ಹೊಂದಿದ್ದರೆ 85 ಮಂದಿ ಲಕ್ಷಣ ರಹಿತರಾಗಿದ್ದಾರೆ. ಮಂಗಳೂರಿನ 107 ಮಂದಿ, ಬಂಟ್ವಾಳದ 14, ಪುತ್ತೂರಿನ 16, ಸುಳ್ಯದ 12, ಬೆಳ್ತಂಗಡಿಯ 12, ಇತರ ಜಿಲ್ಲೆಯ 16 ಮಂದಿ ಸೇರಿದ್ದಾರೆ. ಈ ಮೂಲಕ ಜಿಲ್ಲೆಯ ಒಟ್ಟು ಪ್ರಕರಣ 9712ಕ್ಕೇರಿದ್ದರೆ ಸಕ್ರಿಯ ಪ್ರಕರಣಗಳು 2287 ಆಗಿವೆ. ಒಟ್ಟು 7129 ಮಂದಿ ಗುಣಮುಖರಾಗಿರುವುದು ಗಮನಾರ್ಹ ಬೆಳವಣಿಗೆ. ಗುರುವಾರದ ವರದಿಯಂತೆ 6 ಮಂದಿ ಕೋವಿಡ್ ಹಾಗೂ ಇತರ ಕಾರಣಗಳಿಂದ ಮೃತಪಟ್ಟಿದ್ದಾರೆ. ಇದರಲ್ಲಿ ಮಂಗಳೂರಿನ ಮೂವರು, ಬಂಟ್ವಾಳದ ಒಬ್ಬರು ಹಾಗೂ ಹೊರ ಜಿಲ್ಲೆಯ ಇಬ್ಬರು ಸೇರಿದ್ದಾರೆ.

    ಡಾ.ಎಂ.ಎನ್.ರಾಜೇಂದ್ರ ಕುಮಾರ್‌ಗೆ ಪಾಸಿಟಿವ್
    ಮಂಗಳೂರು: ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ಕರೊನಾ ಪಾಸಿಟಿವ್ ಬಂದಿದ್ದು, ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದ ಸಹಕಾರ ಕ್ಷೇತ್ರದ ಎಲ್ಲ ಸರ್ವಧರ್ಮೀಯ ಬಂಧುಗಳ ಪ್ರೀತಿ ವಿಶ್ವಾಸದ ನಾಯಕರಾಗಿರುವ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಶೀಘ್ರ ಗುಣಮುಖರಾಗಲೆಂದು ಸಹಕಾರಿಗಳು ಹಾರೈಸಿದ್ದಾರೆ.

    ಕಾಸರಗೋಡಿನಲ್ಲಿ 92
    ಕಾಸರಗೋಡು: ಜಿಲ್ಲೆಯ 92 ಮಂದಿ ಸೇರಿ ಕೇರಳದಲ್ಲಿ 1,968 ಮಂದಿಗೆ ಕೋವಿಡ್-19 ರೋಗ ಬಾಧಿಸಿದೆ. ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ರೋಗ ಬಾಧಿಸಿದವರಲ್ಲಿ 71 ಮಂದಿ ವಿದೇಶದಿಂದ ಹಾಗೂ 109 ಮಂದಿ ವಿದೇಶದಿಂದ ಆಗಮಿಸಿದವರು. ಕಾಸರಗೋಡು ಜಿಲ್ಲೆಯ 154 ಮಂದಿ ಒಳಗೊಂಡಂತೆ ರೋಗ ಬಾಧಿಸಿ ಚಿಕಿತ್ಸೆಯಲ್ಲಿದ್ದವರಲ್ಲಿ 1,217 ಮಂದಿ ಗುಣಮುಖರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts