More

    ದ.ಕ.ದಲ್ಲಿ ಸೋಂಕು ಪ್ರಕರಣಗಳಿಲ್ಲ

    ಮಂಗಳೂರು: ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದರೂ, ಕಾಸರಗೋಡಲ್ಲಿ ಪ್ರತೀ ದಿನ ಎಂಬಂತೆ ಪತ್ತೆಯಾಗುತ್ತಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
    ವಿಮಾನ ನಿಲ್ದಾಣ, ರೈಲು ನಿಲ್ದಾಣದಲ್ಲಿ ತಪಾಸಣೆ ನಡೆಸಲಾಗುತ್ತಿದ್ದು ಹೆಚ್ಚಿನ ಮುಂಜಾಗರೂಕತಾ ಕ್ರಮ ವಹಿಸಲಾಗುತ್ತಿದೆ. ಶನಿವಾರ 541 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದ್ದು, 20 ಮಂದಿಯನ್ನು ಇಎಸ್‌ಐ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ಗೆ ದಾಖಲಿಸಲಾಗಿದೆ. ವೆನ್ಲಾಕ್‌ನ ನಿಗಾ ಘಟಕ್ಕೆ ಯಾರೂ ದಾಖಲಾಗಿಲ್ಲ. 7 ಮಂದಿಯ ಗಂಟಲಿನ ದ್ರವವನ್ನು ಹಾಸನ ಲ್ಯಾಬ್‌ಗೆ ಪರೀಕ್ಷೆಗೆ ಕಳುಹಿಸಲಾಗಿದ್ದು, ಶನಿವಾರ ಬಂದಿರುವ ಎಲ್ಲ 9 ರಿಪೋರ್ಟ್‌ಗಳು ನೆಗೆಟಿವ್ ಬಂದಿದೆ. ಜ್ವರ, ಶೀತ, ಕೆಮ್ಮು ಮೊದಲಾದ ಕಾರಣಗಳಿಗೆ 14 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.

    10 ಮಂದಿ ಹೋಮ್ ಕ್ವಾರಂಟೈನ್‌ನಲ್ಲಿ 28 ದಿನದ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ಈವರೆಗೆ ಒಟ್ಟು 37,494 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ. ಆಶಾ ಕಾರ್ಯಕರ್ತೆಯರು ಜಿಲ್ಲೆಯ 6.23 ಲಕ್ಷ ಜನರಲ್ಲಿ ಕರೊನಾ ಜಾಗೃತಿ ಮೂಡಿಸಿದ್ದಾರೆ ಎಂದು ಜಿಲ್ಲಾಧಿಕಾರಿಯವರ ಕರೊನಾ ಬುಲೆಟಿನ್ ತಿಳಿಸಿದೆ.

    ಆತಂಕ ಮೂಡಿಸಿದ ನೈಜೀರಿಯಾ ಪ್ರಜೆ
    ನಗರದ ನವಭಾರತ ಸರ್ಕಲ್‌ನಲ್ಲಿ ಶನಿವಾರ ಮಧ್ಯಾಹ್ನ ವೇಳೆ ತಿರುಗಾಡುತ್ತಿದ್ದ ನೈಜೀರಿಯಾ ಪ್ರಜೆಯೊಬ್ಬ ಸಾರ್ವಜನಿಕರನ್ನು ಆತಂಕಕ್ಕೀಡಾಗುವಂತೆ ಮಾಡಿದ್ದಾನೆ. ಆತನನ್ನು ಕಂಡ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ ಬಳಿಕ ಆಂಬುಲೆನ್ಸ್‌ಗೆ ಕರೆ ಮಾಡಲಾಯಿತು. ತಕ್ಷಣ ಸ್ಥಳಕ್ಕೆ ಬಾರದಿರುವುದು ಸ್ಥಳೀಯರನ್ನು ಮತ್ತಷ್ಟು ಕುಪಿತಗೊಳ್ಳುವಂತೆ ಮಾಡಿತು. ಅರ್ಧ ಗಂಟೆ ಬಿಟ್ಟು ಬಂದ ಆಂಬುಲೆನ್ಸ್ ಸಿಬ್ಬಂದಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ, ತಪಾಸಣೆಗೆ ಒಳಪಡಿಸಿದ್ದಾರೆ.

    ಕರೊನಾ ಪಾಸಿಟಿವ್ ವ್ಯಕ್ತಿಯಿಂದ ರಕ್ತದಾನ?
    ಕಾಸರಗೋಡಿನ ಕರೊನಾ ಪಾಸಿಟಿವ್ ವ್ಯಕಿಯೊಬ್ಬ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ರಕ್ತದಾನ ಮಾಡಿದ್ದಾನೆ ಎನ್ನುವ ಕುರಿತು ಕೇರಳದ ಮಾಧ್ಯಮಗಳಲ್ಲಿ ವರದಿಯಾಗಿದೆ. ಕಾಸರಗೋಡಿನ ಆರೋಗ್ಯಾಧಿಕಾರಿಗೆ ಈ ವಿಚಾರವನ್ನು ಆತ ತಿಳಿಸಿದ್ದಾಗಿ ವರದಿಯಲ್ಲಿ ತಿಳಿಸಲಾಗಿದೆ. ಆದರೆ ಅಂತಹ ಯಾವುದೇ ಪ್ರಕರಣ ನಡೆದಿಲ್ಲ ಎಂದು ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ತಿಳಿಸಿದ್ದಾರೆ.

    ಆದೇಶ ಉಲ್ಲಂಘಿಸಿ ಕ್ರಿಕೆಟ್: ನಗರದ ಉರ್ವ ಮಾರ್ಕೆಟ್ ಮೈದಾನದಲ್ಲಿ ಶನಿವಾರ ಸಾರ್ವಜನಿಕ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಜಮಾಯಿಸಿರುವ ಬಗ್ಗೆ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ತೆರಳಿದ ಮನಪಾ ಅಧಿಕಾರಿಗಳು ಪಂದ್ಯಾಟ ನಿಲ್ಲಿಸಿ ಆಯೋಜಕರಿಗೆ ಎಚ್ಚರಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts