More

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 237 ಜನರಿಗೆ ಸೋಂಕು

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ 2 ತಿಂಗಳ ಮಗು ಸಹಿತ ಐವರು ಕೋವಿಡ್-19ಗೆ ಸಂಬಂಧಿಸಿ ಮೃತಪಟ್ಟಿದ್ದು, 237 ಮಂದಿಗೆ ಸೋಂಕು ತಗುಲಿದೆ. 109 ಮಂದಿ ಗುಣವಾಗಿ ಮನೆಗೆ ಮರಳಿದ್ದಾರೆ.
    ಬಂಟ್ವಾಳ ತಾಲೂಕಿನ ಪುಣಚದ ಅಜ್ಜಿನಡ್ಕ ನಿವಾಸಿ, ಪುತ್ತೂರು ನೆಹರು ನಗರದಲ್ಲಿ ವಾಸವಿದ್ದ 74 ವರ್ಷದ ವೃದ್ಧೆ ಅಸ್ತಮಾ, ಹೃದ್ರೋಗ ಸಹಿತ ಹಲವು ಕಾಯಿಲೆಗಳಿಂದ ಬಳಲುತ್ತಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಾಗಿ ಶುಕ್ರವಾರ ಮೃತಪಟ್ಟಿದ್ದರು.
    ಪಾರ್ಶ್ವವಾಯು, ನ್ಯುಮೋನಿಯಾ ಪೀಡಿತರಾಗಿ ಐಸಿಯುನಲ್ಲಿದ್ದ ಬೆಳ್ತಂಗಡಿಯ ಪಟ್ಣಶೆಟ್ಟಿ ಹೊಸಮನೆ ಕೇಳದ ಪೇಟೆಯ 67 ವರ್ಷ ವಯಸ್ಸಿನ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದಾರೆ. ಮಂಗಳೂರು ನಿವಾಸಿಗಳಾದ ಹೃದಯ ರೋಗ, ತೀವ್ರ ಕಿಡ್ನಿ ಸಂಬಂಧಿ ಕಾಯಿಲೆಯಿದ್ದ 49ರ ಮಹಿಳೆ, ಹೃದಯ ರೋಗ, ಶ್ವಾಸಕೋಶದ ಕಾಯಿಲೆಯಿದ್ದ 61ರ ಮಹಿಳೆ ಸಾವಿಗೀಡಾಗಿದ್ದಾರೆ. ಈ ಎಲ್ಲರಿಗೂ ಕೋವಿಡ್ ಖಚಿತಗೊಂಡಿದೆ.

    ಇದರೊಂದಿಗೆ ಜಿಲ್ಲೆಯಲ್ಲಿ ಮೃತರ ಸಂಖ್ಯೆ 76ಕ್ಕೆ ಏರಿಕೆಯಾಗಿದೆ. ಒಟ್ಟು ಕೋವಿಡ್ ಪ್ರಕರಣ 3311 ತಲುಪಿದೆ. ಖಾಸಗಿ ಆಸ್ಪತ್ರೆಯೂ ಸೇರಿದಂತೆ 109 ಮಂದಿ ಗುಣವಾಗಿ ಬಿಡುಗಡೆಯಾಗಿದ್ದಾರೆ. ಬಿಡುಗಡೆಯಾದವರ ಸಂಖ್ಯೆ 1387ಕ್ಕೇರಿದೆ. 1848 ಸಕ್ರಿಯ ಕೋವಿಡ್ ಪ್ರಕರಣಗಳಿವೆ.

    2 ತಿಂಗಳ ಮಗು ಮೃತ್ಯು
    ಪುತ್ತೂರು/ಮಂಗಳೂರು: ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಗ್ರಾಮದ ಕೋಟೇಲು ಸಮೀಪದ ಗಾಣದಕೊಟ್ಯ ಎಂಬಲ್ಲಿನ 2 ತಿಂಗಳ ಮಗು ಶನಿವಾರ ಮೃತಪಟ್ಟಿದೆ. ‘ಮಗುವಿಗೆ ಪಾಸಿಟಿವ್ ಬಂದಿದೆ. ಆದರೆ ಹೆತ್ತವರಿಗೆ ಇಬ್ಬರಿಗೂ ನೆಗೆಟಿವ್ ವರದಿ ಬಂದಿದೆ. ಅಲ್ಲದೆ 2 ತಿಂಗಳ ಮಗುವಾದ್ದರಿಂದ ಮೋರ‌್ಟಾಲಿಟಿ ಕಮಿಟಿಗೆ ನೀಡಲಾಗಿದೆ. ಅವರು ಕೇಸ್ ಸ್ಟಡಿ ನೋಡಿ ವರದಿ ನೀಡಿದ ಬಳಿಕ ಅಧಿಕೃತವಾಗಿ ತಿಳಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.
    ಗಾಣದಕೊಟ್ಯ ನಿವಾಸಿ ಚೆನ್ನಪ್ಪ ದೇವಾಡಿಗ ಎಂಬುವರ ಪುತ್ರಿ ಶ್ರೀಲತಾರನ್ನು ಮಂಗಳೂರಿನ ನಿವಾಸಿ ಅನೀಶ್ ಎಂಬುವರಿಗೆ ವಿವಾಹ ಮಾಡಿಕೊಡಲಾಗಿತ್ತು. ತವರು ಮನೆಗೆ ಆಗಮಿಸಿದ್ದ ಶ್ರೀಲತಾರಿಗೆ 2 ತಿಂಗಳ ಹಿಂದೆ ಹೆರಿಗೆಯಾಗಿತ್ತು. ಇತ್ತೀಚೆಗೆ ಮಗುವಿಗೆ ಜ್ವರ, ವಾಂತಿ ಹಾಗೂ ಕಫ ಸಮಸ್ಯೆಯಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳೂರಿನ ಬಜರಂಗದಳ ಕಾರ್ಯಕರ್ತರು ಮಗುವಿನ ಮೃತದೇಹವನ್ನು ನಂದಿಗುಡ್ಡೆ ಸ್ಮಶಾನದಲ್ಲಿ ದಫನ ಮಾಡಿದ್ದಾರೆ.

    ಪೊಲೀಸರು, 2 ವೈದ್ಯರಿಗೆ ಸೋಂಕು
    ಪುತ್ತೂರು/ಕುಂದಾಪುರ/ಪಡುಬಿದ್ರಿ: ಪುತ್ತೂರು ಉಪವಿಭಾಗದ ಹಿರಿಯ ಶ್ರೇಣಿಯ ಪೊಲೀಸ್ ಅಧಿಕಾರಿ ಹಾಗೂ ಖಾಸಗಿ ಆಸ್ಪತ್ರೆಯ ಓರ್ವ ವೈದ್ಯರ ಸಹಿತ ತಾಲೂಕಿನ 9 ಮಂದಿಗೆ ಸೋಂಕು ದೃಢಪಟ್ಟಿದೆ.
    ಕುಂದಾಪುರ ನಗರ ಠಾಣೆಯ 54 ವರ್ಷದ ಎಎಸ್‌ಐ ಒಬ್ಬರಿಗೆ ಕರೊನಾ ಪಾಸಿಟಿವ್ ಬಂದಿದ್ದು, ಒಂದು ದಿನದ ಮಟ್ಟಿಗೆ ಠಾಣೆಯನ್ನು ಐಬಿಗೆ ಸ್ಥಳಾಂತರಿಸಲಾಗಿದೆ. ಹೈವೇ ಪ್ಯಾಟ್ರೋಲ್ ಕರ್ತವ್ಯದಲ್ಲಿದ್ದ ಎಎಸ್‌ಐ ಜುಲೈ 10ರಿಂದ ಶಿಫ್ಟ್ ಕರ್ತವ್ಯದ ಹಿನ್ನೆಲೆ ಮನೆಯಲ್ಲಿದ್ದರು. ಆದರೆ ಇವರು ಕರ್ತವ್ಯದಲ್ಲಿದ್ದ ವಾಹನದ ಚಾಲಕ, ಇನ್ನೋರ್ವ ಎಎಸ್‌ಐಗೆ ಪಾಸಿಟಿವ್ ಬಂದಿದ್ದ ಹಿನ್ನೆಲೆ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು.
    ಪಡುಬಿದ್ರಿಯ ಕಾರ್ಕಳ ರಸ್ತೆಯ ವೈದ್ಯ, ಅವರ ಪತ್ನಿಗೆ ಸೋಂಕು ದೃಢಪಟ್ಟಿದೆ. ವೈದ್ಯರ ಚಿಕಿತ್ಸಾಲಯ ಮತ್ತು ಮನೆ ಸೀಲ್‌ಡೌನ್ ಮಾಡಲಾಗಿದೆ. ಕಾಪು ಠಾಣೆಯಲ್ಲಿ ಮತ್ತೆ ನಾಲ್ವರು ಪೊಲೀಸರಿಗೆ ಸೋಂಕು ದೃಢವಾಗಿದ್ದು, ಎಎಸ್‌ಐ ಸೇರಿದಂತೆ 9 ಜನರಿಗೆ ಸೋಕು ತಗುಲಿದಂತಾಗಿದೆ.
    ಕಾರ್ಕಳ ತಾಲೂಕಿನ ಸಚ್ಚೇರಿಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಡಿ ದರ್ಜೆ ಮಹಿಳಾ ಉದ್ಯೋಗಿಗೆ ಕೋವಿಡ್ ಸೋಂಕು ದೃಢವಾಗಿದ್ದು, ಆರೋಗ್ಯ ಕೇಂದ್ರವನ್ನು ಸೀಲ್‌ಡೌನ್ ಮಾಡಲಾಗಿದೆ.

    ಕಾಸರಗೋಡಿನಲ್ಲಿ ಮೊದಲ ಬಲಿ
    ಉಪ್ಪಳ: ಕೋವಿಡ್ ಬಾಧಿಸಿ ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಪ್ಪಳ ಹಿದಾಯತ್ ನಗರದ 74ರ ವೃದ್ಧೆ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ. ಕಾಸರಗೋಡಿನಲ್ಲಿ ಇದು ಮೊದಲ ಸಾವು ಪ್ರಕರಣ. ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಇವರ ಕುಟುಂಬದ 8 ಮಂದಿ ಹಾಗೂ ನೆರೆಮನೆಯ ವ್ಯಕ್ತಿಯೊಬ್ಬರಿಗೆ ಕರೊನಾ ದೃಢಪಟ್ಟಿದೆ. ಜಿಲ್ಲೆಯ 29 ಮಂದಿ ಸಹಿತ ಕೇರಳದಲ್ಲಿ 593 ಪಾಸಿಟಿವ್ ಶನಿವಾರ ದಾಖಲಾಗಿದೆ. ಇವರಲ್ಲಿ 364 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ.

    ಮಂಗಳೂರಲ್ಲಿ 13 ಅಂಚೆ ಕಚೇರಿ ಬಂದ್, ನಾಲ್ವರು ಸಿಬ್ಬಂದಿಗೆ ಪಾಸಿಟಿವ್
    ಮಂಗಳೂರು: ಒಂದೊಂದೇ ಇಲಾಖೆ ಸಿಬ್ಬಂದಿಗೆ ಕರೊನಾ ತಗುಲುತ್ತಿದ್ದು ಈಗ ಅಂಚೆ ಇಲಾಖೆ ಸರದಿ.
    ಈವರೆಗೆ ಒಟ್ಟು ನಾಲ್ವರು ಅಂಚೆ ಸಿಬ್ಬಂದಿಗೆ ಕರೊನಾ ದೃಢಪಟ್ಟಿದೆ. ಶನಿವಾರ ಪಾಂಡೇಶ್ವರ ಪ್ರಧಾನ ಅಂಚೆ ಕಚೇರಿಯ ಇಬ್ಬರಿಗೆ ಪಾಸಿಟಿವ್ ಬಂದಿರುವ ಕಾರಣ ಸೋಮವಾರದವರೆಗೆ 13 ಅಂಚೆ ಕಚೇರಿಗಳನ್ನು ಬಂದ್ ಮಾಡಲಾಗುತ್ತಿದೆ.
    ಮಂಗಳೂರಿನ ಪಾಂಡೇಶ್ವರದಲ್ಲಿರುವ ಪ್ರಧಾನ ಅಂಚೆ ಕಚೇರಿ, ಹಂಪನಕಟ್ಟೆ, ಅಶೋಕನಗರ, ಗಾಂಧಿನಗರ, ಬೋಳೂರು, ಕೂಳೂರು, ಕೊಂಚಾಡಿ, ಕಾವೂರು, ಬಿಜೈ, ಕೊಡಿಯಾಲ್‌ಬೈಲ್, ಫಳ್ನೀರ್, ಫಿಶರಿಸ್ ಕಾಲೇಜ್, ಮಂಗಳೂರು ಕಲೆಕ್ಟರ್ ಗೇಟ್, ಎಸ್‌ಓ ಅಂಚೆ ಕಚೇರಿಗಳು ಸೋಮವಾರ ಸಾರ್ವಜನಿಕ ಸೇವೆಗೆ ಲಭ್ಯವಿರುವುದಿಲ್ಲ.
    ಪಾಂಡೇಶ್ವರ ಕಚೇರಿಯ ಇಬ್ಬರು ಸಿಬ್ಬಂದಿ ನಗದು ಸಾಗಾಟ ಕರ್ತವ್ಯ ನಿರ್ವಹಿಸುತ್ತಿದ್ದು, ಮಂಗಳೂರಿನ ವಿವಿಧ ಅಂಚೆ ಕಚೇರಿಗೆ ತೆರಳಿ ನಗದು ವಹಿವಾಟು ನೋಡಿಕೊಳ್ಳುತ್ತಿದ್ದರು. ಈ 13 ಕಚೇರಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸ್ಯಾನಿಟೈಸೇಶನ್ ಮಾಡಲಾಗಿದೆ ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಎನ್. ತಿಳಿಸಿದ್ದಾರೆ.
    ಎನ್‌ಐಟಿಕೆ ಶ್ರೀನಿವಾಸ ನಗರದ ಅಂಚೆ ಕಚೇರಿ ಸಿಬ್ಬಂದಿಗೂ ಈ ಹಿಂದೆ ಪಾಸಿಟಿವ್ ಬಂದಿತ್ತು.

    ಎನ್‌ಎಂಪಿಟಿ ಕಂಟೈನರ್ ನಿರ್ವಹಣೆಗೆ ಜನರಿಲ್ಲ
    ನವಮಂಗಳೂರು ಬಂದರಿನಲ್ಲಿ ಕರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಂದರು ಕಾರ್ಯಭಾರದಲ್ಲಿ ವ್ಯತ್ಯಯ ಉಂಟಾಗಿದೆ.
    ಬಂದರಿನ ಕಂಟೈನರ್ ಸರಕು ನಿರ್ವಹಿಸುವ ಕಂಟೈನರ್ ರೀಸ್ಟಾಕರ್ ಯುನಿಟ್(ಕಂಟೈನರ್‌ಗಳನ್ನು ಹಡಗಿನಿಂದ ತೆಗೆದು ಟ್ರಕ್‌ಗೆ ಲೋಡ್ ಮಾಡುವ ಘಟಕ) ಎರಡು ದಿನಗಳಿಂದ ಬಂದ್ ಆಗಿದೆ. ಈ ಕೆಲಸ ಮಾಡುವ ಸಿಬ್ಬಂದಿಗೆ ಪಾಸಿಟಿವ್ ಆಗಿದ್ದು, ಘಟಕದ ಹಲವು ಸಿಬ್ಬಂದಿ ಒಟ್ಟಿಗೆ ವಾಸಿಸುತ್ತಾರೆ ಎಂಬ ಕಾರಣ ಅವರನ್ನು ಕೆಲಸಕ್ಕೆ ಬಾರದಂತೆ ಸೂಚಿಸಲಾಗಿದೆ. ಹೀಗಾಗಿ ಬಂದರಿನ ಆಮದು ರಫ್ತು ಕೆಲಸಕ್ಕೆ ಅಡ್ಡಿಯಾಗಿದೆ. ಖಾಸಗಿ ರಿಸ್ಟಾಕರ್‌ಗಳಿದ್ದರೂ ಅವರದ್ದೇ ಕೆಲಸದಲ್ಲಿರುವುದರಿಂದ ಸಾಮಾನ್ಯ ಕಂಟೈನರ್ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ.

    ಆಗಸ್ಟ್‌ವರೆಗೆ ಸವಾಲು: ಬಂದರಿನ ಅಗ್ನಿಶಾಮಕ ವಿಭಾಗ, ಕ್ರೇನ್ ವಿಭಾಗ ಹಾಗೂ ಈಗ ರಿಸ್ಟಾಕರ್ ವಿಭಾಗ ಸಹಿತ ಒಟ್ಟು 13 ಕರೊನಾ ಪ್ರಕರಣ ವರದಿಯಾಗಿದೆ. ಬಂದರು ಮಂಡಳಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದು, ಪ್ರಾಥಮಿಕ ಸಂಪರ್ಕದವರನ್ನೂ ಪ್ರತ್ಯೇಕಿಸಿ ಕ್ವಾರಂಟೈನ್ ಮಾಡಲಾಗಿದೆ. ಆಗಸ್ಟ್ ಕೊನೆಯವರೆಗೆ ಬಂದರು ನಿರ್ವಹಣೆ ಸವಾಲು ತಂದಿದೆ. ಖಾಸಗಿ ಕಾರ್ಗೊ ನಿರ್ವಹಣಾ ಯಂತ್ರೋಪಕರಣ ಘಟಕದವರಲ್ಲಿ ನಿರ್ವಹಣೆ ಮಾಡುವುದಕ್ಕೆ ಬೋರ್ಡ್ ಮೀಟಿಂಗ್‌ನಲ್ಲಿ ಅನುವು ಮಾಡಿಕೊಡಲಾಗಿದೆ ಎಂದು ಎನ್‌ಎಂಪಿಟಿ ಅಧ್ಯಕ್ಷ ಎ.ವಿ.ರಮಣ ತಿಳಿಸಿದ್ದಾರೆ.
    ಅಲ್ಲದೆ ಮುಂಗಾರು ಸಂದರ್ಭ ಮೀನುಗಾರರ ಟ್ರಾಲರ್ ದೋಣಿಗಳಿಗೆ ತಂಗುವುದಕ್ಕೆ ಅವಕಾಶ ಮಾಡಿಕೊಡುತ್ತಿದ್ದೇವೆ. ಇದಕ್ಕಾಗಿ 3 ತಿಂಗಳ ಹಿಂದೆಯೇ ಸಿದ್ಧತೆ ನಡೆದಿದ್ದು, ಪ್ರತ್ಯೇಕ ತಾತ್ಕಾಲಿಕ ಗೇಟನ್ನೇ ಅವರಿಗಾಗಿ ಮೀಸಲಿಟ್ಟಿದ್ದು ಇತರ ಬಂದರು ಸಿಬ್ಬಂದಿಗೆ ಸಂಪರ್ಕ ಬಾರದಂತೆ ಎಚ್ಚರ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts