More

    ಚೇತರಿಸದ ದ.ಕ.ಹಾಲು ಒಕ್ಕೂಟ

    ಭರತ್ ಶೆಟ್ಟಿಗಾರ್, ಮಂಗಳೂರು

    ಅನ್‌ಲಾಕ್‌ನಲ್ಲಿ ವ್ಯವಹಾರ ನಿಧಾನವಾಗಿ ಚೇತರಿಸುತ್ತಿದ್ದರೂ, ದ.ಕ. ಜಿಲ್ಲಾ ಹಾಲು ಒಕ್ಕೂಟ ನಷ್ಟದಲ್ಲೇ ಮುಂದುವರಿಯುತ್ತಿದೆ. ಸದ್ಯಕ್ಕಂತೂ ಚೇತರಿಕೆಯ ಲಕ್ಷಣವೂ ಕಾಣಿಸುತ್ತಿಲ್ಲ.
    ಹಾಲು, ಮೊಸರು ಮನೆ ಬಳಕೆ ಪ್ರಮಾಣ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಹೋಟೆಲ್, ರೆಸ್ಟೋರೆಂಟ್, ಕ್ಯಾಟರಿಂಗ್, ಹಾಸ್ಟೆಲ್, ಕ್ಯಾಂಟೀನ್ ಮೊದಲಾದ ವಾಣಿಜ್ಯ ಸಂಬಂಧಿತ ಹಾಲು ಬಳಕೆ ಪ್ರಮಾಣದಲ್ಲಿ ಮಾರ್ಚ್ ಬಳಿಕ ಏರಿಕೆ ಕಂಡಿಲ್ಲ. 3ರಿಂದ 4 ಸಾವಿರ ಲೀಟರ್ ಹಾಲು ಸರಬರಾಜು ಆಗುತ್ತಿದ್ದ ಕೆಲವೊಂದು ಹಾಸ್ಟೆಲ್‌ಗಳಿಗೆ ಪ್ರಸ್ತುತ 1 ಸಾವಿರ ಲೀಟರ್‌ನಷ್ಟೂ ಹಾಲು ಪೂರೈಕೆಯಾಗುತ್ತಿಲ್ಲ. ಮಳೆಗಾಲ ಆಗಿರುವುದರಿಂದ ಲಸ್ಸಿ, ಮಜ್ಜಿಗೆಗೂ ಬೇಡಿಕೆಯಿಲ್ಲ. ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟದಲ್ಲೂ ಇಳಿಕೆಯಾಗಿದೆ ಎನ್ನುತ್ತಾರೆ ಒಕ್ಕೂಟದ ಅಧಿಕಾರಿಗಳು.

    ಮಾರಾಟ ಪ್ರಮಾಣ
    ಲಾಕ್‌ಡೌನ್‌ಗೆ ಮುನ್ನ ದಿನಕ್ಕೆ ಸರಾಸರಿ 3.34 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿತ್ತು. ಪ್ರಸ್ತುತ 3.20 ಲಕ್ಷ ಲೀಟರ್ ಮಾರಾಟ ಆಗುತ್ತಿದೆ. ಮೊಸರು ಮಾರಾಟವೂ ದಿನಕ್ಕೆ 64,015 ಕೆ.ಜಿ.ಯಿಂದ 42,336 ಕೆ.ಜಿಗೆ ಇಳಿಕೆಯಾಗಿದೆ. ಕೊಲ್ಲೂರು, ಹಟ್ಟಿಯಂಗಡಿ, ಧರ್ಮಸ್ಥಳ ಮೊದಲಾದ ದೇವಳಗಳಿಗೆ ಗರಿಷ್ಠ ಪ್ರಮಾಣದಲ್ಲಿ ತುಪ್ಪ ಸರಬರಾಜು ಆಗುತ್ತಿತ್ತು. ಮಾರ್ಚ್ ಬಳಿಕ ಸ್ಥಗಿತಗೊಂಡಿದ್ದು, ಬೇಡಿಕೆ ಇನ್ನಷ್ಟೇ ಹೆಚ್ಚಬೇಕಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹಾಲು ಮಾರಾಟ ಶೇ.4 ಮತ್ತು ಮೊಸರು ಶೇ.13ರಷ್ಟು ಕಡಿಮೆಯಾಗಿದೆ.

    ಉತ್ಪಾದನೆ ಗಣನೀಯ ಹೆಚ್ಚಳ
    ಮಾರಾಟದಲ್ಲಿ ನಷ್ಟವಾದರೂ ಉತ್ಪಾದನೆ ಕಡಿಮೆಯಾಗಿಲ್ಲ. ಕರೊನಾದಿಂದ ನಷ್ಟವಾಗಿದೆ ಎಂದು ಹೇಳುತ್ತಿರುವವರ ಮಧ್ಯೆಯೇ ಹೈನುಗಾರಿಕೆ ನಡೆಸುತ್ತಿರುವವರು ಮಾತ್ರ ಸ್ವಲ್ಪ ಲಾಭ ಗಳಿಸಿದ್ದಾರೆ ಎನ್ನಬಹುದು. ಹೊರ ಜಿಲ್ಲೆ, ವಿದೇಶದಲ್ಲಿದ್ದವರು ತಮ್ಮ ಊರಿಗೆ ಬಂದು ಕೃಷಿಯಲ್ಲಿ, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ಡೇರಿಗೆ ಹಾಲು ನೀಡುವ ಪ್ರಮಾಣ ಕಳೆದ ವರ್ಷಕ್ಕಿಂತಲೂ ಹೆಚ್ಚಾಗಿದೆ. ಏಪ್ರಿಲ್ ತಿಂಗಳಲ್ಲಿ ದಿನಕ್ಕೆ ಸರಾಸರಿ 3.93 ಲಕ್ಷ ಲೀ.ಹಾಲು ಸರಬರಾಜು ಆಗುತಿತ್ತು. ಪ್ರಸ್ತುತ ಸೆಪ್ಟೆಂಬರ್‌ನಲ್ಲಿ ಇದು 4.55 ಲಕ್ಷ ಲೀ.ಗೆ ಏರಿದೆ.

    ಪೌಡರ್ ತಯಾರಿಯಲ್ಲೂ ನಷ್ಟ
    ಕರೊನಾ ಸಂದರ್ಭ ದಿನಕ್ಕೆ ಅಂದಾಜು 1.20 ಲಕ್ಷದ ಲೀ.ವರೆಗೆ ಹಾಲು ಉಳಿಕೆಯಾಗುತ್ತಿತ್ತು. ಇದನ್ನು ಚಾಮರಾಜನಗರ, ಧಾರವಾಡ ಜಿಲ್ಲೆಗಳಿಗೆ ರವಾನಿಸಿ ಹಾಲಿನ ಪೌಡರ್ ಆಗಿ ಪರಿವರ್ತಿಸಲಾಗುತಿತ್ತು. ಮಾರ್ಚ್‌ಗೆ ಮುನ್ನ ಪೌಡರ್‌ಗೂ ಬೇಡಿಕೆಯಿತ್ತು. ಆದರೆ ಪ್ರಸ್ತುತ ಎಲ್ಲ ಒಕ್ಕೂಟಗಳು ಪೌಡರ್ ಉತ್ಪಾದನೆಯಲ್ಲಿ ತೊಡಗಿ ದರ ಕಡಿಮೆಯಾಗಿ, ಬೇಡಿಕೆ ಇಲ್ಲ. ಶಾಲೆಗಳಿಗೆ ಸರಬರಾಜು ನಿಂತಿದೆ. ಐಸ್‌ಕ್ರೀಂ ಉದ್ದಿಮೆಗಳಿಂದ ಬೇಡಿಕೆ ಬರುತ್ತಿಲ್ಲ. ಪೌಡರ್ ತಯಾರಿಸಲು ಒಂದು ಲೀಟರ್ ಹಾಲಿನ ಮೇಲೆ ಹೆಚ್ಚವರಿ 11 ರೂ. ವೆಚ್ಚವಾಗುತ್ತದೆ. 6 ತಿಂಗಳೊಳಗೆ ಉಪಯೋಗವಾಗದಿದ್ದರೆ, ನಷ್ಟ ಖಚಿತ.

    ಹಾಲು ಉತ್ಪಾದನೆ ಪ್ರಮಾಣ
                2020                      2019
    ಮೇ       4.42 ಲಕ್ಷ ಲೀ .           4.52 ಲಕ್ಷ ಲೀ.
    ಜೂನ್    4.95 ಲಕ್ಷ ಲೀ.            4.70 ಲಕ್ಷ ಲೀ.
    ಜುಲೈ    4.78 ಲಕ್ಷ ಲೀ.            4.61 ಲಕ್ಷ ಲೀ.
    ಆಗಸ್ಟ್   4.55 ಲಕ್ಷ ಲೀ.           4.25 ಲಕ್ಷ ಲೀ.

    ಹಾಲಿನ ಸಂಗ್ರಹ ವಿಭಾಗದಲ್ಲಿ ದ.ಕ.ಒಕ್ಕೂಟ ಕರೊನಾ ಮಧ್ಯೆಯೂ ಕಳೆದ ವರ್ಷಕ್ಕಿಂತ ರೈತರಿಗೆ ಉತ್ತಮ ರೀತಿಯಲ್ಲಿ ನೆರವಾಗಿದೆ. ಪ್ರತಿನಿತ್ಯ ಸರಾಸರಿ 4 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಮಾರುಕಟ್ಟೆ ವಿಚಾರವಾಗಿ ಕೆಎಂಎಫ್ ನಷ್ಟ ಅನುಭವಿಸುತ್ತಿದ್ದು, ಹಾಲು, ಮೊಸರು, ತುಪ್ಪ ಮನೆ ಬಳಕೆಗೆ ಸೀಮಿತವಾಗಿದೆ. ವಾಣಿಜ್ಯ ಬಳಕೆ ಹೆಚ್ಚಾದರೆ ಚೇತರಿಸಿಕೊಳ್ಳಬಹುದು.
    ರವಿರಾಜ್ ಹೆಗ್ಡೆ, ದ.ಕ. ಹಾಲು ಒಕ್ಕೂಟ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts