More

    ನಾಗರಿಕ ಸಮಿತಿಯಿಂದ ನಿತ್ಯ 30 ಸಾವಿರ ಮಂದಿಗೆ ದಾಸೋಹ

    ತುಮಕೂರು: ಲಾಕ್‌ಡೌನ್ ಜಾರಿಯಿಂದ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಇದೆ. ನಿತ್ಯ ದುಡಿದು ಹೊಟ್ಟೆ ಹೊರೆಯುತ್ತಿದ್ದ ನಿರಾಶ್ರಿತರ, ಅನಾಥರ, ನಿರ್ಗತಿಕರ, ಕೂಲಿಕಾರ್ಮಿಕರ, ವಲಸಿಗರ ಹಸಿವು ನೀಗಿಸುವ ಕಾಯಕದಲ್ಲಿ ತುಮಕೂರು ನಾಗರಿಕ ಸಮಿತಿ ತೊಡಗಿಕೊಂಡಿದೆ. ಪ್ರತಿನಿತ್ಯ 30 ಸಾವಿರ ಮಂದಿಯ ಹೊಟ್ಟೆ ತುಂಬಿಸುವ ಮೂಲಕ ಜಿಲ್ಲಾಡಳಿತದ ಹೆಗಲ ಮೇಲಿದ್ದ ದೊಡ್ಡ ಜವಾಬ್ದಾರಿಯನ್ನು ಸಮಿತಿ ಹೊತ್ತುಕೊಂಡಿದೆ.

    ಹೋಟೆಲ್, ಉಪಹಾರ ಮಂದಿರಗಳು ತೆರೆಯುತ್ತಿಲ್ಲ. ಸಹಸ್ರಾರು ಜನರಿಗೆ ದುಡಿಮೆ ಇಲ್ಲ. ಇದರ ಜತೆಗೆ ಬೆಂಗಳೂರಿನಿಂದ ತಮ್ಮೂರುಗಳತ್ತ ಪಾದಯಾತ್ರೆ ಹೊರಟ್ಟಿದ್ದ ಬಡವರು, ಕೂಲಿ ಕಾರ್ಮಿಕರಿಗೂ ಆಶ್ರಯದ ಜತೆಗೆ ಮೂರು ಹೊತ್ತಿನ ಊಟದ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ, ಪೊಲೀಸ್ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿಗೂ ಅನ್ನದಾಸೋಹ ಮಾ.31 ರಿಂದ ನಿರಂತರವಾಗಿ ನಡೆಯುತ್ತಿದೆ.

    ವೀರಶೈವ ಸಮಾಜದ ನೇತೃತ್ವ: ತುಮಕೂರಿನ ಎಲ್ಲ ಜನಾಂಗದವರು, ಸಂಘ-ಸಂಸ್ಥೆಗಳು ಒಟ್ಟಿಗೆ ಕೈಜೋಡಿಸಿ ಆರಂಭಿಸಿರುವ ಈ ದಾಸೋಹ ಕೇಂದ್ರದ ಸಂಪೂರ್ಣ ನಿರ್ವಹಣೆ ಹೊಣೆಯನ್ನು ನಗರ ವೀರಶೈವ ಸಮಾಜ ನಿಭಾಯಿಸುತ್ತಿದೆ. ತಮ್ಮ ಕ್ಷೇತ್ರದಲ್ಲಿ ಯಾರೊಬ್ಬರೂ ಹಸಿವಿನಿಂದ ಬಳಲದಂತೆ ಕೈಗೊಂಡಿರುವ ಅನ್ನದಾಸೋಹಕ್ಕೆ ಕೊಂಚವೂ ವ್ಯತ್ಯಾಸವಾಗದಂತೆ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಟೊಂಕಕಟ್ಟಿ ನಿಂತಿದ್ದಾರೆ. ಮಂಡಿಪೇಟೆ, ಎಪಿಎಂಸಿ ಯಾರ್ಡ್ ವರ್ತಕರು, ದಾನಿಗಳ ಬಳಿಗೆ ಜೋಳಿಗೆ ಹಿಡಿದು ಶಾಸಕರು ದವಸದಾನ್ಯ ಸಂಗ್ರಹಿಸುತ್ತಿದ್ದು ದಾನಿಗಳು ಯಥೇಚ್ಛವಾಗಿ ದಾಸೋಹ ಕೇಂದ್ರಕ್ಕೆ ಆಹಾರ ಪದಾರ್ಥಗಳನ್ನು ನೀಡುತ್ತಿದ್ದಾರೆ.

    ಹೆಗ್ಗರೆಯಿಂದ ಹೀರೆಹಳ್ಳಿವರೆಗೆ!: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿನ ಅನ್ನದಾಸೋಹ ಕೇಂದ್ರದಲ್ಲಿ ಅತ್ಯಂತ ಶುಚಿತ್ವ ಕಾಪಾಡಿಕೊಳ್ಳಲಾಗಿದೆ. ಪ್ರತಿನಿತ್ಯ 3 ಹೊತ್ತು ಬಿಸಿಬೇಳೆಬಾತ್, ಪಲಾವ್, ಟೊಮ್ಯಾಟೊ ಬಾತ್ ತಯಾರಿಸಿ 30 ಸಾವಿರಕ್ಕೂ ಹೆಚ್ಚು ಮಂದಿಗೆ ಇಲ್ಲಿಂದ ಆಹಾರ ಪೂರೈಸಲಾಗುತ್ತಿದೆ. ಹೆಗ್ಗೆರೆಯಿಂದ ಹೀರೆಹಳ್ಳಿವರೆಗೆ, ಮೆಳೇಹಳ್ಳಿ ಯಿಂದ ಗೂಳೂರುವರೆಗೆ ಸಾವಿರಾರು ಜನಕ್ಕೆ ಪೂರೈಸಲಾಗುತ್ತಿದೆ. ನಿತ್ಯ ಎರಡು ಶಿಫ್ಟ್ ಗಳಲ್ಲಿ 22 ಬಾಣಸಿಗರು ಆಹಾರ ತಯಾರಿಕೆಯಲ್ಲಿ ತೊಡಗಿದ್ದಾರೆ ಎನ್ನುತ್ತಾರೆ ವೀರಶೈವ ಸಮಾಜದ ಜಂಟಿ ಕಾರ್ಯದರ್ಶಿ ಅತ್ತಿರೇಣುಕಾನಂದ.

    ಸೇವಾ ಕಾರ್ಯದಲ್ಲಿ ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್, ಉಪಾಧ್ಯಕ್ಷ ಎಸ್.ಜಿ. ಚಂದ್ರಮೌಳಿ, ಅತ್ತಿರೇಣುಕಾನಂದ, ನಿರ್ದೇಶಕ ಕೆ.ಜಿ.ಶಿವಕುಮಾರ್ ಸೇರಿ ಕಾರ್ಯಕಾರಿ ಮಂಡಳಿಯ ನಿರ್ದೇಶಕರು ಆಹಾರ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

    ಹರಿದುಬಂದ ಆಹಾರ ಪದಾರ್ಥ: ಧಾನ್ಯ ವರ್ತಕರ ಸಂಘದ ಜಿ.ಎಚ್.ಪರಮಶಿವಯ್ಯ, ಮಾಜಿ ಸಚಿವ ಸೊಗಡುಶಿವಣ್ಣ, ಮಧು ರಮೇಶ್, ದಕ್ಷಿಣಾ ಮೂರ್ತಿ, ನಿವೃತ್ತ ಡಿವೈಎಸ್‌ಪಿ ಜಗದೀಶ್, ಟಿವಿಸಿ ಬ್ಯಾಂಕ್ ರೇಣುಕಾರಾಧ್ಯ, ರೇಣುಕಾಬಾಬು, ಶ್ರೀಸಿದ್ದಲಿಂಗೇಶ್ವರ ರೈಸ್ ಮಿಲ್, ಗುರುರಾಜ ಫುಡ್ ಪ್ರಾಡಕ್ಟ್, ಸ್ವಾಮಿ ರೋಟರಿ, ಕಲ್ಕಿ ಬಾಬು, ಮಹೇಂದ್ರ ಕುಮಾರ್, ಟಿ.ಜೆ.ಸಿದ್ದಲಿಂಗಸ್ವಾಮಿ, ಕಾರ್ಪೋರೇಟರ್‌ಗಳಾದ ವಿಷ್ಣುವರ್ಧನ್, ಟಿ.ಎಂ.ಮಹೇಶ್, ಮಂಜುಳಾ, ಜೈನ ಸಮಾಜ, ತುಮಕೂರು ನಗರ ಔಷದಿ ವ್ಯಾಪಾರಿಗಳ ಸಂಘ ಹೀಗೆ ಎಲ್ಲ ಸಮಾಜ ಬಾಂಧವರು ದಾಸೋಹಕ್ಕೆ ಕೈಲಾದ ದಾನ ನೀಡಿದ್ದಾರೆ. ಜಿಲ್ಲಾಡಳಿತವೂ ಕೊಡುಗೆ ನೀಡಿದೆ.

    50 ಸಾವಿರ ದೇಣಿಗೆ : ದಾಸೋಹ ಕೇಂದ್ರಕ್ಕೆ ದಾನಿಗಳು ಅಕ್ಕಿ, ಬೇಳೆ, ಮಸಾಲೆ ಪದಾರ್ಥ, ತರಕಾರಿ ಸೇರಿ ಕೈಲಾದ ದಾನವನ್ನು ದೇಣಿಗೆ ರೂಪದಲ್ಲಿ ನೀಡುತ್ತಿದ್ದಾರೆ. ಈ ಸೇವಾ ಕಾರ್ಯಕ್ಕೆ ಮಾಜಿ ಶಾಸಕ ಎಸ್.ಷಫೀ ಅಹ್ಮದ್ ಹಾಗೂ ರಫೀಕ್ ಅಹ್ಮದ್ 50 ಸಾವಿರ ರೂ.,ಗಳ ಚೆಕ್ ಅನ್ನು ದೇಣಿಗೆ ರೂಪದಲ್ಲಿ ನೀಡಿ ಮಹತ್ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts