More

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 14ನೇ ಸಾವು

    ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕರೊನಾಗೆ ಉಳ್ಳಾಲ ನಿವಾಸಿ 60 ವರ್ಷದ ವೃದ್ಧೆ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ ಜಿಲ್ಲೆಯಲ್ಲಿ 14ಕ್ಕೆ ಏರಿಕೆಯಾಗಿದೆ.

    ಅಧಿಕ ರಕ್ತದೊತ್ತಡ, ಡಯಾಬಿಟಿಸ್ ಹಾಗೂ ತೀವ್ರ ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರನ್ನು ಭಾನುವಾರ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಸೋಮವಾರ ಬೆಳಗ್ಗೆ ಮೃತರಾಗಿದ್ದಾರೆ. ಅವರ ಗಂಟಲು ದ್ರವ ಮಾದರಿ ಪರೀಕ್ಷೆಯಲ್ಲಿ ಕರೊನಾ ದೃಢಪಟ್ಟಿದೆ.
    ಸೋಮವಾರ ಪತ್ತೆಯಾಗಿರುವ ಪ್ರಕರಣಗಳೂ ಸೇರಿ ಉಳ್ಳಾಲದಲ್ಲಿ 46 ಮಂದಿಯಲ್ಲಿ ಸೋಂಕು ಕಂಡು ಬಂದಿದ್ದು, ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಸೋಮವಾರ 9 ಐಎಲ್‌ಐ, 6 ತೀವ್ರ ಉಸಿರಾಟ ತೊಂದರೆ ಹಾಗೂ 10 ಮಂದಿ ಪ್ರಾಥಮಿಕ-ದ್ವಿತೀಯ ಸಂಪರ್ಕ ಸೇರಿದಂತೆ 32 ಮಂದಿಗೆ ಕರೊನಾ ಸೋಂಕು ತಗಲಿದೆ. ಓರ್ವ ವ್ಯಕ್ತಿ ಅಂತಾರಾಷ್ಟ್ರೀಯ ಪ್ರಯಾಣಿಕರಾಗಿದ್ದು, ಐವರ ಸಂಪರ್ಕವನ್ನು ಇನ್ನಷ್ಟೇ ದೃಢಪಡಿಸಬೇಕಿದೆ.
    ಸೋಮವಾರ 444 ಮಂದಿಯನ್ನು ಸ್ಕ್ರೀನಿಂಗ್ ಮಾಡಿದ್ದು, 148 ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದೆ. ಸಿಕ್ಕಿರುವ 458 ಸ್ಯಾಂಪಲ್ ವರದಿಯಲ್ಲಿ 426 ನೆಗೆಟಿವ್ ಹಾಗೂ 32 ಪಾಸಿಟಿವ್. 29 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ನಿಗಾ ಇರಿಸಲಾಗಿದೆ.
    ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 695ಕ್ಕೆ ಏರಿಕೆಯಾಗಿದ್ದು, ನಾಲ್ವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಐಸಿಯುನಲ್ಲಿ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದು ಸ್ಥಿತಿ ಗಂಭೀರವಿದೆ. ಒಟ್ಟು ಇದುವರೆಗೆ 426 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

    ಮಹಿಳಾ ಉದ್ಯಮಿಗೆ ಸೋಂಕು: ಮಂಗಳೂರಿನ ಖ್ಯಾತ ಮಹಿಳಾ ಉದ್ಯಮಿಯೊಬ್ಬರು ಹಾಗೂ ಅವರ ಪತಿ ಹಾಗೂ ಮಾವನಿಗೆ ಕರೊನಾ ಪಾಸಿಟಿವ್ ಆಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ನಾವು ಮೂವರಿಗೆ ಕರೊನಾ ಪಾಸಿಟಿವ್ ಆಗಿದೆ, ಆದರೆ ಎಲ್ಲಿಂದ ಸಂಪರ್ಕ ಉಂಟಾಗಿದೆ ಎನ್ನುವುದು ತಿಳಿದಿಲ್ಲ, ಸಮುದಾಯಕ್ಕೆ ಹಬ್ಬಿರುವ ಸಾಧ್ಯತೆ ಇದ್ದು ಎಚ್ಚರಿಕೆಯಿಂದ ಎಲ್ಲರೂ ಇರಿ, ನಾವೆಲ್ಲರೂ ಸೋಂಕಿಗಳೊಗಾದರೂ ಯಾವುದೇ ರೋಗಲಕ್ಷಣಗಳಿಲ್ಲ ಎಂದು ತಿಳಿಸಿದ್ದಾರೆ.

    ಲೇಡಿಗೋಷನ್ ಆಸ್ಪತ್ರೆ ಬಂದ್
    ದ.ಕ. ಜಿಲ್ಲಾ ಲೇಡಿಗೋಷನ್ ಹೆರಿಗೆ ಆಸ್ಪತ್ರೆಯಲ್ಲಿ ಜುಲೈ 6ರವರೆಗೆ ಹೊರ ರೋಗಿ ಮತ್ತು ಒಳರೋಗಿ ಸೇವೆ ಸ್ಥಗಿತಗೊಳಿಸಲಾಗಿದೆ. ಆಸ್ಪತ್ರೆಯ ಹೆಚ್ಚಿನ ವೈದ್ಯರು ಮತ್ತು ಸಿಬ್ಬಂದಿ ಕ್ವಾರಂಟೈನ್‌ನಲ್ಲಿರುವ ಹಾಗೂ ಆಸ್ಪತ್ರೆಯ ಎಲ್ಲ ವಿಭಾಗ ಸ್ಯಾನಿಟೈಜ್ ಮತ್ತು ಫ್ಯೂಮಿಗೇಷನ್ ಮಾಡಲಿರುವ ಹಿನ್ನೆಲೆ ಸ್ಥಗಿತಗೊಳಿಸಿಲಾಗಿದೆ ಎಂದು ಲೇಡಿಗೋಷನ್ ಆಸ್ಪತ್ರೆ ಅಧೀಕ್ಷಕಿ ತಿಳಿಸಿದ್ದಾರೆ.

    ಕೈದಿಗೆ ಸೋಂಕು
    ಮಂಗಳೂರು ನಗರದ ಸಬ್ ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿಗೆ ಸೋಂಕು ತಗುಲಿದೆ. ಮನೋ ರೋಗದಿಂದ ಬಳಲುತ್ತಿದ್ದ ಆತನಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೋವಿಡ್ ಚಿಕಿತ್ಸೆ ನೀಡುತ್ತಿದ್ದ ಆರೋಗ್ಯ ಸಿಬ್ಬಂದಿಯಿಂದ ಸೋಂಕು ತಗಲಿರುವ ಶಂಕೆ ವ್ಯಕ್ತವಾಗಿದೆ.

    ತಪ್ಪಿಸಿಕೊಳ್ಳಲು ಯತ್ನ
    ಪಾಸಿಟಿವ್ ಬಂದಿದ್ದ ನಗರದ ಜಿಎಚ್.ಎಸ್ ರಸ್ತೆಯ ನಿರ್ಮಾಣ ಹಂತದ ಕಟ್ಟಡ ಕಾರ್ಮಿಕನನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಉತ್ತರಾಖಂಡದ ಕಾರ್ಮಿಕನನ್ನು ಬಂದರು ಪೊಲೀಸರು ಕೌನ್ಸೆಲಿಂಗ್ ಮಾಡಿ ಮನವೊಲಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಉಳ್ಳಾಲ ಪೊಲೀಸ್ ಠಾಣೆಯಲ್ಲಿ 10 ಮಂದಿಗೆ ಕರೊನಾ ಪಾಸಿಟಿವ್!
    ಉಳ್ಳಾಲ: ಕೆಲದಿನಗಳ ಹಿಂದೆಯೇ ನಾಲ್ವರು ಸಿಬ್ಬಂದಿಗೆ ಕರೊನಾ ದೃಢಪಟ್ಟಿದ್ದ ಮಂಗಳೂರು ಹೊರವಲಯದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮತ್ತೆ ಆರು ಸಿಬ್ಬಂದಿಗೆ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
    ಕೇರಳ ಗಡಿ ತಲಪಾಡಿಯಲ್ಲಿ ಕಾರ್ಯನಿರ್ವಹಿಸಿದ್ದ ಎಸ್‌ಐ, ಎಎಸ್‌ಐ, ಇಬ್ಬರು ಪಿಸಿಗಳಿಗೆ ಕಳೆದ ವಾರ ಸೋಂಕು ಖಚಿತವಾಗಿತ್ತು. ಅವರನ್ನು ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದ ಬಳಿಕ ಠಾಣೆ ಎಲ್ಲ ಪೊಲೀಸರ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಲಾಗಿತ್ತು. ಈ ಪೈಕಿ 5 ಪೊಲೀಸ್ ಕಾನ್ಸ್‌ಟೆಬಲ್, ಓರ್ವ ಹೋಂ ಗಾರ್ಡ್‌ಗೆ ಕೋವಿಡ್ ಬಾಧಿಸಿರುವುದು ಸೋಮವಾರ ತಿಳಿದುಬಂದಿದೆ.
    ಈ ನಡುವೆ, ತೊಕ್ಕೊಟ್ಟಿನಲ್ಲಿ ಮಾಂಸದಂಗಡಿ ವ್ಯಾಪಾರಿಯ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾದ ಆರು ಆರೋಪಿಗಳನ್ನು ಉಳ್ಳಾಲ ಠಾಣೆಯಲ್ಲಿರಿಸಿದ್ದು, ಅವರಲ್ಲಿ ಟಿ.ಸಿ.ರೋಡ್ ನಿವಾಸಿಗಳಾದ ಇಬ್ಬರಿಗೆ ಸೋಂಕು ಇರುವುದು ಖಚಿತವಾಗಿದೆ.
    ಇದರೊಂದಿಗೆ ಠಾಣೆಯನ್ನು ಕೇಂದ್ರೀಕರಿಸಿ 12 ಮಂದಿಗೆ ಸೋಂಕು ಹರಡಿದಂತಾಗಿದೆ. ಠಾಣೆಯನ್ನು ಸೀಲ್‌ಡೌನ್ ಮಾಡಲಾಗಿದ್ದು, ತಾತ್ಕಾಲಿಕವಾಗಿ ಬೇರೆ ಕಟ್ಟಡದಲ್ಲಿ ವ್ಯವಸ್ಥೆ ಮಾಡಲಾಗಿದೆ.

    ಮೀನು ಮಾರುತ್ತಿದ್ದವನಿಗೆ ಪಾಸಿಟಿವ್
    ಬೆಳ್ತಂಗಡಿ: ಮಡಂತ್ಯಾರು ಕಾನ್ವೆಂಟ್ ರಸ್ತೆಯ ಸಂಬಂಧಿಕರ ಮನೆಯಲ್ಲಿ ವಾಸವಿದ್ದ 30 ವರ್ಷ ಪ್ರಾಯದ ಮೂಲತಃ ಬಿ.ಸಿ.ರೋಡಿನ ಯುವಕನಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದೆ. ಅವರು ತಿಂಗಳ ಹಿಂದೆ ಗಲ್ಫ್‌ನಿಂದ ಮರಳಿ ಕ್ವಾರಂಟೈನ್ ಆಗಿದ್ದು, ಮೀನು ಮಾರಾಟ ಆರಂಭಿಸಿದ್ದರು.

    ಪುತ್ತೂರಿನಲ್ಲಿ ಮೂವರಲ್ಲಿ ದೃಢ
    ಪುತ್ತೂರು: ತಾಲೂಕಿನಲ್ಲಿ ಮತ್ತೆ ಮೂವರಲ್ಲಿ ಸೋಂಕು ದೃಢಪಟ್ಟಿದ್ದು, ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಇವರಲ್ಲಿ ಐವರು ಗುಣಮುಖರಾಗಿದ್ದಾರೆ.
    ನಗರಸಭೆಯ ಕಸಸಂಗ್ರಹ ಲಾರಿಯ ಚಾಲಕ ಮತ್ತು ಜತೆಗಿದ್ದ ಇಬ್ಬರು ಪೌರಕಾರ್ಮಿಕರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರಲ್ಲಿ ಚಾಲಕ (ಗುತ್ತಿಗೆ ನೌಕರ)ನಾಗಿರುವ ಬೆಟ್ಟಂಪಾಡಿ ನಿವಾಸಿಗೆ ಪಾಸಿಟಿವ್ ಬಂದಿದೆ ಎಂದು ಪೌರಾಯುಕ್ತೆ ರೇಖಾ ಜೆ. ಶೆಟ್ಟಿ ತಿಳಿಸಿದ್ದಾರೆ.
    ತೆಂಕಿಲದ ಯುವತಿ, ಚಿಕ್ಕಮುಡ್ನೂರು ಸಾಲ್ಮರದ ಯುವಕ ಇನ್ನಿಬ್ಬರು ಸೋಂಕಿತರು. ಎಲ್ಲರ ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ.

    ಸೌದಿಯಲ್ಲಿ ಸಾವು
    ಬೆಳ್ತಂಗಡಿ: ಸೌದಿ ಅರೇಬಿಯಾದ ಜಿಝಾನ್ ಎಂಬಲ್ಲಿನ ಬೈಶ್‌ನ ಪೆಟ್ರೋಪೆಕ್ ಕಂಪನಿ ಉದ್ಯೋಗಿ, ನಾವೂರು ಗ್ರಾಮದ ಕೇಳ್ತಾಜೆ ನಿವಾಸಿ ಅಬ್ದುಲ್ ರಝಾಕ್ ಎಂಬುವರು ಶ್ವಾಸಕೋಶದ ತೊಂದರೆ ಮತ್ತು ಕೋವಿಡ್-19ಗೆ ತುತ್ತಾಗಿ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಪಾರ್ಥೀವ ಶರೀರ ಇಡಲಾಗಿದ್ದು, ಸೌದಿಯಲ್ಲೇ ಅಂತ್ಯಸಂಸ್ಕಾರ ನಡೆಯಲಿದೆ.

    ಕಾಸರಗೋಡಿನ ನಾಲ್ವರಿಗೆ ಸೋಂಕು
    ಕಾಸರಗೋಡು: ಜಿಲ್ಲೆಯ ನಾಲ್ವರ ಸಹಿತ ಕೇರಳದಲ್ಲಿ ಸೋಮವಾರ 121 ಮಂದಿಯಲ್ಲಿ ಕೋವಿಡ್-19 ರೋಗಬಾಧೆ ಕಾಣಿಸಿಕೊಂಡಿದೆ. 78 ಮಂದಿ ವಿದೇಶದಿಂದ, 26 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರು, ಇತರ ಐವರಿಗೆ ಸಂಪರ್ಕದಿಂದ ಸೋಂಕು ತಗುಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts