More

    ಸಂಪಾದಕೀಯ: ಇನ್ನು ಚುನಾವಣಾ ಚಿತ್ತ; ಅಧಿವೇಶನದಲ್ಲಿ ಹಲವು ಘೋಷಣೆ

    ರಾಜ್ಯ ವಿಧಾನಮಂಡಲ ಬಜೆಟ್ ಅಧಿವೇಶನ ಶುಕ್ರವಾರ ಮುಕ್ತಾಯವಾಗಲಿದೆ. ಮುಂದಿನ ಅಧಿವೇಶನ ಹೊಸ ಸರ್ಕಾರ ರಚನೆ ಆದಮೇಲೆ ನಡೆಯಲಿದ್ದು, ಈಗ ಜನಪ್ರತಿನಿಧಿಗಳು ವಿಧಾನಸಭಾ ಚುನಾವಣೆಗೆ ಸಜ್ಜಾಗಲು ವೇದಿಕೆ ಸುಗಮವಾದಂತಾಗಿದೆ. ಈಗಾಗಲೇ ಚುನಾವಣಾ ಪ್ರಚಾರದ ಕಾವು ಕ್ರಮೇಣ ಹೆಚ್ಚುತ್ತಿದ್ದು, ಶಾಸಕರೆಲ್ಲ ಸ್ವಕ್ಷೇತ್ರದತ್ತ ಮುಖಮಾಡಿದ ಮೇಲೆ ಈ ಬಿರುಸು ಇನ್ನಷ್ಟು ಹೆಚ್ಚಲಿದೆ. ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಲದ ಬಜೆಟ್​ನಲ್ಲಿ ಹಲವು ಹೊಸ ಯೋಜನೆ, ಕಾರ್ಯಕ್ರಮಗಳನ್ನು ಘೋಷಿಸಿದ್ದು, ಆ ಪೈಕಿ ಒಂದೆರಡನ್ನು ಬಜೆಟ್ ಭಾಷಣದಲ್ಲಿಯೂ ಪ್ರಸ್ತಾಪಿಸಿ ಯೋಜನೆ ಆರಂಭದ ಸುಳಿವು ನೀಡಿದ್ದಾರೆ.

    ಈ ಆಯವ್ಯಯ ಏಪ್ರಿಲ್ 1ರಿಂದ ಜಾರಿಯಾಗಬೇಕಿದ್ದು, ಅಂದಿನಿಂದ, ದುಡಿಯುವ ಮಹಿಳೆಯರಿಗೆ ಹಾಗೂ ಶಾಲಾಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಬಸ್​ಪಾಸ್ ಯೋಜನೆ ಚಾಲ್ತಿಗೆ ಬರಬೇಕೆಂದು ಮುಖ್ಯಮಂತ್ರಿಗಳು ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಿದ್ದಾರೆ. ಇದಲ್ಲದೆ, ಭೂರಹಿತ ಕೃಷಿ ಕಾರ್ವಿುಕ ಮಹಿಳೆಯರಿಗೆ ಮಾಸಿಕ ತಲಾ 500 ರೂ. ಧನಸಹಾಯದ ಯೋಜನೆಯನ್ನು ಬಜೆಟ್​ನಲ್ಲಿ ಪ್ರಕಟಿಸಿದ್ದರು. ಆ ಮೊತ್ತವನ್ನು 1,000 ರೂ.ಗೆ ಹೆಚ್ಚಿಸುವುದಾಗಿ ಗುರುವಾರ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸುವ ಸಂದರ್ಭದಲ್ಲಿ ತಿಳಿಸಿದರು. ಇದರ ಜತೆಗೆ, ರಾಷ್ಟ್ರೀಯ ಆರೋಗ್ಯ ಯೋಜನೆ (ಎನ್​ಎಚ್​ಎಂ) ಯಡಿ ನೇಮಕವಾದವರಿಗೆ ವೇತನ ಶೇ.15 ಹೆಚ್ಚಳ, ಅನುದಾನಿತ ಪದವಿ ಕಾಲೇಜುಗಳ ಬೋಧಕರಿಗೆ ನ್ಯಾಯಸಮ್ಮತ ಪರಿಹಾರದ ಭರವಸೆ, ಒಬಿಸಿ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸಮಸ್ಯೆಯಾಗಿರುವ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದು- ಇತ್ಯಾದಿ ಸಂಗತಿಗಳನ್ನು ಸಹ ಸದನದಲ್ಲಿ ಸರ್ಕಾರದ ಕಡೆಯಿಂದ ಪ್ರಕಟಿಸಲಾಯಿತು.

    ಈ ಅಧಿವೇಶನದಲ್ಲಿ ಖಾಸಗಿ ವಿಶ್ವವಿದ್ಯಾಲಯ ವಿಧೇಯಕ ಸೇರಿದಂತೆ ಹಲವು ಮಸೂದೆಗಳಿಗೆ ಅನುಮೋದನೆ ನೀಡಲಾಯಿತು. ಕಾರ್ವಿುಕರ ಕೆಲಸದ ಅವಧಿ ವಿಸ್ತರಣೆ ಕುರಿತ ಮಸೂದೆಗೆ ವಿಧಾನಸಭೆ ಅಸ್ತು ಎಂದಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಕಾರ್ವಿುಕರ ಕೆಲಸ ಅವಧಿಯಲ್ಲಿ ಒಂದಷ್ಟು ಬದಲಾವಣೆ ಸಾಧ್ಯತೆಗಳಿವೆ. ಕೃಷಿ ಇಂಜಿನಿಯರಿಂಗ್ ನಿರ್ದೇಶನಾಲಯ ಸ್ಥಾಪನೆ ಬಗ್ಗೆ ಪರಿಶೀಲನೆಗೆ ಸಮಿತಿ ರಚಿಸಲಾಗಿದ್ದು, ವರದಿ ಬಂದ ಮೇಲೆ ಕ್ರಮ, ರಾಜ್ಯದ ಗ್ರಾಮಠಾಣಾಗಳನ್ನು ಗುರುತಿಸಲು ಡ್ರೋನ್ ಮೂಲಕ ಸಮೀಕ್ಷೆ ಮಾಡುವುದು ಮುಂತಾದ ಪ್ರಕಟಣೆಗಳು ಸಹ ಹೊರಬಿದ್ದವು.

    ರಾಜ್ಯದ ಹಿರಿಯ ರಾಜಕೀಯ ನಾಯಕರಲ್ಲೊಬ್ಬರಾದ ಬಿ.ಎಸ್.ಯಡಿಯೂರಪ್ಪ ಅವರ ವಿದಾಯ ಭಾಷಣಕ್ಕೂ ಸದನ ಸಾಕ್ಷಿಯಾಯಿತು. ಬರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಬಿಎಸ್​ವೈ ಈಗಾಗಲೇ ಘೋಷಣೆ ಮಾಡಿರುವುದರಿಂದಾಗಿ ಅವರು ಮತ್ತೆ ವಿಧಾನಸಭೆ ಪ್ರವೇಶಿಸುವ ಸಾಧ್ಯತೆ ಇಲ್ಲ. ಆದರೆ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಶಾಸಕನಾಗಿ, ಸಚಿವನಾಗಿ, ವಿಪಕ್ಷ ನಾಯಕನಾಗಿ, ಮುಖ್ಯಮಂತ್ರಿಯಾಗಿ ಹೀಗೆ ಭಿನ್ನ ಪಾತ್ರಗಳಲ್ಲಿ ಮಿಂಚಿದ್ದ ಅವರಂಥ ಅನುಭವಿ ಹೋರಾಟಗಾರನ ಅನುಪಸ್ಥಿತಿ ಬಹುಕಾಲ ಸದನವನ್ನು ಕಾಡುವುದಂತೂ ಖರೆ. ಇನ್ನು, ಟಿಕೆಟ್ ಖಚಿತತೆ, ಕ್ಷೇತ್ರದಲ್ಲಿ ಜನಸಂಪರ್ಕ ಇತ್ಯಾದಿ ಬಗ್ಗೆ ಹೆಚ್ಚು ಗಮನಹರಿಸುವ ಜನಪ್ರತಿನಿಧಿಗಳು ಸೌಹಾರ್ದ ವಾತಾವರಣದಲ್ಲಿ, ಗದ್ದಲಗೌಜುಗಳಿಲ್ಲದೆ ಚುನಾವಣೆ ನಡೆಯುವ ನಿಟ್ಟಿನಲ್ಲಿ ತಮ್ಮ ಜವಾಬ್ದಾರಿ ನಿಭಾಯಿಸುವತ್ತಲೂ ಗಮನಹರಿಸಲಿ ಎಂಬುದು ಮತದಾರರ ಅಪೇಕ್ಷೆ-ನಿರೀಕ್ಷೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts