More

    ಸೋಂಕು ತಡೆಗೆ ಕಠಿಣ ಹೆಜ್ಜೆ

    ಮಂಗಳೂರು: ಕರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ದ.ಕ.ಜಿಲ್ಲಾಡಳಿತ ಏ.14ರವರೆಗೆ ವಿಧಿಸಿರುವ ಸೆ.144(3)ಕ್ಕೆ ಪೂರಕವಾಗಿ ಹೆಚ್ಚುವರಿ ನಿರ್ಬಂಧ ಹೇರಿದೆ.

    ನಗರದ ಸೆಂಟ್ರಲ್ ಮಾರ್ಕೆಟ್‌ನ ಎಲ್ಲ ಹಣ್ಣು ಮತ್ತು ತರಕಾರಿ ಸಗಟು ವ್ಯಾಪಾರಿಗಳನ್ನು ಬೈಕಂಪಾಡಿಯ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಲಾಗಿದೆ. ಈ ಪ್ರದೇಶದಲ್ಲಿ ಚಿಲ್ಲರೆ ವ್ಯಾಪಾರಿಗಳನ್ನು ಹೊರತುಪಡಿಸಿ ಸಾರ್ವಜನಿಕ ಪ್ರವೇಶ ನಿರ್ಬಂಧಿಸಿದೆ. ಸಾರ್ವಜನಿಕರು ತಮ್ಮ ವ್ಯಾಪ್ತಿಯ ಅಂಗಡಿಗಳಲ್ಲಿ ತರಕಾರಿ-ಹಣ್ಣುಗಳನ್ನು ಖರೀದಿಸಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

    ಬಂದರಿನಲ್ಲಿ ದಿನಸಿ ವಸ್ತುಗಳ ಸಗಟು ವ್ಯಾಪಾರ ಎಂದಿನಂತೆ ಮುಂದುವರಿಯುತ್ತದೆ. ಸಗಟು ವ್ಯಾಪಾರಗಾರರು ರಿಟೇಲ್ ವ್ಯಾಪಾರಸ್ಥರಿಗೆ ಮಾತ್ರವೇ ಮಾರಾಟ ಮಾಡಬೇಕು. ಸಾರ್ವಜನಿಕರಿಗೆ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
    ನಗರದ ಬಂದರು ಪ್ರದೇಶದಲ್ಲಿ ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಸಗಟು ವಾಹನಗಳ ಸಾಮಾನುಗಳನ್ನು ಇಳಿಸಲು ಅವಕಾಶವಿದೆ. ಮಧ್ಯಾಹ್ನ 1ರಿಂದ ಸಂಜೆ 7ರವರೆಗೆ ಸಗಟು ಮಾರಾಟಗಾರರು ಚಿಲ್ಲರೆ ವ್ಯಾಪಾರಿಗಳಿಗೆ ಮಾರಾಟ ಮಾಡಲು ಅವಕಾಶವಿದೆ ಎಂದು ತಿಳಿಸಿದ್ದಾರೆ.

    ಗ್ರಾಮೀಣ ಪ್ರದೇಶಗಳಲ್ಲಿ ದ್ವಿಚಕ್ರ ವಾಹನಗಳು ಮತ್ತು ಆಹಾರ ಪದಾರ್ಥಗಳನ್ನು ಸಾಗಾಟ ಮಾಡುವ ವಾಣಿಜ್ಯ ಬಳಕೆಯ ತ್ರಿಚಕ್ರ ಹಾಗೂ ಚತುಷ್ಚಕ್ರಗಳ ಲಘು ಸಾರಿಗೆ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶವಿದೆ. ಗುರುತನ ಚೀಟಿ ಹೊಂದಿದ ವೈದ್ಯಕೀಯ ಸಿಬ್ಬಂದಿ ಮತ್ತು ಡಿಐಪಿಆರ್ ಪಾಸ್ ಹೊಂದಿರುವ ಮಾಧ್ಯಮದವರಿಗೆ ಸಂಚಾರಕ್ಕೆ ಅವಕಾಶವಿದೆ. ವೈದ್ಯಕೀಯ ಸೇವೆಗಾಗಿ ಹಾಗೂ ಆಂಬುಲೆನ್ಸ್ ಬಳಕೆಗಾಗಿ ಎಲ್ಲಾ ಸಾರ್ವಜನಿಕರು 108/ 1077 ಟೋಲ್ ಫ್ರೀ ನಂಬರ್‌ಗೆ ಕರೆ ಮಾಡಿ ಸೌಲಭ್ಯ ಪಡೆಯಬಹುದು. 108 ಆಂಬುಲೆನ್ಸ್ ಸೇವೆ ಲಭ್ಯವಿಲ್ಲದಿದ್ದಲ್ಲಿ ಮಾತ್ರವೇ ಸಾರ್ವಜನಿಕರು 1077 ಟೋಲ್ ಫ್ರೀ ನಂಬರ್‌ಗೆ ಕರೆ ಮಾಡಿದ್ದಲ್ಲಿ ಖಾಸಗಿ ವಾಹನಗಳಿಗೆ ವೈದ್ಯಕೀಯ ತುರ್ತು ಪಾಸ್‌ಗಳನ್ನು ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಆದೇಶಲ್ಲಿ ತಿಳಿಸಿದ್ದಾರೆ.

    ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ದ್ವಿಚಕ್ರ, ತ್ರಿಚಕ್ರ ಹಾಗೂ ಚತುಶ್ಚಕ್ರ ವಾಹನಗಳು ರಸ್ತೆಗೆ ಇಳಿಯುವುದನ್ನು ನಿರ್ಬಂಧಿಸಲಾಗಿದೆ. ಅವಶ್ಯ ಸಾಮಗ್ರಿಗಳನ್ನು ಮನೆಯ ಹತ್ತಿರದಲ್ಲೇ ಇರುವ ಅಂಗಡಿಗಳಿಂದ ಖರೀದಿಸಬೇಕು. ವೈದ್ಯರು, ದಾದಿಯರು, ಮಾಧ್ಯಮ ಪ್ರತಿನಿಧಿಗಳು ತಮ್ಮ ಸಂಸ್ಥೆಯ ಗುರುತಿನ ಚೀಟಿ ತೋರಿಸಿ ವಾಹನಗಳಲ್ಲಿ ಸಂಚಾರ ಮಾಡಬಹುದು. ತುರ್ತು ಆರೋಗ್ಯ ಸೇವೆಗೆ 108 ಅಥವಾ 1077 ಗೆ ಸಂಪರ್ಕಿಸಬಹುದು.
    ಡಾ.ಪಿ.ಎಸ್.ಹರ್ಷ
    ನಗರ ಪೊಲೀಸ್ ಆಯುಕ್ತ

    ಪೊಲೀಸ್ ಅಧೀಕ್ಷಕರ ವ್ಯಾಪ್ತಿ ಗ್ರಾಮಾಂತರದಲ್ಲಿ ಬೆಳಗ್ಗೆಯಿಂದಲೇ ದ್ವಿಚಕ್ರ, ತ್ರಿಚಕ್ರ ವಾಹನ ಬಿಟ್ಟು ಉಳಿದಂತೆ ಯಾವುದೇ ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ. ಗ್ರಾಮೀಣ ಭಾಗದಿಂದ ಜೀಪು ಮತ್ತಿತರ ವಾಣಿಜ್ಯ ಉದ್ದೇಶದ ವಾಹನಗಳಿಗೆ ಪ್ರವೇಶ ಕಲ್ಪಿಸಲಾಗಿದೆ. ಆದರೆ ಆ ವಾಹನದಲ್ಲಿ ಇಬ್ಬರಿಗಿಂತ ಹೆಚ್ಚಿನ ಮಂದಿ ಸಂಚರಿಸುವಂತಿಲ್ಲ. ತುರ್ತು ಆರೋಗ್ಯ ಸೇವೆಗಾಗಿ 108 ಅಥವಾ 1077ಗೆ ಕರೆ ಮಾಡಬೇಕು. ಡಯಾಲಿಸಿಸ್ ಮತ್ತಿತರ ಚಿಕಿತ್ಸೆಗೆ ಖಾಸಗಿ ವಾಹನದಲ್ಲಿ ಬರಬೇಕಾದರೆ 1077ಗೆ ಕರೆ ಮಾಡಿ ಖಾಸಗಿ ವಾಹನಕ್ಕೆ ಪಾಸ್ ಮಾಡಿಸಿಕೊಳ್ಳಬೇಕು.
    ಲಕ್ಷ್ಮೀ ಪ್ರಸಾದ್
    ಜಿಲ್ಲಾ ಪೊಲೀಸ್ ಅಧೀಕ್ಷಕ, ದ.ಕ.

    ಕೇರಳ ವಾಹನಗಳಿಗೆ ನೋ ಎಂಟ್ರಿ
    ಮಂಗಳೂರು: ಕೇಂದ್ರ ಸರ್ಕಾರ ರೋಗಿಗಳ ಅಂತಾರಾಜ್ಯ ಓಡಾಟಕ್ಕೆ ಅನುಕೂಲವಾಗುವಂತೆ ಮುಚ್ಚಿರುವ ಹೆದ್ದಾರಿಗಳನ್ನು ತೆರೆಯುವ ಬಗ್ಗೆ ಪರಿಶೀಲಿಸಬೇಕು ಎಂದು ಕೇರಳ ಹೈಕೋರ್ಟ್ ಸೂಚನೆ ನೀಡಿರುವ ನಡುವೆಯೇ ದ.ಕ ಜಿಲ್ಲಾಡಳಿತ ಹಾಗೂ ಮಂಗಳೂರು ನಗರಾಡಳಿತ ಮತ್ತಷ್ಟು ಬಿಗು ಕ್ರಮಕ್ಕೆ ಮುಂದಾಗಿವೆ.
    ಕೇರಳ ರಾಜ್ಯದಿಂದ ಬರುವ ಯಾವುದೇ ರೋಗಿಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಬಾರದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಆದೇಶ ಹೊರಡಿಸಿದ್ದಾರೆ. ಕೇರಳ ರಾಜ್ಯ ಅದರಲ್ಲೂ ಕಾಸರಗೋಡು ಜಿಲ್ಲೆಯಲ್ಲಿ ಕೊವಿಡ್ ಪಾಸಿಟಿವ್ ಪ್ರಕರಣಗಳು ವ್ಯಾಪಕವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಆದೇಶ ಮಾಡಲಾಗಿದೆ.
    ಎಜೆ ವೈದ್ಯಕೀಯ ಕಾಲೇಜು, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು, ಕೆಎಂಸಿ ಅತ್ತಾವರ, ಯೇನೆಪೊಯ ದೇರಳಕಟ್ಟೆ, ಶ್ರೀನಿವಾಸ ಕಾಲೇಜು, ಕೆವಿಜಿ ವೈದ್ಯಕೀಯ ಕಾಲೇಜು ಸುಳ್ಯ ಹಾಗೂ ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜು ಮತ್ತು ಕಣಚೂರು ವೈದ್ಯಕೀಯ ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ.

    ನಗರಕ್ಕೆ ಕೇರಳದಿಂದ ಸಂಚಾರ ನಿಷೇಧ
    ಕೊವಿಡ್ ಹೊಂದಿರುವ ಅಥವಾ ಅಂತಹ ರೋಗಿಗಳೊಂದಿಗೆ ಸಂಪರ್ಕದಲ್ಲಿರುವವರು ನಗರದೊಳಗೆ ಆಗಮಿಸಿದರೆ ರೋಗ ತೀವ್ರವಾಗಿ ಹಬ್ಬುವ ಸಾಧ್ಯತೆ ಇದೆ ಎಂಬ ಕಾರಣ ನೀಡಿ ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಗುರುವಾರ ಕೆಎಂಸಿ ಕಾಯ್ದೆ ಸೆಕ್ಷನ್ 64(1) ಹಾಗೂ 58(2)ರ ಅನ್ವಯ ಕೇರಳದಿಂದ ಯಾವುದೇ ವಾಹನ ಮಂಗಳೂರು ನಗರದೊಳಗೆ ಪ್ರವೇಶಿಸದಂತೆ ನಿರ್ಬಂಧಿಸಿ ಆದೇಶಿಸಿದ್ದಾರೆ. ಈ ಆದೇಶವನ್ನು ಪಾಲಿಸುವುದಕ್ಕಾಗಿ ಪಾಲಿಕೆಯ ಆರೋಗ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಯೂ ಕಾರ್ಯೋನ್ಮುಖರಾಗಬೇಕು ಹಾಗೂ ಅದಕ್ಕೆ ಅಗತ್ಯವಿದ್ದರೆ ಪೊಲೀಸ್ ನೆರವು ಪಡೆಯಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ರಾಜ್ಯ ಸರ್ಕಾರದ ಆದೇಶ
    ಇನ್ನೊಂದೆಡೆ ಈಗಾಗಲೇ ರಾಜ್ಯ ಸರ್ಕಾರವೂ ಏ.1ರಿಂದ 14ರ ವರೆಗೆ ಅನ್ವಯವಾಗುವಂತೆ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ 1897, ವಿಪತ್ತು ನಿರ್ವಹಣಾ ಕಾಯ್ದೆ 2005ರಲ್ಲಿ ಪ್ರದತ್ತವಾದ ಅಧಿಕಾರವನ್ನು ಬಳಸಿಕೊಂಡು ಹೊರರಾಜ್ಯಗಳಿಂದ ರಾಜ್ಯಕ್ಕೆ ರೋಗಿಗಳನ್ನು ಕರೆ ತರುವುದನ್ನು ನಿಷೇಧಿಸಿದೆ.

    ದ.ಕ ಜಿಲ್ಲೆಯಲ್ಲಿ ಕರೊನಾ ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡಲು ಎಲ್ಲ ರೀತಿಯ ಕ್ರಮ ವಹಿಸಲಾಗಿದೆ. ಆದರೆ ಸೀಮಿತ ಮಂದಿಗೆ ಮಾತ್ರ ಚಿಕಿತ್ಸೆ ನೀಡಲು ವ್ಯವಸ್ಥೆ ಇದೆ. ಕೇರಳದಿಂದ ಅಧಿಕ ಸಂಖ್ಯೆಯಲ್ಲಿ ರೋಗಿಗಳು ದಾಖಲಾದರೆ ಜಿಲ್ಲೆಯಲ್ಲಿ ಪರಿಸ್ಥಿತಿ ಕೈ ಮೀರಬಹುದು. ಈ ನಿಟ್ಟಿನಲ್ಲಿ ಕೇರಳ ಗಡಿ ನಿರ್ಬಂಧ ಅನಿವಾರ್ಯ.
    – ಡಾ.ವೈ.ಭರತ್ ಶೆಟ್ಟಿ
    ಶಾಸಕ, ವೈದ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts